Advertisement

ಶೀಘ್ರ ಕಾಮಗಾರಿಗೆ ನಡಹಳ್ಳಿ ಸೂಚನೆ

12:48 PM Oct 10, 2018 | |

ಮುದ್ದೇಬಿಹಾಳ: ಪಟ್ಟಣದಲ್ಲಿ ನಡೆಯುತ್ತಿರುವ ಹುನಗುಂದ-ತಾಳಿಕೋಟೆ ರಾಜ್ಯಹೆದ್ದಾರಿ ಕಾಮಗಾರಿ ಸಾಕಷ್ಟು ವಿಳಂಬಗೊಳ್ಳುತ್ತಿದೆ. ರಾಜಕೀಯ ವಿರೋಧಿಗಳು ನನ್ನ ಮೇಲೆ ಇಲ್ಲ ಸಲ್ಲದ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಶೀಘ್ರ ಕಾಮಗಾರಿ ಪ್ರಾರಂಭಿಸಿ ರಸ್ತೆಯನ್ನು ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ರಸ್ತೆ ಕಾಮಗಾರಿ ಇಲಾಖೆಯಾಗಿರುವ ಕೆಆರ್‌ಡಿಸಿಎಲ್‌ ಮತ್ತು ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿರುವ ಅಶೋಕಾ ಕನ್‌ಸ್ಟ್ರಕ್ಷನ್‌ ಕಂಪನಿ ಉಸ್ತುವಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೆಆರ್‌ಡಿಸಿಎಲ್‌ ಅಧಿಕಾರಿಗಳು ಅಶೋಕಾ ಕಂಪನಿ ಉಸ್ತುವಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾರ್‌, ಸಿಪಿಐ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಇನ್ನು ಮುಂದೆ ವಿನಾಕಾರಣ ವಿಳಂಬ ಸಹಿಸುವುದಿಲ್ಲ. ಲೋಕಲ್‌ ಪ್ರಾಬ್ಲಿಮ್‌ ಎಂದು ಸುಳ್ಳು ಹೇಳಬೇಡಿ. ಕಾಮಗಾರಿಯ ಗುಣಮಟ್ಟ ಫೇಲ್‌ ಆಗುತ್ತಿದೆ ಎಂದು ಹರಿಹಾಯ್ದರು.

ರಸ್ತೆ ಕಾಮಗಾರಿಗೆ ಹಳೇಯ ಡಾಂಬರೀಕರಣ ಕಿತ್ತಿ ಹಾಕಿದ್ದನ್ನೇ ಮರಳಿ ಬಳಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಹಲವೆಡೆ ನಿಯಮಾನುಸಾರ ಕೆಲಸ ಮಾಡಿಲ್ಲ. ರಸ್ತೆ ಮಧ್ಯ ಗಿಡ ಬೆಳೆಸಲು ಕೆಂಪು ಮಣ್ಣು ಹಾಕುವಂತೆ ಹೇಳಿದ್ದರೂ ಬೇರೆ ಗಟ್ಟಿ ಮಣ್ಣು ಹಾಕಲಾಗಿದೆ ಎಂದು ಶಾಸಕರು ಅಸಹನೆ ತೋರಿದರು. ಕಾಮಗಾರಿ ನಡೆಸಲು ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಬೇಕು ಎಂದಾಗ ಕೆಆರ್‌ಡಿಸಿಎಲ್‌ ಎಇಇ ಎ.ಎಸ್‌. ಪಾಟೀಲ, ಗುತ್ತಿಗೆದಾರ ಕಂಪನಿಯ ಸೈಟ್‌ ಎಂಜಿನಿಯರ್‌ ಕೊಟ್ರೇಶ ಅವರು ಒಂದು ಬದಿ ಓಂ ಶಾಂತಿ ಭವನ ಕಟ್ಟಡ ಅತಿಕ್ರಮಣ, ಪಿಲೇಕೆಮ್ಮ
ದೇವಸ್ಥಾನ ಸ್ಥಳಾಂತರ ಸಮಸ್ಯೆ ಇವೆ. ಇನ್ನೊಂದು ಬದಿ ಪುರಸಭೆ ಕಟ್ಟಡದ ವಾಣಿಜ್ಯ ಮಳಿಗೆ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ಕ್ರೈಸ್ತರ ಸಮಾಧಿ ತೆರವುಗೊಳಿಸಬೇಕಿದೆ ಎಂದಾಗ ಗರಂ ಆದ ಶಾಸಕರು, ಪಿಲೇಕೆಮ್ಮ ದೇವಸ್ಥಾನ ಸ್ಥಳಾಂತರಕ್ಕೆ ದೇವಸ್ಥಾನ ಮಂಡಳಿಯವರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಮಾಡಿ. ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಕೆಲಸ ಮಾಡಿ. ಪುರಸಭೆ ವಾಣಿಜ್ಯ ಮಳಿಗೆ ಮತ್ತು ಸಮಾಧಿ ರಸ್ತೆಯಲ್ಲಿ ಬರುತ್ತಿದ್ದರೆ ಅವುಗಳನ್ನು ತೆರವುಗೊಳಿಸಿ ಎಂದು ತಾಕೀತು ಮಾಡಿದರು.

