Advertisement

ನಾಡ-ಮೊವಾಡಿ ಸೇತುವೆ ಸಂಪರ್ಕ ರಸ್ತೆ ವಿಸ್ತರಣೆಗೆ ಒಪ್ಪಿಗೆ

10:51 PM Jan 25, 2021 | Team Udayavani |

ಕುಂದಾಪುರ:  ತ್ರಾಸಿ ಹಾಗೂ ನಾಡ ಗ್ರಾಮಗಳನ್ನು ಸಂಪರ್ಕಿಸುವ ಮೊವಾಡಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಯನ್ನು ಮೊದಲಿದ್ದ ಕರಡು ಯೋಜನೆಗಿಂತ ಹೆಚ್ಚು ದೂರದವರೆಗೆ ವಿಸ್ತರಿಸಲು ಈಗ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಿಂದ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ವಾರದೊಳಗೆ ಸಂಪರ್ಕ ರಸ್ತೆಯ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.

Advertisement

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ಸೇತುವೆ ನಿರ್ಮಾಣಕ್ಕೆ 9.28 ಕೋ.ರೂ. ಅನುದಾನ ಮಂಜೂರಾಗಿತ್ತು. ಈಗ ಸೇತುವೆಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸಂಪರ್ಕ ರಸ್ತೆ ಕಾಮಗಾರಿ ಆಗದಿರುವುದರಿಂದ ಸೇತುವೆಯು ವಾಹನ ಸಂಚಾರಕ್ಕೆ ಮುಕ್ತವಾಗಲು ವಿಳಂಬವಾಗಿದೆ.

ತಲಾ 100 ಮೀ. ವಿಸ್ತರಣೆ :

ಈ ಸೇತುವೆಯನ್ನು ಮೊವಾಡಿ ಹಾಗೂ ನಾಡ ಕಡೆಯಿಂದ ಸಂಪರ್ಕಿಸುವ ಕಡೆಗಳಲ್ಲಿ ತಲಾ 35 ಮೀ. ರಸ್ತೆ ನಿರ್ಮಾಣಕ್ಕೆ ಈ ಮೊದಲು ತಯಾರಿಸಿದ ಕರಡು ನಕ್ಷೆಯಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಇದರಿಂದ ಅಷ್ಟೇನು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಊರವರ ಬೇಡಿಕೆ ಮೇರೆಗೆ ರಸ್ತೆ ವಿಸ್ತರಣೆಗೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಈಗ ಮೊವಾಡಿ ಕಡೆಯಿಂದ 103 ಮೀ. ಹಾಗೂ ನಾಡ ಕಡೆಯಿಂದ 100 ಮೀ. ರಸ್ತೆ ವಿಸ್ತರಣೆಯಾಗಲಿದೆ.

ಹತ್ತಿರದ ಮಾರ್ಗ :

Advertisement

ಮೊವಾಡಿ ನಿವಾಸಿಗಳಿಗೆ ತ್ರಾಸಿ ಅಥವಾ ಮುಳ್ಳಿಕಟ್ಟೆಗೆ ಬರಲು ಕನಿಷ್ಠ 3 ಕಿ.ಮೀ. ದೂರವಿದೆ. ಆದರೆ ಸೇತುವೆಯಾದರೆ ನಾಡ ಪೇಟೆಗಿರುವ ಅಂತರ ಕೇವಲ 1 ಕಿ.ಮೀ. ಮಾತ್ರ. ಮೊವಾಡಿಯಲ್ಲಿ ಕ್ರಿಶ್ಚಿಯನ್‌ ಸಮುದಾಯದವರು ಹೆಚ್ಚಿರುವುದರಿಂದ ಪಡುಕೋಣೆ ಇಗರ್ಜಿಗೆ ಹೋಗಲು ಕೂಡ ಹತ್ತಿರದ ಮಾರ್ಗವಾಗಿದೆ. ಈ ಭಾಗದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಸೇತುವೆಯಿಂದ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ.

ಸುದಿನ ವರದಿ :

ಈ ನಾಡ – ಮೊವಾಡಿ ಸೇತುವೆ ನಿರ್ಮಾಣ, ಕಾಮಗಾರಿ ವಿಳಂಬ, ರಸ್ತೆಗಾಗಿ ಜಾಗ ಭೂಸ್ವಾಧೀನ ಆಗದಿರುವ ಕುರಿತಂತೆ “ಉದಯವಾಣಿ ಸುದಿನ’ವು ಅನೇಕ ಬಾರಿ ವಿಶೇಷ ವರದಿಗಳನ್ನು ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು.

ಮೊವಾಡಿಯ ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ವಿಸ್ತರಣೆಗೆ ನಾವು ಪ್ರಸ್ತಾವ ಕಳುಹಿಸಿದ್ದೆವು. ಅದಕ್ಕೀಗ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಸಹ ನಡೆಸಿ, ಭೂಸ್ವಾಧೀನ ಪಡಿಸಿಕೊಳ್ಳುವ ಮಾಲಕರಿಗೆ ಕೊಡಬೇಕಾದ ದರ ಪಟ್ಟಿಯನ್ನು ಕೂಡ ನಿಗದಿಪಡಿಸಲಾಗಿದೆ. ವಾರದೊಳಗೆ ರಸ್ತೆ ಕಾಮಗಾರಿ ಆರಂಭಗೊಳ್ಳಲಿದ್ದು, ಮಾರ್ಚ್‌ನೊಳಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.– ಸಂಗಮೇಶ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next