Advertisement
ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಆಚರಿಸಲಾದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಂಗಳವಾರ ಚಾಲನೆ ನೀಡಿದ ಅವರು, “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುವ ಪ್ರತಿಮೆ ಮುಂಭಾಗ ಕೆಂಪೇಗೌಡರ ಸಾಧನೆ ಕುರಿತ ಮಾಹಿತಿ ಫಲಕವೂ ಇರಲಿದೆ ಎಂದು ತಿಳಿಸಿದರು.
Related Articles
Advertisement
ಕೆಂಪೇಗೌಡರು ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತರಾದವರಲ್ಲ. ಜಾತ್ಯತೀತವಾಗಿ ಆಡಳಿತ ನಡೆಸಿ ಬೆಂಗಳೂರಿನ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದವರು. ಅವರ ಐಕ್ಯ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಕೆಂಪೇಗೌಡ ಜಯಂತಿ ದಿನವನ್ನು ಸಂಶೋಧಕರೊಂದಿಗೆ ಚರ್ಚಿಸಿ ತೀರ್ಮಾನಿಸುವಂತೆ ಆದಿಚುಂಚನಗಿರಿ ಮಠಾಧಿಪತಿಗಳಿಗೆ ಮನವಿ ಮಾಡಲಾಗಿತ್ತು.
ಅವರು ಗೊತ್ತುಪಡಿಸಿದಂತೆ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಅದರಂತೆ ಇನ್ನು ಮುಂದೆ ಪ್ರತಿ ವರ್ಷ ಕೆಂಪೇಗೌಡ ಜಯಂತಿ ನಡೆಯಲಿದೆ. ಅದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೆಂಪೇಗೌಡರ ಕಾಲದಲ್ಲಿ ಕೆರೆಗಳನ್ನು ಕಟ್ಟಿದರೆ ಈಗಿನ ಕಾಲದಲ್ಲಿ ಕೆರೆ ಕಟ್ಟೆಗಳನ್ನು ನುಂಗುವವರಿದ್ದಾರೆ. ಹೀಗಾಗಿ ಬಹಳಷ್ಟು ಕೆರೆಗಳಿಗೆ ಸಂಪರ್ಕ ಕಲ್ಪಿಸಿದ್ದ ರಾಜ ಕಾಲುವೆಗಳು ಮುಚ್ಚಿ ಹೋಗಿವೆ. ಗಾಬೇìಜ್ ಸಿಟಿ ಎಂಬ ಮಾತನ್ನು ದೂರವಾಗಿಸಿ ಉದ್ಯಾನನಗರಿಯನ್ನಾಗಿ ರೂಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಸರ್ಕಾರದಿಂದ ಶ್ರೇಷ್ಠ ನಿರ್ಧಾರ: ದೇವೇಗೌಡ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, “ಇಂತಹ ಅಪೂರ್ವ ಘಳಿಗೆ ಬರುತ್ತದೆ ಎಂದು ಊಹಿಸಿರಲಿಲ್ಲ. ರಾಜ್ಯಾದ್ಯಂತ ಹಲವು ಸಂಘ ಸಂಸ್ಥೆಗಳ ಸಂಘಟಿತ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಆಚರಿಸುವ ಶ್ರೇಷ್ಠ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಇದೊಂದು ಶ್ರೇಷ್ಠ ಕಾರ್ಯ ಎಂದು ಹೇಳಿದರು.
ಕೆಂಪೇಗೌಡರು ನೀಡಿದ ಆಡಳಿತವನ್ನು ಇಂದಿನ ವ್ಯವಸ್ಥೆಯನ್ನು ಎಲ್ಲರೂ ಗಮನಿಸಬೇಕು. ಕೆಂಪೇಗೌಡರ ಕಾಲದ ಬೆಂಗಳೂರಿಗೂ ಇಂದಿನ ಬೆಂಗಳೂರಿಗೂ ಹೋಲಿಸಲಾಗದು. ಇಂದಿನ ಬೆಂಗಳೂರು ಕೆಂಪೇಗೌಡರ ಕಾಲದ ಗಡಿಗೋಪುರಗಳನ್ನು ಮೀರಿ ಬೆಳೆದಿದೆ. ಕೆಂಪೇಗೌಡರು ಕಟ್ಟಿಸಿದ ಕೆರೆಗಳಲ್ಲಿ ಬಹಳಷ್ಟು ಕಣ್ಮರೆಯಾಗಿದ್ದು, ಇದಕ್ಕೆ ಯಾರೂ ಹೊಣೆಗಾರರಲ್ಲ ಎಂದರು.
