ಕೊಪ್ಪಳ: ನಾಡೋಜ, ಹೋರಾಟಗಾರ ಡಾ| ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಗಣನೀಯವಾಗಿದ್ದು, ಸರ್ಕಾಗಳು ಅವರ ಸೇವೆ ಗುರುತಿಸಬೇಕೆಂದು ದಾವಣಗೆರೆ ಜಿಲ್ಲೆ ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಆಹಿಸಿದರು.
ಸುರ್ವೆ ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ಗುರುವಾರ ನಡೆದ ಡಾ|ವಿ.ಕೃ. ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಹಾಗೂ ಡಾ|ಪಾಟೀಲ ಪುಟ್ಟಪ್ಪ ಅವರ ಜನ್ಮಶತಮಾನೋತ್ಸವ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಇಂಗ್ಲಿಷ್ ಶಾಲೆಗಳ ಆರಂಭಕ್ಕೆ ಪ್ರಭಲವಾಗಿ ವಿರೋಧಿಸಿದ್ದ ಪಾಪು ಕನ್ನಡ ಬಗೆಗಿನ ಅಭಿಮಾನ ತೋರಿದ್ದರು. ಕನ್ನಡದ ಮೇಲಿನ ಅವರ ಪ್ರೀತಿ ಅಗಾಧವಾಗಿದ್ದು, ನಿಜಕ್ಕೂ ಮೆಚ್ಚುವಂತಹದ್ದು. ಪತ್ರಕರ್ತ, ಹೋರಾಟಗಾರರಾಗಿ, ಸಾಹಿತಿಯಾಗಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಹಿರಿಯ ಚೇತನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸಬೇಕಿದೆ. ನಾವೆಲ್ಲ ಅವರ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ ಎಂದರು. ಅವರು ಬರೆಯುತ್ತಿದ್ದ ‘ಪಾಪು ಪ್ರಪಂಚ’ ಚೆನ್ನಾಗಿ ಮೂಡಿ ಬರುತ್ತಿತ್ತು. ಮಾಜಿ ಸಂಪಾದಕ ಖಾದ್ರಿ ಶಾಮಣ್ಣ ಅವರು ಯಾವ ರೀತಿ ನಿರ್ಭಿತಿಯಿಂದ ಸಂಪಾದಕೀಯ ಬರೆಯುತ್ತಿದ್ದರೋ, ಅವರಿಗಿಂತ ಹರಿತವಾದ ಬರವಣಿಗೆ ಪುಟ್ಟಪ್ಪ ಅವರದ್ದಾಗಿತ್ತು. ಪ್ರಮುಖವಾಗಿ ಒಬ್ಬ ಪತ್ರಕರ್ತನಿಗೆ ಇರಬೇಕಾದ ನಿಖರತೆ, ನಿಷ್ಟುರತೆ, ಎದೆಗಾರಿಕೆ ಪಾಪು ಅವರಲ್ಲಿದ್ದವು. ಹಾಗಾಗಿಯೇ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಯಿತು ಎಂದರು.
ನಾವಿಂದು ಕನ್ನಡ ಪದ ನಾಶ ಮಾಡುವ ವ್ಯವಸ್ಥೆಯಲ್ಲಿದ್ದೇವೆ. ನಮ್ಮ ಕನ್ನಡ ಭಾಷೆ ಮಾತೃಭಾಷೆ, ಪ್ರೀತಿಯ ಭಾಷೆಯಾದರೂ ಕನ್ನಡದ ಕಗ್ಗೊಲೆಯಾಗುತ್ತಿದೆ. ಆದರೆ, ಕನ್ನಡದ ಅಸ್ಮಿತೆಗಾಗಿ ಪುಟ್ಟಪ್ಪ ಅವರು ತಮ್ಮ ಜೀವನ ಸವೆಸಿದ್ದಾರೆ. ಕುವೆಂಪು ಅವರಷ್ಟೇ ಸಮಾನ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆಗೆ ತೊಂದರೆಯಾದಾಗ ನಿರ್ಭೀತಿಯಿಂದ ಹೋರಾಡಿದ ಕೀರ್ತಿ ಪುಟ್ಟಪ್ಪ ಅವರಿಗೆ ಸಲ್ಲುವುದರಿಂದ ಸರ್ಕಾರಗಳು ಇವರಿಗೆ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ನಾಡೋಜ ಡಾ|ಪಾಟೀಲ ಪುಟ್ಟಪ್ಪನವರು ವಿ.ಕೃ. ಗೋಕಾಕ ಕುರಿತಂತೆ ಮಾತನಾಡಿದರು. ಕಸಾಪ ಕೇಂದ್ರ ಸಮಿತಿಯ ಡಾ| ಶೇಖರಗೌಡ ಮಾಲಿ ಪಾಟೀಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪತ್ರಕರ್ತ ಸೋಮರಡ್ಡಿ ಅಳವಂಡಿ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿಯವರ ಹೋರಾಟದ ಬದುಕು ಮತ್ತು ಪತ್ರಿಕೋದ್ಯಮ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಚಲನಚಿತ್ರ ನಟಿ ಡಿ.ವಿ.ಸೌಜನ್ಯ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಕಾರ್ಯಕ್ರಮ ಸಂಘಟಕ ರಮೇಶ ಸುರ್ವೆ, ಸಾಹಿತಿ ಬಿ.ಎನ್.ಹೊರಪೇಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.