Advertisement

ನಾಡು-ನುಡಿ-ಸಂಸ್ಕೃತಿ ಅಭಿಮಾನ ಬೆಳೆಯಲಿ

03:51 PM Dec 02, 2017 | |

ಗೊರೇಬಾಳ: ನಾಡಿನ ಪ್ರತಿಯೊಬ್ಬರಲ್ಲೂ ನಾಡು, ನುಡಿ, ಸಂಸ್ಕೃತಿ, ಪರಂಪರೆ ಬಗ್ಗೆ ಗೌರವಾಭಿಮಾನ ಬೆಳೆಯಬೇಕು. ಅಂದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿದರು.

Advertisement

ಕರವೇ ಗ್ರಾಮ ಘಟಕ ಹಾಗೂ ಕನ್ನಡ ಜನಪರ ವೇದಿಕೆ ಆಶ್ರಯದಲ್ಲಿ ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಸಹೃದಯತೆ, ಆತಿಥ್ಯ ಸತ್ಕಾರ ಮತ್ತು ಸಹಬಾಳ್ವೆಗೆ ಕನ್ನಡಿಗರು ಹೆಸರಾದವರು. ವಿವಿಧ ರಾಜ್ಯಗಳ ಜನರು ಕರ್ನಾಟಕದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿರುವುದೇ ಇದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಇಲ್ಲಿನ ಒಂಭತ್ತು ಜನ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂಗತಿ. ರಾಜ್ಯೋತ್ಸವ ಎಂದರೆ ಪ್ರತಿಯೊಬ್ಬರ ಮನೆ-ಮನಗಳಲ್ಲಿ ಹಬ್ಬದ ವಾತಾವರಣ
ನಿರ್ಮಾಣವಾಗಬೇಕು ಎಂದರು.

ಉಪನ್ಯಾಸಕ ಡಾ| ಹುಸೇನಪ್ಪ ಅಮರಾಪುರ ಮಾತನಾಡಿ ಕನ್ನಡಿಗರು ಜಗತ್ತಿನಲ್ಲಿ ಮಾದರಿಯಾಗಿದ್ದಾರೆ. ಇಡೀ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಮತ್ತು ಗೌರವ ಕನ್ನಡಕ್ಕಿದೆ. ಬ್ರಿಟೀಷರು ದೇಶ ಬಿಟ್ಟು ಹೋದರೂ
ಅವರ ಭಾಷೆ ವ್ಯಾಮೋಹ ಮಾತ್ರ ನಮ್ಮಿಂದ ಹೋಗಿಲ್ಲ. ಜನರಿಗೆ ಅನ್ಯಭಾಷೆಗಳ ಮೇಲಿನ ಪ್ರಭಾವದಿಂದಾಗಿ ಕನ್ನಡ ಭಾಷೆ ತೆರೆಮರೆಗೆ ಸರಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೆಂಕಟಗಿರಿ ಕ್ಯಾಂಪಿನ ಸದಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಗೋಪಿನೇಡು ಕೃಷ್ಣ, ತಾಪಂ ಸದಸ್ಯೆ ಜಹಿರಾಬೇಗಂ ಖಾಸಿಂಸಾಬ್‌, ಗ್ರಾಪಂ ಅಧ್ಯಕ್ಷೆ ಅಂಬಮ್ಮ ಶೇಖರಪ್ಪ, ಉಪಾಧ್ಯಕ್ಷೆ ಟಿ.ಮಲ್ಲಮ್ಮ ಯಲ್ಲಪ್ಪ, ತಾಪಂ ಮಾಜಿ ಸದಸ್ಯ ಈ. ಸುಬ್ಬರಾವ್‌, ಕಜವೇ ಜಿಲ್ಲಾಧ್ಯಕ್ಷ ರಬ್ಟಾನಿ ಜಾಗೀರದಾರ, ಕರವೇ ತಾಲೂಕು ಅಧ್ಯಕ್ಷ ಗಂಗಣ್ಣ ಡಿಶ್‌, ದಾವಲಸಾಬ್‌ ದೊಡ್ಡಮನಿ, ಕಜವೇ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ ಉಪ್ಪಾರ ಸೇರಿದಂತೆ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Advertisement

ಮೆರವಣಿಗೆ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಗ್ರಾಮದ ಆರೋಗ್ಯ ಇಲಾಖೆ ಆಯುಷ್‌ ವೈದ್ಯ ಬಸವರಾಜ ಅಂಗಡಿ, ಆರೋಗ್ಯ ಸಹಾಯಕಿ ಈರಮ್ಮ ಬಸವರಾಜ, ವಿದ್ಯುತ್‌ ಇಲಾಖೆ ಲೈನ್‌ಮೆನ್‌ ಶರಣಬಸವ ಹಿರೇಮಠ, ಗ್ರಾಪಂ ದಿನಗೂಲಿ ನೌಕರ ದುರುಗಮ್ಮ, ಗುರುಸಿದ್ದೇಶ್ವರ ಪ್ರೌಢಶಾಲೆ ಶಿಕ್ಷಕ ಮರಿಸ್ವಾಮಿ ಹಾಗೂ ಪತ್ರಕರ್ತ ಇನಾಯತ್‌ ಪಾಷಾರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next