Advertisement

“ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ’

09:50 PM May 27, 2020 | mahesh |

ತೆಕ್ಕಟ್ಟೆ: ಯಕ್ಷ ಮಾಣಿಕ್ಯ ಭಾಗವತ ಕಾಳಿಂಗ ನಾವಡರು ಒಳ್ಳೆಯ ಕವಿ, ಸಹೃದಯರು. ಸ್ವತಃ ಅವರ ತಂದೆ ಸಾವಿನ ಮಂಚದಲ್ಲಿದ್ದಾಗಲೂ ತನ್ನ ಮೇಳದ ಪ್ರದರ್ಶನಕ್ಕೆ ಭಂಗ ಬರಬಾರದೆಂಬ ಕಾಳಜಿಯಿಂದ ನೋವಿ ನಲ್ಲಿಯೂ ಕಲಾ ರಸಿಕರ ಮನ ತಣಿಸಲು ಮುಂದಾದ ನಾವಡರ ನಡೆ ಅನನ್ಯ ಎಂದು ದಿ| ಜಿ.ಆರ್‌. ಕಾಳಿಂಗ ನಾವಡರ ಜೀವದ ಗೆಳೆಯ ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು. ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪ ದಲ್ಲಿ ಮೇ 27 ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಆಶ್ರಯದಲ್ಲಿ ಜಿಲ್ಲಾಧಿಕಾರಿ ಹಾಗೂ ಕೋಟ ಪೊಲೀಸ್‌ ಠಾಣೆಯ ನಿರೀಕ್ಷರ ಅನುಮತಿಯೊಂದಿಗೆ ಆಯೋಜಿಸಿದ 3ನೇ ವರ್ಷದ ಗಾನ ಗಂಧರ್ವ ಕರಾವಳಿಯ ಕೋಗಿಲೆ ಜಿ.ಆರ್‌. ಕಾಳಿಂಗ ನಾವಡರ ಸಂಸ್ಮರಣಾ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಹೃದಯ ಶ್ರೀಮಂತಿಕೆ
ಅತೀ ಚಿಕ್ಕ ವಯಸ್ಸಿನಲ್ಲಿ ಕಲೆಯ ಉತ್ತುಂಗ ಶಿಖರವನ್ನೇರಿದರೂ ಒಂದಿಷ್ಟೂ ಅಹಂ ಇಲ್ಲದ ಸರಳ ಸಜ್ಜನಿಕೆಯ ಹೃದಯ ಶ್ರೀಮಂತಿಕೆಯ ಭಾಗವತ ನಾವಡರು. ಕಲೆಯ ಬಗೆಗಿನ ಬದ್ಧತೆ, ಸಹ ಕಲಾವಿದರ ಕುರಿತಾದ ಪ್ರೀತಿ ಅನುಕಂಪ ಮೆಚ್ಚುವಂಥದ್ದು. ಕಲೆಯನ್ನು ಆರಾಧಿಸುವ ಮೂಲಕ ಅಪಾರವಾದ ಪ್ರಸಿದ್ಧಿ, ಯಶಸ್ಸು ಅವರನ್ನು ಹಿಂಬಾಲಿಸಿ ಬಂದಿದೆ ಹೊರತು, ಅವರು ಎಂದೂ ಕೀರ್ತಿ ಮೆಚ್ಚುಗೆಯನ್ನು ಅರಸಿ ಹೊರಟವರಲ್ಲ ಎಂದು ಅವರು ಹೇಳಿದರು.

ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗ, ಯಕ್ಷ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರು ಕೊçಕೂರು ಸೀತಾರಾಮ ಶೆಟ್ಟಿ, ಕೋಟ ಸುದರ್ಶನ ಉರಾಳ, ಕಾರ್ಯದರ್ಶಿ ವೆಂಕಟೇಶ ವೈದ್ಯ ಕೊಮೆ ಪುಷ್ಪನಮನ ಸಲ್ಲಿಸಿದರು.

ಭಾಗವತ ಲಂಬೋದರ ಹೆಗಡೆ ಸ್ವಾಗತಿಸಿ, ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ಪ್ರಶಾಂತ ಮಲ್ಯಾಡಿ ವಂದಿಸಿದರು. ಬಳಿಕ ಪ್ರಾಚಾರ್ಯ ಕೆ.ಪಿ. ಹೆಗಡೆ, ನಿಟ್ಟೂರು ಲಂಬೋದರ ಹೆಗಡೆ, ಎನ್‌.ಜಿ. ಹೆಗಡೆ, ಸುದೀಪ ಉರಾಳ ಹಿಮ್ಮೇಳದಲ್ಲಿ ಮಲ್ಪೆ ವಾಸುದೇವ ಸಾಮಗ, ವಾಸುದೇವ ರಂಗ ಭಟ್‌, ಹಳ್ಳಾಡಿ ಜಯರಾಮ ಶೆಟ್ಟಿ, ಸುಜಯೀಂದ್ರ ಹಂದೆ, ಪ್ರದೀಪ ವಿ. ಸಾಮಗ ಇವರ ಮುಮ್ಮೇಳದಲ್ಲಿ “ಭೀಷ್ಮ ವಿಜಯ’ ತಾಳಮದ್ದಳೆಯ ಸಾಮಾಜಿಕ ಜಾಲತಾಣ ಮೂಲಕ ನೇರ ಪ್ರಸಾರದ ಕಾರ್ಯಕ್ರಮ ಸಂಪನ್ನಗೊಂಡಿತು.

ಕಲಾವಿದರನ್ನು ಸಮ್ಮಾನಿಸುವ ಸಂಕಲ್ಪ
“ಮೇ 27 ಯಕ್ಷಗಾನದ ಕಲಾ ಸಹೃದಯರು ಪ್ರತೀ ವರ್ಷ ಕಾಳಿಂಗ ನಾವಡರನ್ನು ನೆನಪಿಸಿಕೊಳ್ಳಲೇ ಬೇಕಾದ ಪುಣ್ಯದ ದಿವಸ. ರಸ್ತೆ ಅಪಘಾತದಲ್ಲಿ ಆಕಸ್ಮಿಕ ಮರಣಕ್ಕೆ ತುತ್ತಾದ ಕಾಳಿಂಗ ನಾವಡರು ಈಗಲೂ ನಮ್ಮ ಮೈ-ಮನಗಳಲ್ಲಿ ತುಂಬಿಕೊಂಡಿದ್ದಾರೆ. ಸರಕಾರ, ನಾವಡರ ಅಭಿಮಾನಿಗಳು ಪ್ರತೀ ವರ್ಷ ನಾವಡರ ಹೆಸರಿನಲ್ಲಿ ಸುಮಾರು ಒಂದು ಲಕ್ಷ ರೂ. ಮೊತ್ತವನ್ನು ನೀಡಿ ಶ್ರೇಷ್ಠ ಕಲಾವಿದನೊಬ್ಬನನ್ನು ಗುರುತಿಸಿ ಸಮ್ಮಾನಿಸುವ ಸಂಕಲ್ಪ ಮಾಡಲಿ’ ಎಂದು ಗಂಪು ಪೈ ಸಾಲಿಗ್ರಾಮ ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next