ಕೊಹಿಮಾ : ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ನಾಗಾಲ್ಯಾಂಡ್ ರಾಜ್ಯಪಾಲ ಪಿ ಬಿ ಆಚಾರ್ಯ ಅವರು ಶುರೋಝೆಲೀ ಲಿಝೆತ್ಸು ಅವರ ಸರಕಾರವನ್ನು ವಜಾ ಮಾಡಿದ್ದಾರೆ ಮತ್ತು ಹೊಸ ಮುಖ್ಯಮಂತ್ರಿಯಾಗಿ ಟಿ ಆರ್ ಝೆಲಿಯಾಂಗ್ ಅವರನು ನೇಮಿಸಿದ್ದಾರೆ.
ಇಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರು ಝೆಲಿಯಾಂಗ್ ಅವರನ್ನು ಸರಕಾರ ರಚಿಸಲು ಆಹ್ವಾನಿಸಿ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು. ಮಾತ್ರವಲ್ಲದೆ ಜು.22ರಂದು ಶನಿವಾರ ನಾಗಾಲ್ಯಾಂಡ್ ವಿಧಾನಸಭೆಯ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಅವರಿಗೆ ಸೂಚಿಸಿದರು.
ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರೋಝೆಲಿ ಲೀಝೆತ್ಸು ಮತ್ತು ಅವರ ಬೆಂಬಲಿಗರು ಇಂದು ಬಲಾಬಲ ಪರೀಕ್ಷೆಗಾಗಿ ಸದನಕ್ಕೆ ಬರಲಿಲ್ಲ; ಹಾಗಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ರಾಜ್ಯಪಾಲ ಪಿ ಬಿ ಆಚಾರ್ಯ ಅವರು ನಿನ್ನೆ ಮಂಗಳವಾರ ವಿಧಾನಸಭೆಯ ಸ್ಪೀಕರ್ ಇಮಿ¤ವಾಪಾಂಗ್ ಅವರಿಗೆ ಇಂದು ಬುಧವಾರ ಬೆಳಗ್ಗೆ 9.30ಕ್ಕೆ ಸದನದ ವಿಶೇಷ ಅಧಿವೇಶನ ನಡೆಸುವಂತೆ ಸೂಚಿಸಿದ್ದರು. ಆ ಪ್ರಕಾರ ಇಂದು ಸದನ ಕಲಾಪದಲ್ಲಿ ಬಲಾಬಲ ಪರೀಕ್ಷೆ ನಡೆಯುವುದಿತ್ತು. ಆದರೆ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರೇ ಸದನಕ್ಕೆ ಬರಲೇ ಇಲ್ಲ.
ಮುಖ್ಯಮಂತ್ರಿ ಶುರೋಝೆಲಿ ಲೀಝೆತ್ಸು ಅವರ ತಮ್ಮ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ನ ಬಂಡುಕೋರ ಶಾಸಕರಿಂದ ಬಂಡಾಯವನ್ನು ಎದುರಿಸುತ್ತಿದ್ದರು.
ಎನ್‌ಪಿಎಫ್ ಬಂಡುಕೋರ ಶಾಸಕರ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಟಿ ಆರ್ ಝೆಲಿಯಾಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಸದನದಲ್ಲಿ ಉಪಸ್ಥಿತರಿದ್ದರು.