ಉಡುಪಿ:ಸ್ವಚ್ಛ ಪರಿಸರದ ಆಶಯದೊಂದಿಗೆ ಹಬ್ಬ-ಹರಿದಿನಗಳನ್ನು ಪರಿಸರ ಸಂರಕ್ಷಣೆಯ ಅಭಿಯಾನದತ್ತ ಪುನರ್ ರೂಪಿಸಿಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಉದಯವಾಣಿ-ಉಡುಪಿ ನಗರಸಭೆ ಸ್ವಚ್ಛ ನಾಗರಪಂಚಮಿ ಅಭಿಯಾನ ಕಾರ್ಯಯೋಜನೆ ರೂಪಿಸಿದೆ.
ನಾಗರ ಪಂಚಮಿ ಹಬ್ಬದಲ್ಲಿ ಬತ್ತಿ, ಎಣ್ಣೆ, ಅಕ್ಕಿ, ಎಳನೀರು, ಊದು ಬತ್ತಿಗಳ ಪ್ಲಾಸ್ಟಿಕ್ ಪೊಟ್ಟಣಗಳು ಒಂದೆಡೆ ಬಿದ್ದಿದ್ದರೆ, ಮತ್ತೊಂದೆಡೆ ಎಳನೀರು ಚಿಪ್ಪುಗಳು ಬಿದ್ದಿರುತ್ತವೆ.
ಡೆಂಗ್ಯೂ, ಮಲೇರಿಯ ಇನ್ನಿತರ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
ಈ ನಿಟ್ಟಿನಲ್ಲಿ ನಾಗಬನಗಳಲ್ಲಿ ಉಂಟಾಗುವ ತ್ಯಾಜ್ಯ ಸಂಗ್ರಹಕ್ಕೆ ನಗರಸಭೆ ವತಿಯಿಂದಲೇ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.
ನಗರಸಭೆ ನಗರದ 35 ವಾರ್ಡ್‌ಗಳಲ್ಲಿ ಸಾರ್ವಜನಿಕ ನಾಗಬನಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಿಗೆ ನಗರಸಭೆಯ ಡಸ್ಟ್‌ಬಿನ್ ಮತ್ತು ಚೀಲದ ವ್ಯವಸ್ಥೆ ಕೊಡಲಾಗುತ್ತದೆ. ನಗರಸಭೆ ಸ್ವಚ್ಛತಾ ತಂಡ ವಾಹನದ ಮೂಲಕ ನಾಗಬನಗಳಿಂದ ಹಸಿ ತ್ಯಾಜ್ಯಗಳನ್ನು ಕೊಂಡೊಯ್ಯುತ್ತಾರೆ. ಇದೇ ಮಾದರಿಯಲ್ಲಿ ನಾಡಿನ ಎಲ್ಲ ನಗರ ಮತ್ತು ಗಾಮ ಸ್ಥಳೀಯಾಡಳಿತ ಸಂಸ್ಥೆಗಳು ತ್ಯಾಜ್ಯ ಸಂಗ್ರಹಕ್ಕೆ ಮಾದರಿ ವ್ಯವಸ್ಥೆ ರೂಪಿಸಿ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ವಿಶೇಷ ಕೊಡುಗೆ ಸಲ್ಲಿಸಬಹುದಾಗಿದೆ.