ಜಮ್ಮು-ಕಾಶ್ಮೀರ: ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕ ಜಾಲಕ್ಕೆ ಭಾರತದ ಭದ್ರತಾ ಪಡೆ ದೊಡ್ಡ ಹೊಡೆತ ಕೊಟ್ಟಿದೆ. ಭದ್ರತಾ ಪಡೆಯ ಮೇಲೆ ನಡೆಸಿದ ಹಲವಾರು ದಾಳಿ ಪ್ರಕರಣದಲ್ಲಿ ಶಾಮೀಲಾಗಿದ್ದ ಲಷ್ಕರ್ ಎ ತೊಯ್ಬಾದ(ಎಲ್ ಇಟಿ) ಕಮಾಂಡರ್ ನದೀಮ್ ಅಬ್ರಾರ್ ನನ್ನು ಸೋಮವಾರ ಭದ್ರತಾ ಪಡೆ ಬಂಧಿಸಿದೆ.
ಇದನ್ನೂ ಓದಿ:ಸಂಸದ ನಳಿನ್ ಕುಮಾರ್ ಕಟೀಲು ಸಹೋದರ ನವೀನ್ ಕುಂಜಾಡಿ ನಿಧನ
ಲಷ್ಕರ್ ಎ ತೊಯ್ಬಾ ಟಾಪ್ ಕಮಾಂಡರ್ ನದೀಮ್ ಅಬ್ರಾರ್ ನನ್ನು ಬಂಧಿಸಲಾಗಿದೆ. ಈತ ಹಲವಾರು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದು, ನಮ್ಮ ಕಾರ್ಯಾಚರಣೆ ಸಿಕ್ಕ ದೊಡ್ಡ ಯಶಸ್ಸು ಇದಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಲಷ್ಕರ್ ಕಮಾಂಡರ್ ನದೀಮ್ ಬಂಧನದಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ. ಮೂಲಗಳ ಪ್ರಕಾರ, ಭದ್ರತಾ ಪಡೆಗಳು ಅಬ್ರಾರ್ ಮತ್ತು ಮತ್ತೊಬ್ಬ ಶಂಕಿತನನ್ನು ನಗರದ ಹೊರವಲಯದ ಪಾರಿಂಪೋರಾ ಚೆಕ್ ಪಾಯಿಂಟ್ ನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀನಗರದ ಪಾರಿಂಪೋರಾ ಬಳಿಯ ಅನ್ಸಾರಿ ಟೊಯೊಟಾ ಕ್ರಾಸಿಂಗ್ ಸಮೀಪ ಆಲ್ಟೋ ಕಾರಿನಲ್ಲಿದ್ದ ಬುಡ್ಗಾಮ್ ನಿವಾಸಿ ನದೀಮ್ ಅಬ್ರಾರ್ ನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಬ್ರಾರ್ ಜೆಕೆ 05ಇ-5646 ಸಂಖ್ಯೆಯ ಕಾರಿನಲ್ಲಿ ತನ್ನ ಸಹಚರನ ಜತೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಪಡೆಗಳು ತಡೆದ ಸಂದರ್ಭದಲ್ಲಿ ಬಂಧನಕ್ಕೀಡಾಗಿದ್ದ ಎಂದು ಮೂಲಗಳು ವಿವರಿಸಿದೆ.