Advertisement

ರುದ್ರವೀಣೆಯ ನಾದಾಭಿಷೇಕ

08:06 PM Feb 06, 2020 | mahesh |

ಶಬ್ದ ತರಂಗಗಳು ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಸೂಕ್ಷ್ಮಾತಿಸೂಕ್ಷ್ಮ ಭಾವಕೋಶಗಳಿಗೆ ತಾಕುತ್ತಾ ತನ್ನಿರವನ್ನು ಅನುಭವದ ಮೇಲ್ಮೆ„ಗೆ ಎತ್ತಿಹಾಕುವ ಅನುಭವವೂ ಸಂಗೀತದ ಗಾಢ ಕೇಳ್ಮೆಯಿಂದ ಸಾಧ್ಯ. ಪೂರ್ವಿ ರಾಗದ ಒಂದೊಂದೂ ಸ್ವರಗಳೆಂಬ ಪ್ರಶಾಂತ ಸರಸ್ಸಿನಲ್ಲಿ ವೈಣಿಕರಾದ ಬಹಾವುದ್ದೀನ್‌ ಡಾಗರ್‌ ಕಣ್ಮುಚ್ಚಿ ಸದ್ದಿಲ್ಲದೆ ಮುಳುಗಿ ಮಡಿಯಾದುದಲ್ಲದೆ ಕಟೀಲಿನ ಬ್ರಹ್ಮಕಲಶದ ಸಂದರ್ಭದಲ್ಲಿ ತಡಸಂಜೆ ಏಳರ ಹೊತ್ತಿಗೆ ಸಂಗೀತ ರಸಿ ಕ ರನ್ನೂ ರಾಗ ಪೂರ್ವಿಯ ಏಳೂ ಸ್ವರಗಳ ಕೊಳದಲ್ಲಿ ಮುಳುಗಿಸಿ ಮಡಿಯಾಗಿಸಿ ಧ್ಯಾನಾವಸ್ಥೆಗೆ ಕೊಂಡೊಯ್ದರು. ರತ್ನಾಕರವರ್ಣಿ ಭರತೇಶವೈಭವದಲ್ಲಿ ಬರುವ ನಾಟ್ಯಸಂಧಿಯಲ್ಲಿನ ಸಾಂಗತ್ಯ ಹಾಡು ನೆನಪಾಗುತ್ತದೆ:

Advertisement

ಒಳಗುಮ್ಮಿದಾನಂದರಸ ತನ್ನ ತನು ತುಂಬಿ
ತುಳುಕಿ ಹೊರಗೆ ಸೂಸುವಂತೆ|
ತೆಳುವಸುರಿಂದ ಬಾಯ್ದೆರೆಯೊಳು ಸುಸ್ವರ
ಹೊಳೆದು ಮೋಹಿಸುತ್ತಿದ್ದುದಾಗ||

ಪೂರ್ವಿ ರಾಗ ಸಂಜೆಯ ಹೊತ್ತಿನ ಅನುಭೂತಿ ಹುಟ್ಟಿಸುವ ಅಥವಾ ಆ ಹೊತ್ತಿಗೆ ಹಾಡಬಹುದಾದ ಗಂಭೀರ ರಾಗ. ಬಹಾವುದ್ದೀನ್‌ ಡಾಗರ್‌ ಅವರು ತಮಗೆ ಪರಂಪರೆಯಾಗಿ ದೊರೆತ ರುದ್ರವೀಣೆಯ ನುಡಿಸುವಿಕೆಯಿಂದ ನಾದಾಭಿಷೇಚನ ಹೊಂದಿದ ಅನುಭವ ಕೊಡಿಸಿದರು. ಪೂರ್ವಿಯ ಮಂದ್ರ ಸ್ಥಾಯಿಯ ಸ್ವರಗಳು ಬೃಹತ್‌ ಗಾತ್ರದ ರುದ್ರವೀಣೆಯ ಮೂಲಕ ಇಡೀ ದೇಹವನ್ನೇ ಆವರಿಸಿ ಸ್ವರಗಳು ತನ್ನ ತೆಕ್ಕೆಗೆ ತೆಗೆದುಕೊಂಡು ಸೂಕ್ಷ್ಮಾತಿ ಸೂಕ್ಷ್ಮ ಸಂವೇದನೆಗಳ ಸ್ಥಾನಕ್ಕೆ ಮೆಲ್ಲನೆ ತಾಕಿ ಹರಿದಾಡಿ ಈಗಾಗಲೇ ಸಂವೇದನೆಗಳನ್ನು ಚಿಗುರುವಂತೆ ಮಾಡಿ ಮನಸ್ಸು, ಬುದ್ಧಿ , ಅಹಂಕಾರ ಚಿತ್ತ ಒಂದಾದ ಅನುಭವ ಕೊಟ್ಟ ಈ ಅತೀಂದ್ರಿಯ ವಾದ್ಯಕ್ಕೆ-ವಾದನ ವಿಸ್ಮಯಕ್ಕೆ ಹೇಗೆ ಕೃತಜ್ಞತೆ ತಿಳಿಸಲಿ.

