Advertisement
ಮಳೆಯಿಂದ ಗುರುವಾರ ಮುಂದುವರಿದ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್ ವಿರುದ್ಧದ ಪಂದ್ಯವನ್ನು ನಡಾಲ್ 4-6, 6-3, 6-2, 6-2 ಅಂತರದಿಂದ ಗೆದ್ದು ಬೀಗಿದರು. ಬುಧವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ಮೊದಲ ಸೆಟ್ ಕಳೆದುಕೊಂಡಿದ್ದ ನಡಾಲ್ 4-6, 5-3ರ ಹಿನ್ನಡೆಯಲ್ಲಿದ್ದರು. 2015ರ ಬಳಿಕ ನಡಾಲ್ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಬಾರಿಗೆ ಸೆಟ್ ಒಂದನ್ನು ಕಳೆದುಕೊಂಡಿದ್ದರು. ಆರ್ಜೆಂಟೀನಾದ ಆಟಗಾರ ಅದ್ಭುತವೊಂದರ ನಿರೀಕ್ಷೆಯಲ್ಲಿದ್ದರು. ರಾತ್ರಿಯಿಡೀ ದೊಡ್ಡ ಬೇಟೆಯ ಕನಸು ಕಾಣುತ್ತ ಉಳಿದಿದ್ದರೋ ಏನೋ. ಆದರೆ ಗುರುವಾರ ಬಿಸಿಲೇರುತ್ತಿದ್ದಂತೆಯೆ ನಡಾಲ್ ಆಟವೂ ಬಿಸಿ ಏರಿಸಿಕೊಳ್ಳುತ್ತ ಹೋಯಿತು. ಅವರು ಹಂತ ಹಂತವಾಗಿ ಶಾರ್ಟ್ಸ್ಮನ್ ವಿರುದ್ಧ ಮೇಲುಗೈ ಸಾಧಿಸುತ್ತ ಹೋದರು. ಅವರಿಗೆ ಇನ್ನೊಂದು ಅಂಕ ನೀಡದೆಯೇ ದ್ವಿತೀಯ ಸೆಟ್ ವಶಪಡಿಸಿಕೊಂಡರು. ಬಳಿಕ ಸುಲಭದಲ್ಲಿ ಉಳಿದೆರಡು ಸೆಟ್‌ಗಳ ಮೇಲೆ ಪಾರಮ್ಯ ಸಾಧಿಸಿದರು.
“ಇದೊಂದು ಅತ್ಯಂತ ಕಠಿನ ಪಂದ್ಯವಾಗಿತ್ತು. ಡೀಗೊ ನನ್ನ ಉತ್ತಮ ಗೆಳೆಯ ಹಾಗೂ ಉತ್ತಮ ಆಟಗಾರ’ ಎಂದು 16 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ರಫೆಲ್ ನಡಾಲ್ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು. ಇದು ಫ್ರೆಂಚ್ ಓಪನ್‌ನಲ್ಲಿ ನಡಾಲ್ ಕಾಣುತ್ತಿರುವ 11ನೇ ಸೆಮಿಫೈನಲ್. 11ನೇ ಶ್ರೇಯಾಂಕದ ಡೀಗೊ
ಶಾರ್ಟ್ಸ್ಮನ್ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಕಾಣುವ ಅದೃಷ್ಟದಿಂದ ವಂಚಿತರಾದರು. ಇದು ಅವರ 2ನೇ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್. ಕಳೆದ ವರ್ಷದ ಯುಎಸ್ ಓಪನ್‌ನಲ್ಲಿ ಅವರು ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದ್ದರು.
