Advertisement

ಬಿಜೆಪಿಯಲ್ಲಿ ಬಂಡಾಯ ಯತ್ನ ನಡೆದಿತ್ತೇ?

01:11 PM Mar 05, 2017 | Team Udayavani |

ಹುಬ್ಬಳ್ಳಿ: ಮಹಾಪೌರ ಸ್ಥಾನ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಸದಸ್ಯರೊಬ್ಬರು ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದರೆ? ಮಹಾಪೌರ-ಉಪಮಹಾಪೌರ ಆಯ್ಕೆ ಚುನಾವಣೆ ವೇಳೆ ಪಾಲಿಕೆ ಸಭಾಭವನದಲ್ಲಿ ಕಾಂಗ್ರೆಸ್‌ ನಾಯಕರು ಇಂತಹ ಗಂಭೀರ ವಿಷಯ ಪ್ರಾಸ್ತಾಪಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

Advertisement

ಬಿಜೆಪಿ ನಾಯಕರಿಗೆ ಇದು ಆಘಾತ ಸೃಷ್ಟಿಸಿತು ಎನ್ನಲಾಗಿದೆ. ಮಹಾಪೌರ ಸ್ಥಾನಕ್ಕೆ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಒಡ್ಡಿದ್ದ ಆಕಾಂಕ್ಷಿಯೊಬ್ಬರು ಕಾಂಗ್ರೆಸ್‌ನವರನ್ನು ಸಂಪರ್ಕಿಸಿ, ಮಹಾಪೌರ ಸ್ಥಾನಕ್ಕೆ ತಮ್ಮನ್ನು ಪರಿಗಣಿಸದಿದ್ದರೆ ಬಂಡಾಯ ಸಾರುವೆ. ನೀವು ಬೆಂಬಲ ನೀಡುವಂತೆ ಕೇಳಿದ್ದರೆನ್ನಲಾಗಿದೆ.

ಈ ವಿಷಯ ಬಿಜೆಪಿ ನಾಯಕ ಸಮ್ಮುಖದಲ್ಲೇ ಪಾಲಿಕೆ ಸಭಾಭವನದಲ್ಲಿ ಶನಿವಾರ ಕಾಂಗ್ರೆಸ್‌ನವರಿಂದ ಪ್ರಸ್ತಾಪಗೊಂಡಿದ್ದು, ನಿಜಕ್ಕೂ ಇಂತಹ ಯತ್ನ ನಡೆದಿತ್ತೇ ಅಥವಾ ಕಾಂಗ್ರೆಸ್‌ನವರು ತಮಾಷೆಗೆ ಇದನ್ನು ಪ್ರಸ್ತಾಪಿಸಿದರೆ? ಕೆಲ ಮೂಲಗಳ ಪ್ರಕಾರ ಬಿಜೆಪಿ ಸದಸ್ಯನ ಹೇಳಿಕೆಯನ್ನು ಕಾಂಗ್ರೆಸ್‌ನವರು ಗಂಭೀರವಾಗಿ ಪರಿಗಣಿಸಿ ತಯಾರಿಗೂ ಮುಂದಾಗಿದ್ದರು ಎನ್ನಲಾಗುತ್ತಿದೆ.

ಆಗಿದ್ದೇನು?: ಮಹಾಪೌರ-ಉಪ ಮಹಾಪೌರ ಆಯ್ಕೆಗೆಂದು ಪಾಲಿಕೆ ಸಭಾಭವನದಲ್ಲಿ ಸೇರಿದ್ದ ಕಾಂಗ್ರೆಸ್‌ ನಾಯಕರು ಬಿಜೆಪಿ ಸದಸ್ಯ ಶಿವಾನಂದ ಮುತ್ತಣ್ಣವರ ಅವರನ್ನು ಉದ್ದೇಶಿಸಿ ಬಂಡಾಯ ಹೇಳಿಕೆ ಕುರಿತಾಗಿ ಪ್ರಸ್ತಾಪಿಸಿದರು ಎನ್ನಲಾಗಿದೆ. ಮಹಾಪೌರ ಸ್ಥಾನಕ್ಕೆ ಬಿಜೆಪಿಯಲ್ಲಿ ಆರೇಳು ಆಕಾಂಕ್ಷಿಗಳ ತೀವ್ರ ಪೈಪೋಟಿಯಲ್ಲಿ ಶಿವಾನಂದ ಮುತ್ತಣ್ಣವರ ಪ್ರಮುಖರಾಗಿದ್ದರು.

