Advertisement

ಕುಸಿಯುವ ಭೀತಿಯಲ್ಲಿ ನಾಡೋಳಿ ಸೇತುವೆ

12:59 PM May 19, 2018 | |

ಸವಣೂರು: ಎರಡು ಭಾಗವಾಗಿ ಹಂಚಿಕೆಯಾಗಿದ್ದ ಪಾಲ್ತಾಡಿ ಗ್ರಾಮವನ್ನು ಒಂದುಗೂಡಿಸಿದ ನಾಡೋಳಿ ಸೇತುವೆ ಈಗ ಕುಸಿಯುವ ಭೀತಿಯಲ್ಲಿದ್ದು ಜನತೆ ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಗ್ರಾಮಗಳ ವಿಭಜನೆಯಿಂದಾಗಿ ಪುತ್ತೂರು ತಾಲೂಕಿನ ಕೊಳ್ತಿಗೆ, ಸವಣೂರು, ಪುಣ್ಚಪ್ಪಾಡಿ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳಿಗೆ ಹಂಚಿಕೆಯಾಗಿ ಉಳಿದ ಭಾಗವೇ ಪಾಲ್ತಾಡಿ ಎಂಬುದು ಹಿರಿಯರ ಅಭಿಮತ. ಅದಕ್ಕೆ ತಕ್ಕಂತೆ ಹೆಸರೂ ಕೂಡ ಪಾಲ್‌ತ+ಅಡಿ (ಪಾಲಿನ ಅಡಿ) ಇದೆ.

Advertisement

ಹೀಗೆ ಭೌಗೋಳಿಕವಾಗಿ ಇಬ್ಭಾಗಿಸಿ ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣ ಸ್ತಬ್ಧಗೊಳಿಸುತ್ತಿದ್ದ ಗೌರಿ ಹೊಳೆಗೆ ಅಡ್ಡವಾಗಿ ನಾಡೋಳಿಯಲ್ಲಿ ನಿರ್ಮಿಸಿದ ಘನ ವಾಹನ ಸಂಚರಿಸುವಷ್ಟು ಸಾಮರ್ಥ್ಯದ ಸೇತುವೆ ಈಗ ಕುಸಿತದ ಭೀತಿ ಎದುರಿಸುತ್ತಿದೆ. ಈ ಸೇತುವೆಯ ಪಿಲ್ಲರ್‌ಗಳ ಕಾಂಕ್ರೀಟ್‌ ಸಂಪೂರ್ಣವಾಗಿ ಎದ್ದು ಹೋಗಿ ಕಬ್ಬಿಣದ ಸರಳು ಕಾಣಿಸುತ್ತಿದೆ.ಕಬ್ಬಿಣದ ಸರಳು ಕೂಡ ತುಕ್ಕು ಹಿಡಿದಿದ್ದು ಅಪಾಯವನ್ನು ಎದುರಿಸುತ್ತಿದೆ.

ಸಂಪರ್ಕ ಕಡಿತ ಭೀತಿ
ಈ ರಸ್ತೆಯ ಮೂಲಕ ಪಾಲ್ತಾಡಿ, ಉಪ್ಪಳಿಗೆ, ಮಾಡಾವು, ಮಣಿಕ್ಕರ, ತಾರಿಪಡ್ಪು, ಅಂಕತ್ತಡ್ಕ, ಜಾಣಮೂಲೆ, ಅರೆಪ್ಪಳ ಮೊದಲಾದೆಡೆಯಿಂದ ಮಂಜುನಾಥನಗರ, ಬಂಬಿಲ ಮೂಲಕ ಸವಣೂರನ್ನು ಸಂಪರ್ಕಿ ಸಲು, ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ,  ಮಂಜುನಾಥನಗರ ಸರಕಾರಿ ಪ್ರೌಢ ಶಾಲೆ, ಹಿ. ಪ್ರಾ. ಶಾಲೆ, ಸಿದ್ದಿವಿನಾಯಕ ಸಭಾಭವನ, ಭಜನಾ ಮಂದಿರ, ಮಹಾದೇವಿ ದೇವಸ್ಥಾನ ಬಂಬಿಲ ಮೊದಲಾದೆಡೆ ಸಂಪರ್ಕಿಸಲು ಈ ಸೇತುವೆಯ ಮೂಲಕವೇ ಸಾಗಬೇಕಿದೆ.

