Advertisement

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

01:24 AM Sep 13, 2024 | Team Udayavani |

ನಾಗಮಂಗಲ (ಮಂಡ್ಯ): ಬುಧವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭ ಕೋಮುಸಂಘರ್ಷ ಏರ್ಪಟ್ಟ ಪರಿಣಾಮ ನಾಗಮಂಗಲ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

Advertisement

ಪರಿಸ್ಥಿತಿ ಹತೋಟಿಯಲ್ಲಿದ್ದರೂ ಸೆ. 14ರ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಗಲಭೆಯಲ್ಲಿ 6 ಅಂಗಡಿಗಳು ಸುಟ್ಟು ಕರಕಲಾಗಿವೆ. 7 ಬೈಕ್‌ ಹಾನಿಗೀಡಾಗಿವೆ. 1 ಕಾರಿನ ಗಾಜು ಪುಡಿಗೈಯಲಾಗಿದೆ.

ಪ್ರಕರಣ ಸಂಬಂಧ ಗುರುವಾರ 150 ಮಂದಿ ವಿರುದ್ಧ ನಾಗಮಂಗಲ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 53ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಲ್ಲಿ 23 ಮಂದಿ ಹಿಂದೂ ಹಾಗೂ 30 ಮಂದಿ ಮುಸ್ಲಿಂ ಯುವಕರಿದ್ದಾರೆ.

ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಪರಿಸ್ಥಿತಿ ಯಾವ ಸಂದರ್ಭದಲ್ಲಾದರೂ ಕೈಮೀರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಹೆಚ್ಚಿನ ಪಹರೆ ನಿಯೋಜನೆ ಮೂಲಕ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಡಲಾಗಿದೆ.

ಬಂಧಿತರ ಪೋಷಕರ ಪ್ರತಿಭಟನೆ
ಬುಧವಾರ ರಾತ್ರಿಯೇ ಪೊಲೀಸರು ಗಲಭೆಯಲ್ಲಿ ಭಾಗಿಯಾಗಿದ್ದ ಹಾಗೂ ಅನುಮಾನ ಇರುವವರ ಮನೆಗಳಿಗೆ ನುಗ್ಗಿ ಕರೆದೊಯ್ದಿ ದ್ದಾರೆ. ಇದರಿಂದ ಆತಂಕಗೊಂಡ ಬಂಧಿತರ ಹಿಂದೂ-ಮುಸ್ಲಿಂ ಸಮುದಾಯದ ಮಹಿಳೆ ಯರು ಪ್ರತ್ಯೇಕವಾಗಿ ಗುರುವಾರ ಬೆಳಗ್ಗೆಯೇ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

Advertisement

ಅಂಗಡಿ-ಮುಂಗಟ್ಟು ಬಂದ್‌
ಘರ್ಷಣೆಯಿಂದ ಭಯಭೀತರಾಗಿರುವ ಸಾರ್ವಜನಿಕರು ಹಾಗೂ ಅಂಗಡಿ- ಮುಂಗಟ್ಟುಗಳ ಮಾಲಕರು ಅಂಗಡಿ ತೆರೆಯಲು ಮುಂದಾಗಿಲ್ಲ. ಪಟ್ಟಣದಲ್ಲಿ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಪಟ್ಟಣ ವ್ಯಾಪ್ತಿಯ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.

ನಾಗಮಂಗಲ ಗಲಭೆಗೆ ರಾಜಕೀಯ ಕದನದ ಕಿಚ್ಚು:
ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮುಗಲಭೆ ನಡೆದ ಬೆನ್ನಲ್ಲೇ, ರಾಜಕೀಯ ಸಂಘರ್ಷ ಆರಂಭವಾಗಿದೆ. ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಕ್ರಮ ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಸಚಿವ ಪರಮೇಶ್ವರ್‌ ಇದು ಸಾಮಾನ್ಯ ಘಟನೆ ಎಂದಿರುವುದು ಬಿಜೆಪಿ, ಜೆಡಿಎಸ್‌ ಪಕ್ಷಗಳನ್ನು ರೊಚ್ಚಿಗೆಬ್ಬಿಸಿದೆ. ಇದು ಅತಿಯಾದ ತುಷ್ಟೀಕರಣದ ಫ‌ಲ ಎಂದಿವೆ.

ಎನ್‌ಐಎ ತನಿಖೆಯಾಗಲಿ: ಬಿಜೆಪಿ
ಕೋಮುಗಲಭೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಇದೇನು ನಾಗಮಂಗಲವೋ, ಪಾಕಿಸ್ಥಾನವೋ ಎಂದು ಬಿಜೆಪಿ ನಾಯಕ ವಿ. ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ. ಪ್ರಕರಣದ ಹಿಂದೆ ಕಾಂಗ್ರೆಸ್‌ ಇರುವ ಸಾಧ್ಯತೆಯಿದ್ದು ಎನ್‌ಐಎಯಿಂದಲೇ ತನಿಖೆ ಮಾಡಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಪೂರ್ವಯೋಜಿತ ಕೃತ್ಯ ಎಂದು ಪ್ರಹ್ಲಾದ್‌ ಜೋಶಿ ಕಿಡಿಕಾರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next