Related Articles
ಆರ್ಜೆಂಟೀನಾದ ಒಬ್ಬ ಆಟಗಾರನನ್ನು ಸೋಲಿಸಿ ಸೆಮಿಫೈನಲ್‌ಗೆ ಬಂದಿರುವ ರಫೆಲ್ ನಡಾಲ್ ಅವರಿಗೆ ಇಲ್ಲಿ ಮತ್ತೂಬ್ಬ ಆರ್ಜೆಂಟೀನಿ ಆಟಗಾರ ಎದುರಾಗಿದ್ದಾರೆ. ಅವರು 5ನೇ ಶ್ರೇಯಾಂಕದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ. ಗುರುವಾರ ನಡೆದ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಡೆಲ್ ಪೊಟ್ರೊ 7-6 (7-5), 5-7, 6-3, 7-5 ಅಂತರದಿಂದ ಕ್ರೊವೇಶಿಯಾದ 3ನೇ ಶ್ರೇಯಾಂಕಿತ ಮರಿನ್ ಸಿಲಿಕ್ ವಿರುದ್ಧ ಜಯ ಸಾಧಿಸಿದರು. ಇದು ಫ್ರೆಂಚ್ ಓಪನ್‌ನಲ್ಲಿ ಡೆಲ್ ಪೊಟ್ರೊ ಕಾಣುತ್ತಿರುವ 3ನೇ ಸೆಮಿಫೈನಲ್. ಇದಕ್ಕೂ ಮುನ್ನ 2009 ಮತ್ತು 2016ರಲ್ಲಿ ಉಪಾಂತ್ಯ ಪ್ರವೇಶಿಸಿದ್ದ ಡೆಲ್ ಪೊಟ್ರೊ ಎರಡರಲ್ಲೂ ಸೋಲನುಭವಿಸಿದ್ದರು. ಈ ಬಾರಿ ರಫೆಲ್ ನಡಾಲ್ ವಿರುದ್ಧ ಮ್ಯಾಜಿಕ್ ಮಾಡಬಹುದೇ ಎಂಬ ಕೌತುಕ ಟೆನಿಸ್ ಅಭಿಮಾನಿಗಳದ್ದು. ಡೆಲ್ ಪೊಟ್ರೊ ಈವರೆಗೆ ಒಮ್ಮೆಯಷ್ಟೇ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಿದ್ದಾರೆ. ಇದು 2009ರ ಯುಎಸ್ ಓಪನ್‌ನಲ್ಲಿ ಒಲಿದಿತ್ತು. ಸ್ವಾರಸ್ಯವೆಂದರೆ, ಅಂದಿನ ಪ್ರಶಸ್ತಿ ಕಾಳಗದಲ್ಲಿ ನಡಾಲ್ ಅವರನ್ನು ಮಣಿಸುವ ಮೂಲಕವೇ ಡೆಲ್ ಪೊಟ್ರೊ ಪ್ರಶಸ್ತಿ ಎತ್ತಿದ್ದರು!
Advertisement
ಹಾಲೆಪ್ ಫೈನಲ್ ಪ್ರವೇಶವಿಶ್ವದ ನಂಬರ್ ವನ್ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್ ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ಕೂಟದ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಗುರುವಾರ ನಡೆದ ಮೊದಲ ಸೆಮಿಫೈನಲ್ ಕಾಳಗದಲ್ಲಿ ಅವರು 6-1, 6-4 ಅಂತರದಿಂದ ಗಾರ್ಬಿನ್ ಮುಗುರುಜಾಗೆ ಸೋಲುಣಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಮ್ಯಾಡಿಸನ್ ಕೀಸ್-ಸ್ಲೋನ್ ಸ್ಟೀಫನ್ಸ್ ಸೆಣಸಾಡುತ್ತಿದ್ದು, ಇಲ್ಲಿನ ವಿಜೇತರನ್ನು ಹಾಲೆಪ್ ಶನಿವಾರದ ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಈವರೆಗೆ ಒಂದೂ ಗ್ರ್ಯಾನ್‌ಸ್ಲಾಮ್ ಜಯಿಸದ ಸಿಮೋನಾ ಹಾಲೆಪ್‌ಗೆ ಇದು 3ನೇ ಫ್ರೆಂಚ್ ಓಪನ್ ಫೈನಲ್. 2014 ಮತ್ತು ಕಳೆದ ವರ್ಷದ ಪ್ರಶಸ್ತಿ ಸಮರದಲ್ಲಿ ಅವರಿಗೆ ನಿರಾಸೆಯೇ ಗತಿಯಾಗಿತ್ತು. ಅವರು ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದರು. ಆದರೆ ಇಲ್ಲಿಯೂ ಸೋಲೇ ಸಂಗಾತಿಯಾಗಿತ್ತು. ಪ್ಯಾರಿಸ್‌ನಲ್ಲಿ 3ನೇ ಪ್ರಯತ್ನದಲ್ಲಿ ಕಪ್ ಎತ್ತುವ ಕನಸು ಕಾಣುತ್ತಿದ್ದಾರೆ ಸಿಮೋನಾ ಹಾಲೆಪ್.