ಕೇಂದ್ರದ ಮಾಜಿ ಸಚಿವ ಚೌಧರಿ ಅಜಿತ್‌ಸಿಂಗ್ ಅವರ ಕಾಲದಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನಿಡಲಾಯಿತು. ಇದೀಗ ರಾಜ್ಯ ಸರ್ಕಾರ ಕೆಂಪೇಗೌಡ ಜಯಂತಿ ಆಚರಣೆಗೆ ಚಾಲನೆ ನೀಡಿದ್ದು, ಪ್ರತಿ ವರ್ಷ ನಡೆಯಲಿದೆ. ಬೆಂಗಳೂರಿನ ಗಾರ್ಡನ್ ಸಿಟಿ ಹೆಸರು ಮಾಯವಾಗುತ್ತಿದ್ದು, ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು ಎಂದು ದೇವೇಗೌಡರು ಹೇಳಿದರು.
ಸ್ಮಾರ್ಟ್ ಸಿಟಿ ಕೆಂಪೇಗೌಡರ ಕಲ್ಪನೆ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಲೂ ಕೆಂಪೇಗೌಡ ಜಯಂತಿ ಆಚರಿಸುವ ಕಾರ್ಯಕ್ಕೆ ಚಾಲನೆ ನೀಡದಿದ್ದ ಬಗ್ಗೆ ಇಂದಿಗೂ ಬೇಸರವಿದೆ. ಇದೀಗ ಸರ್ಕಾರದ ವತಿಯಿಂದ ಜಯಂತಿ ಆಚರಣೆಯಾಗುತ್ತಿದ್ದು, ಮುಂದುವರಿಯಬೇಕು. ಇಂದಿನ ಸ್ಮಾರ್ಟ್‌ಸಿಟಿ ಪರಿಕಲ್ಪನೆಯನ್ನು ಕೆಂಪೇಗೌಡರು ಐದು ಶತಮಾನಗಳ ಹಿಂದೆಯೇ ಲೋಕಾರ್ಪಣೆ ಮಾಡಿದ್ದರು. ಇಂದು ಕೆರೆಗಳ ಮೇಲೆ ರಿಯಲ್ ಎಸ್ಟೇಟ್ ಪ್ರಭಾವ ಹೆಚ್ಚಾಗಿದೆ. ಅವರ ದೂರದರ್ಶಿತ್ವ, ಚಿಂತನೆಯನ್ನು ಕಾರ್ಯಗತಗೊಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಇದು ಜನರ ಕಾರ್ಯಕ್ರಮ: ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, “ರಾಷ್ಟ್ರ ರಾಜಧಾನಿ ದೆಹಲಿಯ ಇತಿಹಾಸ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಅಂತಾರಾಷ್ಟ್ರೀಯ ನಗರಿಯಾಗಿರುವ ಬೆಂಗಳೂರಿನ ಭದ್ರ ಬುನಾದಿ ಹಾಕಿದ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು. ಇದು ಸರ್ಕಾರದ ಕಾರ್ಯಕ್ರಮವಲ್ಲ, ಬದಲಿಗೆ ಜನರ ಕಾರ್ಯಕ್ರಮ.
ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಶ್ರೀಗಂಧ ಕಾವಲಿನ ಬಳಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಐದು ಎಕರೆಯನ್ನು ಸರ್ಕಾರ ಮಂಜೂರು ಮಾಡಿದೆ. ಹಾಗೆಯೇ ನಾನಾ ಯೋಜನೆಗಳಿಗೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ ಎಂದು ತಿಳಿಸಿದರು. ಸಚಿವೆ ಉಮಾಶ್ರೀ, “ಕೆಂಪೇಗೌಡ ಜಯಂತಿಯನ್ನು ಸರ್ಕಾರದಿಂದ ಅಧಿಕೃತವಾಗಿ ಆಚರಿಸಲಾಗುತ್ತಿದ್ದು, ಆಗಸ್ಟ್‌ನೊಳಗೆ ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸ್ವಾಮೀಜಿ ಬೇಡಿಕೆಗಳು: ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡರ ಅತಿದೊಡ್ಡ ಪ್ರತಿಮೆ ನಿರ್ಮಿಸಬೇಕು. ಬೆಂಗಳೂರಿನ ಒಂದು ವಿವಿಗೆ ಕೆಂಪೇಗೌಡರ ಹೆಸರಿಡಬೇಕು. ಕೆಂಪೇಗೌಡರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಬೇಕು. “ನಮ್ಮ ಮೆಟ್ರೋ’ಗೆ ಕೆಂಪೇಗೌಡರ ಹೆಸರಿಡಬೇಕು. ಸರ್ಕಾರಿ ಕಚೇರಿಗಳಲ್ಲಿ ಕೆಂಪೇಗೌಡರ ಭಾವಚಿತ್ರ ಪ್ರದರ್ಶನಕ್ಕೆ ಆದೇಶ ನೀಡಬೇಕು. ದಸರಾ ಉತ್ಸವ ಮಾದರಿಯಲ್ಲಿ ಕೆಂಪೇಗೌಡ ಜಯಂತಿ ಆಚರಿಸಬೇಕು ಎಂದು ಹೇಳಿದರು.
ಮೆಟ್ರೋಗೆ ಕೆಂಪೇಗೌಡರ ಹೆಸರಿಡಲು ಚಿಂತಿಸಿ: ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, “ಮಹಾತ್ಮರು ಪ್ರಾಣವಾಯುವಿದ್ದಂತೆ. ಅವರು ಧರ್ಮ, ಜಾತಿಗೆ ಸೀಮಿತರಾಗಿರುವುದಿಲ್ಲ. ಸಾಮಾನ್ಯ ಜನರಾಗಿದ್ದವರು ಮಹಾನ್ ಸಾಧನೆ ಮಾಡಿದಾಗ ಅವರನ್ನು ಧರ್ಮಾತೀತ, ಜಾತ್ಯತೀತವಾಗಿ ನೋಡಬೇಕು. ಇಂದು ಇತಿಹಾಸ ಸೃಷ್ಟಿಸುವವರ ಅಭಾವವಿದ್ದರೆ, ಮತ್ತೂಂದೆಡೆ ಇತಿಹಾಸ ತಿಳಿದುಕೊಳ್ಳುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ.
ಹಾಗಾಗಿ ಮಹಾತ್ಮರನ್ನು ಸ್ಮರಿಸುವ ಕೆಲಸ ಆಗಬೇಕು. ಕೆಂಪೇಗೌಡ ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಮೆಟ್ರೋ ರೈಲಿಗೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಸರ್ಕಾರ ಚಿಂತಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅವರು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೆಂಪೇಗೌಡರ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ವಿಧಾನ ಸಭೆ ಉಪಾಧ್ಯಕ್ಷ ಶಿವಶಂಕರ್‌ರೆಡ್ಡಿ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಚಿವರಾದ ಆರ್.ರೋಷನ್‌ಬೇಗ್, ಕೆ.ಜೆ.ಜಾರ್ಜ್, ಡಾ.ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಎ.ಮಂಜು, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಎಂ.ಕೃಷ್ಣಪ್ಪ, ಎಂ.ಆರ್.ಸೀತಾರಾಂ, ಮೇಯರ್ ಜಿ.ಪದ್ಮಾವತಿ, ಸಂಸದರಾದ ಡಿ.ಕೆ.ಸುರೇಶ್, ಪುಟ್ಟರಾಜು, ಮುದ್ದಹನುಮೇಗೌಡ, ರಾಜೀವ್‌ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ, ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಲವು ಶಾಸಕರು ಉಪಸ್ಥಿತರಿದ್ದರು.
