ಕೊಹಿಮಾ(ದಿಮಾಪುರ್): ಗೋಣಿಚೀಲದಲ್ಲಿ ತುಂಬಿಸಿಟ್ಟಿದ್ದ ನಾಯಿಗಳ ಮಾರಾಟದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದ ಬಳಿಕ ನಾಗಲ್ಯಾಂಡ್ ಸರ್ಕಾರ ಅಧಿಕೃತವಾಗಿ ರಾಜ್ಯದಲ್ಲಿ ನಾಯಿ ಮಾಂಸ ಮಾರಾಟ ಹಾಗೂ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದೆ.
ಕಳೆದ ಕೆಲವು ವರ್ಷಗಳಿಂದ ನಾಯಿ ಮಾಂಸ ಮಾರಾಟದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಲೇ ಬಂದಿತ್ತು. ಅಲ್ಲದೇ ನಾಯಿ ಮಾಂಸ ಮಾರಾಟ ನಿಷೇಧದ ನಿರ್ಧಾರ ನಾಗಾಲ್ಯಾಂಡ್ ಸರ್ಕಾರ 2ನೇ ಬಾರಿ ತೆಗೆದುಕೊಂಡಂತಾಗಿದೆ. ಈ ಹಿಂದೆ ರಾಜ್ಯ ಸರ್ಕಾರ, ನಾಯಿ ಮಾಂಸ ಮಾರಾಟ ಮಾಡುವುದನ್ನು ನಿಲ್ಲಿಸಬೇಕೆಂದು ನಗರಾಭಿವೃದ್ಧಿ ಮಂಡಳಿಗೆ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ನಾಗಾಲ್ಯಾಂಡ್ ನ ದಿಮಾಪುರ್ ನಾಯಿ ಮಾರಾಟ ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ನಾಯಿಗಳನ್ನು ಗೋಣಿಚೀಲದಲ್ಲಿ ಹಿಡಿದಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಪ್ರಾಣಿ ದಯಾ ಸಂಘ ತಕ್ಷಣವೇ ನಾಯಿ ಮಾಂಸ ಮಾರಾಟ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ನಾಗಲ್ಯಾಂಡ್ ಸರ್ಕಾರಕ್ಕೆ ಒತ್ತಾಯಿಸಿತ್ತು.
ಈ ನಿಟ್ಟಿನಲ್ಲಿ ನಾಗಲ್ಯಾಂಡ್ ಸರ್ಕಾರ ಮಾರಾಟ ಉದ್ದೇಶಕ್ಕಾಗಿ ನಾಯಿಗಳ ಆಮದು ಮತ್ತು ನಾಯಿ ಮಾಂಸ ಮಾರಾಟ ನಿಷೇಧಿಸಿದೆ. ಬೇಯಿಸಿದ ಹಾಗೂ ಹಸಿ ಮಾಂಸ ಸೇರಿದಂತೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡ ನಾಗಲ್ಯಾಂಡ್ ಸಚಿವ ಸಂಪುಟದ ಕ್ರಮ ಮೆಚ್ಚುಗೆಯಾಗಿದೆ ಎಂದು ನಾಗಲ್ಯಾಂಡ್ ಮುಖ್ಯ ಕಾರ್ಯದರ್ಶಿ ಟೆಂಜೆನ್ ಟಾಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.