ರಾಗ ಪೂರ್ವಿಯ ಪ್ರಸ್ತುತಿ ಒಟ್ಟು ಒಂದು ಕಾಲು ತಾಸು. ಮೊದಲ ಅರ್ಧ ತಾಸು ಕೇವಲ ಆಲಾಪ. ಮಂದ್ರ ಸಪ್ತಕ ಮತ್ತು ಮಧ್ಯಮ ಸಪ್ತಕದಲ್ಲೇ ಸಂಚರಿಸುವ ರಾಗವಿದು.ರಾಗದ ಸ್ವರಗಳನ್ನು ಓಲೈಸಿ ರಮಿಸಿ ತನಗೆ ಕೃಪೆದೋರಿ ಮತ್ತು ಕೇಳುಗರಿಗೂ ಕರುಣಾ ಸೇಚನ ಮಾಡಿಸು ಎಂಬ ಪ್ರಾರ್ಥನೆಯಂತೆ ಸಾವಕಾಶವಾಗಿ ಯಾವುದೇ ಅವಸರವಿಲ್ಲದೆ ಕೇವಲ ಸ್ವರಗಳು ಮತ್ತು ಅವುಗಳ ಸೂಕ್ಷ್ಮ ನೆಲೆಗಳಿಗೆ ಹೋಗುತ್ತಾ ಬರುತ್ತಾ ಮತ್ತೂಂದು ಸ್ವರಕ್ಕೆ ದಾಟಿಕೊಂಡು ಹೋಗುವುದು ಇಷ್ಟೆ. ವಾದಿ ಸ್ವರವಾದ ಗಾಂಧಾರ ಮತ್ತು ಸಂವಾದಿ ಸ್ವರ ನಿಷಾದ ಇವುಗಳ ಮೇಲೆ ಸಾವಧಾನವಾಗಿ ಚಲಿಸುತ್ತಾ ಪೂರ್ವಿಯ ಏಳೂ ಸ್ವರಗಳನ್ನು ಮತ್ತು ಅವರೋಹದ ಎರಡೂ ಜಾತಿಯ ಮಧ್ಯಮದ ಬಳಕೆಯಿಂದ ಹದಿನಾಲ್ಕು ಜಾತಿಯ ಸ್ವರಗಳನ್ನು ಬೀಜ ಮಂತ್ರದಂತೆ ಅವುಗಳ ಮನೆಗೆ ಹೋಗಿ ಅನುನಯಿಸಿ ರಾಗ ದೇವತೆಯನ್ನು ಒಲಿಸಿಕೊಳ್ಳುವ ರೀತಿಯ ಸಾವಕಾಶವಾದ ಸಾವಧಾನವಾದ ಆಲಾಪ. ಶುದ್ಧ ಮಧ್ಯಮದ ಜತೆ ತೀವ್ರ ಮಧ್ಯಮವನ್ನೂ ಸೇರಿಸಿದರೆ ಹದಿನೈದು ಸ್ವರಗಳು. ಮುಂದೆ, ಸ್ವರ ದೇವತೆಗಳು ತೃಪ್ತರಾದಂತೆ ಕಂಡುಬಂದ ಮೇಲೆ ಮತ್ತಿನ ಜೋಡ್‌- ರಾಗದ ಪ್ರತಿ ಸ್ವರಗಳನ್ನು ಮತ್ತೂಂದರ ಜತೆಗೆ ಹೆಣಿಗೆಯಾಗಿ ಕಟ್ಟುವುದು.