ದೇವೇಗೌಡರ ಕಾಲಿಗೆರಗಿದ ಡಿಕೆಶಿ: ಬಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಮುಖ್ಯಮಂತ್ರಿ, ಸ್ವಾಮೀಜಿಗಳ ಸಹಿತ ಗಣ್ಯರು ವೇದಿಕೆಯಲ್ಲಿ ಆಸೀನರಾಗಿದ್ದರು. ಮೆರವಣಿಗೆ ನೇತೃತ್ವ ವಹಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ವೇದಿಕೆ ಮೇಲೆ ಹತ್ತುತ್ತಿದ್ದಂತೆ ಎಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿಸಿದರು.
ದೇವೇಗೌಡರು ಶಿವಕುಮಾರ್ ತಲೆ ನೇರವರಿಸಿ ಮುಗುಳ್ನಕ್ಕು ಹಸ್ತಲಾಘವ ನೀಡಿದರು. ಬಳಿಕ ತಮ್ಮ ಭಾಷಣದ ವೇಳೆ ದೇವೇಗೌಡರು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದಕ್ಕೆ ಡಿ.ಕೆ.ಶಿವಕುಮಾರ್ ಕೈಮುಗಿಯುತ್ತಿದ್ದಂತೆ ಸಭಿಕರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಬಳಿಕ ದೇವೇಗೌಡರು, “ಇದರಲ್ಲಿ ರಾಜಕೀಯ ಇಲ್ಲ. ನಾವೆಲ್ಲರೂ ಕೆಂಪೇಗೌಡರ ಸ್ಮರಣೆಗೆ ಬಂದಿದ್ದೇವೆ’ ಎಂದು ಹೇಳಿದರು.
ದೇವೇಗೌಡರ ಹೆಸರೆತ್ತಿದಾಗೆಲ್ಲ ಹರ್ಷೋದ್ಘಾರ: ಕಾರ್ಯಕ್ರಮದುದ್ದಕ್ಕೂ ದೇವೇಗೌಡರ ಹೆಸರು ಪ್ರಸ್ತಾಪವಾದಾಗಲೆಲ್ಲಾ ಹಾಗೂ ಅವರು ಭಾಷಣಕ್ಕೆ ಮುಂದಾದಾಗ ಮತ್ತು ಮುಗಿಸಿದಾಗಲೂ ಸಭಿಕರು ಚಪ್ಪಾಳೆ ಹೊಡೆದು ಹಷೋìದ್ಘಾರ ವ್ಯಕ್ತಪಡಿಸಿದ್ದು ಗಮನ ಸೆಳೆಯಿತು. ಸುಮಾರು ವರ್ಷಗಳ ನಂತರ ದೇವೇಗೌಡರು, ವಿಧಾನಸೌಧ ಬಾಂಕ್ವೆಂಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ರಜೆ ಬೇಕು, ಬೇಡ…..: ಸಭೆಯಲ್ಲಿ ಕೆಲ ಸಭಿಕರು ಮುಖ್ಯಮಂತ್ರಿಗಳ ಭಾಷಣದ ವೇಳೆ ಕೆಂಪೇಗೌಡ ಜಯಂತಿಗೆ ರಜೆ ನೀಡಬೇಕು ಎಂದರೆ ಇನ್ನೂ ಕೆಲವರು ಕೆಂಪೇಗೌಡ ಜಯಂತಿಗೆ ರಜೆ ನೀಡಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಸಾರ್ವಜನಿಕ ಮನ್ನಣೆಯಂತೆ ನಿರ್ಣಯ ಕೈಗೊಳ್ಳೋಣ ಎಂದಷ್ಟೇ ಹೇಳಿದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಭಾಷಣದ ವೇಳೆ, ಕೆಂಪೇಗೌಡರ ಜಯಂತಿಯಂದು ರಜೆ ಘೋಷಣೆ ಮಾಡಿ ಸರ್ಕಾರದ ಹಣವನ್ನು ಪೋಲು ಮಾಡಿ ಎಂದು ಕೆಂಪೇಗೌಡರು ಹೇಳಿಲ್ಲ. ಕೆಂಪೇಗೌಡರು ಕಟ್ಟಿಸಿದ ಕೆರೆ ಕಟ್ಟೆಗಳನ್ನು ಸಂರಕ್ಷಿಸಿ ಗಿಡಗಳನ್ನು ನೆಟ್ಟು ಪೋಷಿಸಿ ಹಸಿರು ಉಳಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.