Advertisement

ನಾಡೋಜ ಪಾಪು ಇನ್ನು ನೆನಪು ಮಾತ್ರ

10:06 AM Mar 18, 2020 | mahesh |

ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ “ಪಾಪು’ ಎಂದೇ ಖ್ಯಾತರಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವಿಧಿವಶರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಜೀವನದ ವಿವಿಧ ಘಟ್ಟದ ಮೆಲುಕು ಇಲ್ಲಿದೆ.

Advertisement

ಜನನ: 14-1-1921ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕು ಕುರಬಗೊಂಡ
ತಂದೆ: ಸಿದ್ಧಲಿಂಗಪ್ಪ
ತಾಯಿ: ಮಲ್ಲಮ್ಮ
ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ, ಹಲಗೇರಿ, ಬ್ಯಾಡಗಿ, ಹಾವೇರಿ, ಧಾರವಾಡ
ರಾಷ್ಟ್ರೀಯ ಪ್ರಭಾವ: 1930ರಲ್ಲಿ “ನಹಿ ರಖನಾ ನಹಿ ರಖನಾ ಅಂಗ್ರೇಜ’ ಸರಕಾರ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್‌ ಮಾಡಿದ್ದು, ಜವಾಹರಲಾಲ್‌ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930ರಿಂದ ಸಂಪೂರ್ಣ ಖಾದಿ ಧಾರಣೆ. 1934ರಲ್ಲಿ ಮಹಾತ್ಮಾ ಗಾಂಧೀಜಿ ಹರಿಜನ ಪ್ರವಾಸ ಕೈಗೊಂಡು
ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದು, ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ. 1937ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ.
ಪತ್ರಿಕೋದ್ಯಮ: ಹಾವೇರಿಯಲ್ಲಿ ಓದುತ್ತಿರುವಾಗ “ನಮ್ಮ ನಾಡು’ ಕೈಬರಹದ ಪತ್ರಿಕೆಯ ಪ್ರಕಟನೆ 1936.

ಕಾಲೇಜು: ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939. ಅದೇ ವರ್ಷ ಉಡುಪಿಯ “ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಕುರಿತ ಲೇಖನ. 1941ರಲ್ಲಿ “ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ.ಕೆ. ವೆಂಕಟರಾಮಯ್ಯ ಅವರ ಅಬ್ರಹಾಂ ಲಿಂಕನ್‌ ಕುರಿತು “ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದರು. ಬೇಂದ್ರೆಯವರ ನಿಸರ್ಗ ಕವಿತೆಗಳು -ಜೀವನದಲ್ಲಿ ಸುದೀರ್ಘ‌ ಲೇಖನ. ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿ 1942.
ಚಲೇಜಾವ್‌ ಚಳವಳಿ: 1942ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ “ಆಪಾದನೆಗಾಗಿ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಿದರು. ಭೂಗತ ಕಾರ್ಯಕರ್ತರಾಗಿ ಕೆಲಸ.

ಕಾನೂನು ಕಾಲೇಜು: 1943ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆ. 1945ರಲ್ಲಿ ಕಾನೂನು ಪದವೀಧರ.
ಮದುವೆ: 1945ರಲ್ಲಿ ನವೆಂಬರ್‌ 11ರಂದು ವಿಜಾಪುರದ ಡಾ| ಬಿ.ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ.
ಮಕ್ಕಳು: ಮಂಜುಳಾ, ಶೈಲಜಾ, ಅಶೋಕ
ಮುಂಬಯಿ ವಾಸ್ತವ್ಯ: 1945ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ. ಅಲ್ಲಿ ನಿವೃತ್ತ ಜಸ್ಟಿಸ್‌ ಜಹಗೀರದಾರರ ಚೇಂಬರಿನಲ್ಲಿ, ಡಾ| ತೆಂಡೂಲಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಹೇಳಿದರು. ಫ್ರೀಪ್ರಸ್‌ ಜರ್ನಲ್‌, ಬಾಂಬೈ ಕ್ರಾನಿಕಲ್‌ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ. ಕೆ. ಸದಾನಂದರು “ಫ್ರೀಪ್ರಸ್‌’ ಸೇರುವಂತೆ ಒತ್ತಾಯಪಡಿಸಿದರು. ಕೆ.ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸ ಬೇಕೆಂದ ಪತ್ರಿಕೆಗೆ ಸಂಪಾದಕನಾಗಬೇಕೆಂದು ಹೇಳಿದರು.
ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಆಯೋಜಿಸಿ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ. ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದುದು, 1946 ಅಗಸ್ಟ್‌ ಮುಂಬಯಿ ಮಂತ್ರಿ ಎಂ.ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್‌ ಮಂತ್ರಿ ಕೆ.ಆರ್‌. ಕಾರಂತರು ಉದ್ಘಾಟಕರಾಗಿದ್ದರು.
ಪತ್ರಿಕೋದ್ಯಮ: ವಾರ ಪತ್ರಿಕೆ “ವಿಶಾಲ ಕರ್ನಾಟಕ’ದ ಸಂಪಾದಕತ್ವ. ಅನಂತರ ಅದು ಅಗಸ್ಟ್‌ 9, 1947ರಂದು ದಿನಪತ್ರಿಕೆಯಾಯಿತು.