ಅವರು ಒಂದು ಹೆಜ್ಜೆ ಮುಂದೆ ಹೋಗಿ ಮಹಾಪೌರ ಆಯ್ಕೆ ಚುನಾವಣೆಯ ಎರಡು ದಿನ ಮೊದಲು ಸುದ್ದಿಗೋಷ್ಠಿ ನಡೆಸಿ ತಾವು ಮಹಾಪೌರ ಸ್ಥಾನಕ್ಕೇರುವುದು ಖಚಿತ, ಈ ಬಗ್ಗೆ ಪಕ್ಷದ ನಾಯಕರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಸ್ಪಷ್ಟ ಭರವಸೆ ನೀಡಿದ್ದಾರೆ.

Advertisement

50 ವರ್ಷಗಳಿಂದ ಕುರುಬ ಸಮಾಜಕ್ಕೆ ಮಹತ್ವದ ಅಧಿಕಾರ ಸಿಕ್ಕಿಲ್ಲ ಎಂಬುದನ್ನು ಪ್ರಸ್ತಾಪ ಮಾಡಿದ್ದರು. ಮಾ. 3ರಂದು ಶಿವಾನಂದ ಮುತ್ತಣ್ಣವರ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಿಜೆಪಿ ನಾಯಕರಾದ ಜಗದೀಶ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ತಮಗೆ ಮಹಾಪೌರ ಸ್ಥಾನ ನೀಡುವಂತೆ ಒತ್ತಡ ತಂದಿದ್ದರು. 

ನಾಲ್ಕು ಸದಸ್ಯರನ್ನು ತರುವೆ ಎಂದಿದ್ದರೇ?: ಕಾಂಗ್ರೆಸ್‌ನವರ ಪ್ರಕಾರ, ಪಾಲಿಕೆಯ ಬಿಜೆಪಿ ಸದಸ್ಯ ಶಿವಾನಂದ ಮುತ್ತಣ್ಣವರ ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರನ್ನು ಸಂಪರ್ಕಿಸಿ, ತಮ್ಮನ್ನು ಮಹಾಪೌರ ಸ್ಥಾನಕ್ಕೆ ಪಕ್ಷ ಪರಿಗಣಿಸದಿದ್ದರೆ ನಾಲ್ವರು ಸದಸ್ಯರೊಂದಿಗೆ ಬರುತ್ತೇನೆ. ಮಹಾಪೌರ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ್ದರು ಎನ್ನಲಾಗಿದೆ. 

ಬಿಜೆಪಿಯಿಂದ ಅಧಿಕಾರ ಕಸಿಯಬಹುದು ಎಂಬ ಉದ್ದೇಶದಿಂದ ಕಾಂಗ್ರೆಸ್‌ ನಾಯಕರಿಂದಲೂ ಈ ಪ್ರಸ್ತಾಪಕ್ಕೆ ಹಸಿರು ನಿಶಾನೆ ಸಿಕ್ಕಿದ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಮುಖಂಡರು ಪಾಲಿಕೆಯ ಪಕ್ಷದ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಶಿವಾನಂದ ಮುತ್ತಣ್ಣವರ ಬಂಡಾಯವಾಗಿ ಸ್ಪರ್ಧಿಸಿದರೆ ಬೆಂಬಲಿಸುವ  ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ.

ಠುಸ್‌ ಪಟಾಕಿ: ಅಂತಿಮವಾಗಿ ಬಿಜೆಪಿಯಲ್ಲಿ ಬಂಡಾಯ ಎಂಬುದು ಠುಸ್‌ ಪಟಾಕಿಯಾಗಿದೆ. ಆದರೆ, ಬಿಜೆಪಿಯಲ್ಲಿ ಬಂಡಾಯದ ಚಿಂತನೆ ಮೈದಳೆದಿತ್ತೇ ಎಂಬುದು ಗಂಭೀರ ವಿಷಯ. ಕಾಂಗ್ರೆಸ್‌ನವರು ಶನಿವಾರ ಪಾಲಿಕೆ ಸಭಾಭವನದಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲೇ ಏನೋ ಆಗುತ್ತದೆ ಅಂದುಕೊಂಡಿದ್ದೆವು. ನೀವೇನೂ ಮಾಡಲಿಲ್ಲ. ಕಾಂಗ್ರೆಸ್‌ -ಜೆಡಿಎಸ್‌ ಸೇರಿ ಬೆಂಬಲ ನೀಡುತ್ತಿತ್ತು. ಧೈರ್ಯ ಮಾಡಲೇ ಇಲ್ಲವಲ್ಲ ಎಂದು ಛೇಡಿಸಿದಾಗ, ಸದಸ್ಯ ಶಿವಾನಂದ ಮುತ್ತಣ್ಣವರ ಮೌನಕ್ಕೆ ಜಾರಿದ್ದರು ಎನ್ನಲಾಗಿದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next