ಬನಶಂಕರಿ, ಅಂಬೇಡ್ಕರ್‌, ಬಸವೇಶ್ವರ ವೃತ್ತಗಳಲ್ಲಿ ಮತ್ತು ಮಿನಿ ವಿಧಾನಸೌಧ ಇರುವ ಹುಡ್ಕೊ ಪ್ರವೇಶದ್ವಾರದ ಬಳಿ ಸೈನ್‌ಬೋರ್ಡ್‌ ಹಾಕಬೇಕು. ರಸ್ತೆಯ 6 ಸ್ಥಳಗಳಲ್ಲಿ ಯುಟಿಲಿಟಿ ಡೆಕ್ಸ್‌, ರಸ್ತೆ ವಿಭಜಕದಲ್ಲಿ ಬೆಳೆಸುವ ಗಿಡಗಳಿಗೆ ನೀರು ಸರಬರಾಜು ಮಾಡಲು ಪೈಪ್‌ ಅಳವಡಿಸಬೇಕು. ಫುಟ್‌ಪಾಥ್‌ಗೆ ಗ್ರಿಲ್‌ ಹಾಕಬೇಕು. ಈಗಾಗಲೇ ರಸ್ತೆ ಮಧ್ಯ ವಿಭಜಕ ನಿರ್ಮಿಸಿದ್ದು ಅದರಲ್ಲಿ ಗಿಡ ಬೆಳಸಲು ಫಲವತ್ತಾದ ಕೆಂಪು ಮಣ್ಣು ಹಾಕಿ ಮರು ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.

ಕೆಲಸ ಯಾವಾಗ ಪ್ರಾರಂಭಿಸುತ್ತೀರಿ ಎನ್ನುವುದನ್ನು ಈಗಲೇ ಸ್ಪಷ್ಟಪಡಿಸಿ ಎಂದು ಶಾಸಕರು ಕೇಳಿದಾಗ ಉತ್ತರಿಸಿದ ಕೊಟ್ರೇಶ್‌ ಅವರು ಅ. 15ರಿಂದ ಅಂಬೇಡ್ಕರ್‌ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ, ನಂತರ ಬಸವೇಶ್ವರ ವೃತ್ತದಿಂದ ಪಿಲೇಕೆಮ್ಮ ನಗರದವರೆಗೆ ಒಂದೊಂದೇ ಬದಿಯಲ್ಲಿ ಹಂತ ಹಂತವಾಗಿ ರಸ್ತೆ ನಿರ್ಮಿಸುವ ಮೂಲಕ ಒಟ್ಟಾರೆ ಕೆಲಸವನ್ನು ಡಿಸೆಂಬರ್‌ 15ರೊಳಗೆ ಅಂತ್ಯಗೊಳಿಸಿ ಹೊಷ ವರ್ಷದ ಜನೇವರಿ 1ರಂದೇ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ ಎಂದರು.

Advertisement

ತಹಶೀಲ್ದಾರ್‌ ಎಂ.ಎ.ಎಸ್‌. ಬಾಗವಾನ, ಸಿಪಿಐ ರವಿಕುಮಾರ ಕಪ್ಪತ್ತನ್ನವರ್‌, ಕೆಆರ್‌ಡಿಸಿಎಲ್‌ ಎಇಇ ಎ.ಎಸ್‌. ಪಾಟೀಲ, ಎಇ ಮಂಜುನಾಥ, ಸರ್ವೇ ಅಧಿಕಾರಿ ವೆಂಕಟೇಶ, ಗುಣಮಟ್ಟ ಅಧಿಕಾರಿ ಆರ್‌ಟಿಎಸ್‌ ಸತೀಶಬಾಬು, ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ, ತಂಗಡಗಿ ಗ್ರಾಪಂ ಅಧ್ಯಕ್ಷ ಶಿವಾನಂದ ಮಂಕಣಿ, ಪುರಸಭೆ ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next