ಏಕೀಕರಣ: 1949ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಮೈಸೂರು ಸಹಿತ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು.

Advertisement

ಸರದಾರ ಪಟೇಲ: ಬಿ.ಎನ್‌. ದಾತಾರ ನೇತೃತ್ವದಲ್ಲಿ ಮಂಗಳವೀಡು
ಶ್ರೀನಿವಾಸ ರಾವ್‌, ಕುಮಾರ ಕಲ್ಲೂರ, ವೆಂಕಟೇಶ ಮಾಗಡಿ, ವಿನೀತ ರಾಮಚಂದ್ರ ರಾವ್‌, ಪಾಟೀಲ ಪುಟ್ಟಪ್ಪ, ಕರ್ನಾಟಕ ಏಕೀಕರಣಕ್ಕೋಸುಗ ಒತ್ತಾಯಿಸಲು ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟಿ ಮಾಡಿದರು.

ಅಮೆರಿಕೆಗೆ ಪ್ರಯಾಣ: 1949ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ. ಅಮೆರಿಕೆಯಲ್ಲಿ ವಿಲ್‌ ಡುರ್‍ಯಾಂಟ್‌, ರಾಬರ್ಟ ಹಚಿನ್ಸ್‌, ಜಸ್ಟಿಸ್‌ ಫ್ರಾಂಕ್‌ಫ‌ರ್ಟರ್‌, ಐನ್‌ಸ್ಟಾಯಿನ್‌ ಮೊದಲಾದವರ ಭೇಟಿ. ಬರುವಾಗ ಹಡಗಿನಲ್ಲಿ ಸರ್‌ ಎಂಥನೀ ಈಡನ್‌ರ ಸಂದರ್ಶನ.

ನವಯುಗ ಪತ್ರಿಕೆ: 1953ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ “ನವಯುಗ ದಿನಪತ್ರಿಕೆಯ ಸಂಪಾದಕತ್ವ. ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರ ಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ್‌ ಸುದ್ದಿ ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಬಂದಿತು.
“ಪ್ರಪಂಚದ ಆರಂಭ: 1954 ಮಾರ್ಚ್‌ 10ರಂದು ಬಂಡವಾಳ ಯಾವುದೂ ಇಲ್ಲದೆ ಕೇವಲ ಲೆಕ್ಕಣಿಕೆಯಿಂದ “ಪ್ರಪಂಚ ವಾರ ಪತ್ರಿಕೆಯ ಆರಂಭ. ಡಿವಿಜಿ ಆಗ ಕಳಿಸಿದ ಸಂದೇಶದಲ್ಲಿ ಹೇಳಿದರು: “ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’
ಪ್ರಥಮ ಕನ್ನಡ: 1956 ಅಗಸ್ಟ್‌ ನೂತನ ಪ್ರಥಮ ಡೈಜೆಸ್ಟ್‌ “ಸಂಗಮ’ ಪ್ರಕಟಿಸಿದರು. ಜನರಲ್‌ ಕಾರಿಯಪ್ಪ ಡೈಜಿಸ್ಟ್‌ ಅವರಿಂದ ಬಿಡುಗಡೆ.