ಇದು ಮತ್ತಿನ ಇಪ್ಪತ್ತು ನಿಮಿಷದ ಪ್ರಕ್ರಿಯೆ. ವಿವಿಧಾಕೃತಿಯ ಹೆಣಿಗೆಗಳನ್ನು ಮಾಡಿ ಸ್ವರ ದೇವತೆಗಳೆಂಬ ಮಲ್ಲಿಗೆ ಮಾಲೆಯನ್ನು ಮಾಡಿಡುವಂತೆ ಡಾಗರ್‌ ಸಾಹೇಬರು ಬೇರೋಂದು ಲೋಕಕ್ಕೆ ಹೋಗಲು ಸಜ್ಜುಮಾಡಿದರು. ಮತ್ತಿನ ಹದಿನೈದು ನಿಮಿಷಗಳ ಅವಧಿ ದ್ರುಪದ್‌ ಪ್ರಬಂಧ (ಸಾಹಿತ್ಯದ) ಪ್ರಸ್ತುತಿ. ಗಂಭೀರ ನಾದಾನುರಣತೆಯ ಪಖ್ವಾಜ್‌ ಎಂಬ ವಾದ್ಯದೊಂದಿಗೆ. ರುದ್ರವೀಣೆಯ ಮಂದ್ರದ ನಾದಕ್ಕೆ ಸುಘಾತದಂತೆ ಪಖ್ವಾಜ್‌ನ ಆಳವಾದ ಧಿಂ ಕಾರಗಳು ಸೃಷ್ಟಿಸುತ್ತಿದ್ದ ನಾದವಿಸ್ಮಯ, ಜತೆಗೆ ಪಖ್ವಾಜ್‌ನ ಬಲ ಭಾಗದ ಕರ್ಣದ ಮಧ್ಯ ಭಾಗದಿಂದ ಹಸ್ತದ ಕಿರುಬೆರಳು ಮತ್ತು ಉಂಗುರ ಬೆರಳು ಮಧ್ಯ ಬೆರಳುಗಳ ಮೂಲಕ ನುಡಿಸುತ್ತಿದ್ದ ಅರೆ ಛಾಪಿನಂತಹಾ ತಾಂ ನಾದ ;ತೋರು ಬೆರಳ ನಂ ಕಾರ; ಅರಳಿ ಅರಳಿ ಬರುವ ಸರಳವಾದ ಉರುಳಿಕೆಗಳ ಯಕ್ಷಗಾನದ ಝಂಪೆ ತಾಳದ ರೀತಿಯ (ಅವರ ಹತ್ತಕ್ಷರದ) ತಾಳಾವರ್ತದ ಪ್ರಬಂಧ ರಚನೆ ಮಾಡಿದ ಮೋಡಿ ಅನನ್ಯ. ಆಲಾಪ ಮತ್ತು ಜೋಡ್‌ನ‌ಲ್ಲಿ ಹೆಣೆದ ಮಲ್ಲಿಗೆ ಮಾಲೆಯನ್ನು ದೇವಿಗೆ ಮುಡಿಸಿ ಪೂಜೆ ಮಾಡಿದಂತೆ ಭಾಸವಾಯಿತು ಕೊನೆಯ ಪ್ರಬಂಧದ ಪ್ರಸ್ತುತಿ. ಕೊನೆಯ ಹತ್ತು ನಿಮಿಷಗಳಲ್ಲಿ ರಾಗ ಜೋಗ್‌ ಪ್ರಸ್ತುತಿ ಮಾಡಿದರು.ಇದೂ ಹತ್ತಕ್ಷರದ ಪ್ರಬಂಧ ಪ್ರಸ್ತುತಿಯೇ ಆಗಿತ್ತು. ಪಖ್ವಾಜಲ್ಲಿ ಅವರಿಗೆ ಸಹಕರಿಸಿದವರು ಪ್ರತಾಪ್‌ ಆವಾಡ್‌.

Advertisement

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next