ಬೆಂಗಳೂರು: ಸಾವಯವ ಕೃಷಿಯಲ್ಲಿ ಖ್ಯಾತಿ ಗಳಿಸಿದ್ದ ಹಿರಿಯ ಪ್ರಗತಿಪರ ಕೃಷಿಕ, ನಾಡೋಜ ಎಲ್.ನಾರಾಯಣ ರೆಡ್ಡಿ (83ವರ್ಷ) ಸೋಮವಾರ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರೆಡ್ಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ. ಜಪಾನ್ ನ ಫುಕುವೋಕಾ ಅವರ ಕೃಷಿ ಪದ್ಧತಿಯಿಂದ ಪ್ರೇರಿತರಾಗಿದ್ದ ರೆಡ್ಡಿ ಅವರು ರಾಜ್ಯದ ಎಲ್ಲೆಡೆ ಅದನ್ನು ಅಳವಡಿಸಲು ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದ್ದರು ಎಂದು ಸಿಎಂ ತಮ್ಮ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಕೃಷಿ ರಂಗದಲ್ಲಿ ಮಾರ್ಗದರ್ಶಕರಾಗಿದ್ದ ನಾರಾಯಣ ರೆಡ್ಡಿಯವರು ದೊಡ್ಡಬಳ್ಳಾಪುರ ಸಮೀಪದ ಸೋರಹುಣಸೆ ಗ್ರಾಮದಲ್ಲಿ ನೆಲೆಸಿದ್ದ ಇವರು ಸಾವಯವ ಕೃಷಿ ಸಾಧನೆಗಾಗಿ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದರು.
ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ರೆಡ್ಡಿಯವರಿಗೆ ಹಂಪಿ ವಿವಿ ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಎಚ್.ಡಿ.ಚೌಡಯ್ಯ ಪ್ರತಿಷ್ಠಾನ ಪ್ರಶಸ್ತಿ, ಡಾ.ಆರ್.ದ್ವಾರಕನಾಥ್ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.