ಪಿಲ್ಲರ್‌ನ ಸ್ಥಿತಿಯನ್ನು ಗಮನಿಸುವಾಗ ಈ ಬಾರಿಯ ಮಳೆಗಾಲದಲ್ಲಿ ಕುಸಿಯುವ ಸಾಧ್ಯತೆ ಇದ್ದು, ಅಪಾಯವನ್ನು ತಂದೊಡ್ಡಿದೆ. ಈ ಸೇತುವೆ ಸಂದರ್ಭದಲ್ಲೂ ಕುಸಿಯಬಹುದು ಎನ್ನುತ್ತಾರೆ ಸ್ಥಳೀಯರು.

ರಸ್ತೆಗೆ 2 ಕೋಟಿ ಅನುದಾನ
ಅಂಕತ್ತಡ್ಕ -ಮಂಜುನಾಥನಗರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಿಆರ್‌ಎಫ್‌ ನಿಧಿಯಿಂದ 2 ಕೋಟಿ ಅನುದಾನ ಮಂಜೂರುಗೊಂಡಿದೆ. ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಪಾಲ್ತಾಡಿ ಗ್ರಾಮದವರೇ ಆಗಿರುವ ಸಂಸದ ನಳಿನ್‌ ಕುಮಾರ್‌ ತಿಳಿಸಿದ್ದಾರೆ.

Advertisement

ನೂತನ ಸೇತುವೆಗೆ ಬೇಕು ಅನುದಾನ
ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿದೆ ಈ ಸಂದರ್ಭದಲ್ಲೇ ನೂತನ ಸೇತುವೆ ನಿರ್ಮಾಣಕ್ಕೂ ಸಂಬಂಧಪಟ್ಟ ಇಲಾಖೆ ಅನುದಾನ ಬಿಡುಗಡೆ ಮಾಡಿದರೆ ಸಹಕಾರಿಯಾಗಬಹುದು. ಸೇತುವೆಯ ಸ್ಥಿತಿಯನ್ನು ಗಮನಿಸುವಾಗ ಈ ಬಾರಿಯ ಮಳೆಗಾಲದಲ್ಲೇ ಕುಸಿಯುವ ಭೀತಿ ಇದೆ. 
ಉದಯ್‌ ಬಿ.ಆರ್‌.
   ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ
   ಕಾರ್ಯದರ್ಶಿ

ಶಾಸಕರು ಪ್ರಯತ್ನಿಸಲಿ
ಒಟ್ಟಿನಲ್ಲಿ ಇಲಾಖೆ ಆಧ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಿದೆ.ಸುಳ್ಯ ಶಾಸಕ ಎಸ್‌.ಅಂಗಾರ ಅವರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು.
ಹರಿಪ್ರಸಾದ್‌ ಪಾಲ್ತಾಡಿ
   ಗ್ರಾಮಸ್ಥ 

ಮೇಲಧಿಕಾರಿಗಳಿಗೆ ತಿಳಿಸಲಾಗಿದೆ
ನಾಡೋಳಿ ಸೇತುವೆಯ ದುಃಸ್ಥಿತಿಯ ಕುರಿತು ಜಿ.ಪಂ. ಇಂಜಿನಿಯರಿಂಗ್‌ ವಿಭಾಗದವರಿಗೆ ತಿಳಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಲವು ಸಮಯಗಳಿಂದ ಸಂಬಂಧಪಟ್ಟವರ ಗಮನ ಸೆಳೆಯಲಾಗುತ್ತಿದೆ. 
– ಇಂದಿರಾ ಬಿ.ಕೆ.
 ಅಧ್ಯಕ್ಷರು ಸವಣೂರು ಗ್ರಾ.ಪಂ.

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next