ಇಂಡಿಯನ್ ವೆಲ್ಸ್: ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್ ಸೆಮಿಫೈನಲ್ ತಲುಪಿದ್ದಾರೆ. ಜಿದ್ದಾಜಿದ್ದಿ ಕ್ವಾರ್ಟರ್ ಫೈನಲ್‌ನಲ್ಲಿ ಅವರು ನಿಕ್ ಕಿರ್ಗಿಯೋಸ್ ವಿರುದ್ಧ 7-6 (0), 5-7, 6-4 ಅಂತರದ ಗೆಲುವು ಕಾಣುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಈ ವರ್ಷ ನಡಾಲ್ ಅವರ ಅಜೇಯ ಓಟ 19 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿತು.
ನಡಾಲ್ ಅವರಿನ್ನು ತಮ್ಮದೇ ದೇಶದ 18ರ ಹರೆಯದ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಆಡಲಿದ್ದಾರೆ. ಅಲ್ಕರಾಜ್ ಹಾಲಿ ಚಾಂಪಿಯನ್ ಕ್ಯಾಮರಾನ್ ನೂರಿ ಅವರಿಗೆ 6-4, 6-3ರಿಂದ ಆಘಾತವಿಕ್ಕಿದರು. ಇದು ಅಲ್ಕರಾಜ್ ಆಡಲಿರುವ ಮೊದಲ ಮಾಸ್ಟರ್ 1000 ಸೆಮಿಫೈನಲ್.
ಬಡೋಸಾ ಮುನ್ನಡೆ :
ವನಿತಾ ವಿಭಾಗದಿಂದ ಹಾಲಿ ಚಾಂಪಿಯನ್ ಪೌಲಾ ಬಡೋಸಾ ಸೆಮಿಫೈನಲ್ ತಲುಪಿದ್ದಾರೆ. ಅವರು ರಶ್ಯದ ವೆರೋನಿಕಾ ಕುಡೆರ್ಮ ಟೋವಾ ವಿರುದ್ಧ 6-3, 6-2 ಅಂತರದ ಗೆಲವು ಸಾಧಿಸಿದರು. ಬಡೋಸಾ ಅವರ ಸೆಮಿಫೈನಲ್ ಎದುರಾಳಿ ಗ್ರೀಕ್‌ನ ಮರಿಯಾ ಸಕ್ಕರಿ. ಇನ್ನೊಂದು ಪಂದ್ಯದಲ್ಲಿ ಸಕ್ಕರಿ 7-5, 6-4ರಿಂದ ಎಲೆನಾ ರಿಬಾಕಿನಾ ಅವರಿಗೆ ಸೋಲುಣಿಸಿದರು.
2015ರ ಚಾಂಪಿಯನ್ ಸಿಮೋನಾ ಹಾಲೆಪ್ ಮತ್ತು ವಿಶ್ವದ 3ನೇ ರ್‍ಯಾಂಕಿಂಗ್ ಆಟಗಾರ್ತಿ ಐಗಾ ಸ್ವಿಯಾಟೆಕ್ ನಡುವೆ ಇನ್ನೊಂದು ಸೆಮಿಫೈನಲ್ ಸಾಗಲಿದೆ.