ಮಂಗಳೂರು: ಇಲ್ಲಿನ ಕೂಳೂರು ಮತ್ತು ಕೋಡಿಕಲ್ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಬೇರೆ ಕೃತ್ಯಗಳನ್ನು ತೊಡಗಿದ್ದು, ಪೊಲೀಸರ ಗಮನ ಬೇರೆಡೆ ಸೆಳೆಯಲು ಈ ನಾಗಬನ ಧ್ವಂಸ ಕೃತ್ಯ ನಡೆಸಿದ್ದರು ಎಂದು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ತಿಳಿಸಿದ್ದಾರೆ.
ಸಫಾನ್, ಪ್ರವೀಣ್ ಮೊಂತೆರೊ, ಮುಹಮ್ಮದ್ ಸುಹೇಲ್, ನಿಖಿಲೇಶ್, ಜಯಂತ್, ಮಂಜುನಾಥ್, ನೌಶಾದ್ ಮತ್ತು ಪ್ರತೀಕ್ ಬಂಧಿತ ಆರೋಪಿಗಳು. ಆರೋಪಿಗಳು ಕೂಳೂರು, ಕಾವೂರು ಪರಿಸರದವರಾಗಿದ್ದು, ಒಬ್ಬ ಆರೋಪಿ ಹಾಸನ ಮೂಲದಾತ ಎಂದು ತಿಳಿದು ಬಂದಿದೆ.
ಕೂಳೂರು ಮತ್ತು ಕೋಡಿಕಲ್ ನಲ್ಲಿ ಈ ತಂಡವೇ ಕೃತ್ಯ ನಡೆಸಿತ್ತು ಎಂದು ಆಯಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೇರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ತಂಡ ಪೊಲೀಸರ ದಿಕ್ಕು ತಪ್ಪಿಸಲು ಮತ್ತು ಶಾಂತಿ ಕದಡಲು ನಾಗಬನಗಳ ಧ್ವಂಸ ಮಾಡಿತ್ತು ಎಂದು ಅವರು ಮಾಹಿತಿ ನೀಡಿದರು.
ನವೆಂಬರ್ 13 ರಂದು ಕೋಡಿಕಲ್ ಮತ್ತು ಅಕ್ಟೋಬರ್ 23 ರಂದು ಕುಳೂರಿನಲ್ಲಿ ದುಷ್ಕರ್ಮಿಗಳು ಆಯುಧಗಳನ್ನು ಬಳಸಿ, ನಾಗನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಕಿಡಿಗೇಡಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಈ ಸಂದರ್ಭ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಕಮಿಷನರ್ 20,000 ರೂ.ನಗದು ಬಹುಮಾನವನ್ನು ನೀಡಿದರು.