ಕರ್ನಾಟಕ ಮೆಡಿಕಲ್‌: ಹುಬ್ಬಳ್ಳಿಯ ಸರಕಾರಿ ವೈದ್ಯಕೀಯ ಕಾಲೇಜಿಗೆ “ಕರ್ನಾಟಕ ಮೆಡಿಕಲ್‌ ಕಾಲೇಜು’ ಎಂದು ಹೆಸರು ಕೊಡಿಸಿದುದು 1958ರಲ್ಲಿ.
ವಿಶ್ವವಾಣಿ ದಿನಪತ್ರಿಕೆ: “ವಿಶ್ವವಾಣಿ’ ಪತ್ರಿಕೆಯನ್ನು ಅಗಸ್ಟ್‌ 31, 1959ರಲ್ಲಿ ಆರಂಭಿಸಿದರು.
ಕ.ವಿ.ವಿ. ಸಿಂಡಿಕೇಟ್‌: 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್‌ ಸಿಂಡಿಕೇಟ್‌ ಸದಸ್ಯರಾಗಿ ಆಯ್ಕೆ.
ರಾಜ್ಯಸಭೆಯ ಸದಸ್ಯತ್ವ: 1962 ಮಾರ್ಚ್‌ನಲ್ಲಿ ರಾಜ್ಯಸಭೆಯ ಸದಸ್ಯ ರಾಗಿ ಆಯ್ಕೆಯಾದರು. ಸದಸ್ಯತ್ವ 1974ರ ವರೆಗೆ ಇದ್ದಿತು.
ಕ.ವಿ.ವ. ಸಂಘ: ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967ರಲ್ಲಿ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದಾರೆ.
ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಷ್‌ ಸರಕಾರಗಳ ಆಮಂತ್ರ ಣದ ಮೇರೆಗೆ 1965ರಲ್ಲಿ ಆ ದೇಶಗಳಿಗೆ ಸಂದರ್ಶನ. 1988ರಲ್ಲಿ ಸೋವಿಯತ್‌ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾಕ್ಕೆ ಭೇಟಿ.
ಗೋಕಾಕ ವರದಿ: 1982ರಲ್ಲಿ ಗೋಕಾಕ ವರದಿಯ ಬಗೆಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ. ಆಂದೋಲನ, ಸಂಘಟನೆ, ಸರಕಾರ ಗೋಕಾಕ ವರದಿಯನ್ನು
ಒಪ್ಪುವಂತೆ ಮಾಡಿದರು.

ಕನ್ನಡ ಕಾವಲು: 1985ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು.
ಪುಸ್ತಕಗಳು: “ನನ್ನದು ಈ ಕನ್ನಡ ನಾಡು’, “ನಮ್ಮದು ಈ ಭರತ ಭೂಮಿ ‘, “ಕರ್ನಾಟಕದ ಕಥೆ’, “ಸೋವಿಯತ್‌ ದೇಶ ಕಂಡೆ’, “ಸಾವಿನ ಮೇಜವಾನಿ’, “ಗವಾಕ್ಷ ತೆರೆಯಿತು’, “ಶಿಲಾಬಾಲಿಕೆ ನುಡಿದಳು “ಕಲಾ ಸಂಗಮ’, “ಬೆಳೆದ ಬದುಕು’, “ಭಾರತದ ಬೆಳಕು’, “ನೆಲದ ನಕ್ಷತ್ರಗಳು’, “ಸರ್‌ ಸಾಹೇಬರು’, “ಹೊಸಮನಿ ಸಿದ್ದಪ್ಪ’, “ಪ್ರಪಂಚ ಪಟುಗಳು’, “ನಮ್ಮ ಜನ ನಮ್ಮ ದೇಶ’, “ಈಗ ಹೊಸದನ್ನು ಕಟ್ಟೋಣ’, “ಪಾಪು ಪ್ರಪಂಚ’, “ಬದುಕುವ ಮಾತು’, “ಅಮೃತವಾಹಿನಿ’, “ವ್ಯಕ್ತಿ ಪ್ರಪಂಚ’, “ಸುವರ್ಣ ಕರ್ನಾಟಕ’ ಮುಂತಾದ 50ಕ್ಕಿಂತಲೂ ಹೆಚ್ಚು ಕೃತಿಗಳು.

ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ 1976, ಟಿ.ಎಸ್‌.ಆರ್‌. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್‌ ಗೌರವ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿ ಪುರಸ್ಕೃತರು.

Advertisement

Udayavani is now on Telegram. Click here to join our channel and stay updated with the latest news.

Next