Advertisement
ಓಹ್! ಇದೆಂತಹ ಸರ್ಪ್ರೈಜ್ ಕೊಟ್ಟಿರಿ ಮಂಸೋರೆ? ಎಲ್ಲಾ ನಿನ್ನೆ ಮೊನ್ನೆ ನಡೆದ ಹಾಗಿದೆ. ಕತೆಯ ಬಗ್ಗೆ ನಡೆದ ಚರ್ಚೆಗಳು, ಗಂಟೆಗಟ್ಟಲ್ಲೆ ಆಡಿದ ಮಾತುಗಳು, ನಾನು ಬರೆದ ಮೊದಲ ವರ್ಷನ್ ಅನ್ನು ನೀವು ಸಾರಾಸಗಟಾಗಿ ನಿರಾಕರಿಸಿದ್ದು, ಒಂದು ಮಧ್ಯರಾತ್ರಿ ಇಲ್ಲ ಇನ್ನು ನನ್ನಿಂದ ಬರೆಯಲಾಗದು ಎನ್ನಿಸಿ ನಾನು ನಿಮಗೆ `ನನ್ನಿಂದ ಆಗೋಲ್ಲ, ಪ್ಲೀಸ್ ಬೇರೆ ಯಾರ ಬಳಿಯಾದರೂ ಕತೆ ಬರೆಸಿಕೊಳ್ಳಿ ಎಂದು ಹೇಳಿದ್ದು, ಮತ್ತೆ ನೀವು ‘ಇಲ್ಲ ಮೇಡಂ, ಇದನ್ನು ನೀವೇ ಬರೆಯಬೇಕು, ನಿಮ್ಮಿಂದ ಆಗುತ್ತೆ ಎಂದು ಧೈರ್ಯ ತುಂಬಿದ್ದು… ಎಲ್ಲಾ ಈಗ ಮತ್ತೆ ನೆನಪಾಗುತ್ತಿದೆ. Thank you for not giving up on me? ನೀವು ಮೊದಲ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಪಡೆದ ನಿರ್ದೇಶಕರು, ನಾನೋ ಚಿತ್ರದ ಕಥೆ ಇರಲಿ, ಒಂದು ಕಥೆಯನ್ನೂ ಇನ್ನೂ ಬರೆಯದವಳು. ಹಾಗಿದ್ದೂ ನೀವಿಟ್ಟ ನಂಬಿಕೆಗೆ ನಾನು ಸದಾ ಋಣಿ. ಆಮೇಲೆ ನೀವು ಹೇಳಲು ಪ್ರಾರಂಭಿಸಿದಿರಿ, ‘ಮೇಡಂ ಈ ಕಥೆಯಲ್ಲಿ ನೀವಿಲ್ಲ, ನೀವು ಹೇಗೆ ಪ್ರತಿಕ್ರಯಿಸುವಿರಿ ಎನ್ನುವುದು ನನಗೆ ಬೇಡ. ಈಗ ಅವಳು ಹೇಗೆ ಯೋಚಿಸಬಹುದು ಎಂದು ನೋಡಿ’, ‘ಇಂತಹ ಪರಿಸ್ಥಿತಿಯಲ್ಲಿ ಅವಳು ಹೇಗೆ ಪ್ರತಿಕ್ರಯಿಸುತ್ತಾಳೆ?’, ‘ಅವಳು ಈ ಮಾತನ್ನು ಆಡುವಳೆ?’…. ನಾನೂ ಸ್ವಲ್ಪ ಸ್ವಲ್ಪ ಅವಳಾಗುತ್ತಾ ಹೋದೆ. ತಮಾಶೆ ಎಂದರೆ ಕಡೆಗೆ ಕಥೆ ಮುಗಿದು, ನಿಮಗೆ ಓಕೆ ಆದ ನಂತರ ನಾನು ಪ್ರಯತ್ನಪೂರ್ವಕವಾಗಿ, ‘ಸಂಧ್ಯಾ ಈಗ ಹೇಗೆ ಪ್ರತಿಕ್ರಿಯಿಸುತ್ತಾಳೆ’ ಎಂದು ನನ್ನನ್ನೇ ನಾನು ಕೇಳಿಕೊಳ್ಳಬೇಕಾಯ್ತು! ಥ್ಯಾಂಕ್ಯೂ ಮಂಸೋರೆ, ನನ್ನನ್ನು ಈ ಕನಸಿನ ಭಾಗವಾಗಿಸಿದ್ದಕ್ಕೆ. ನೀವು ಇದಕ್ಕಾಗಿ ಹೇಗೆ ಕೆಲಸ ಮಾಡಿದ್ದೀರಿ ಎಂದು ಬಲ್ಲೆ, ಇಡೀ ತಂಡ ಇದಕ್ಕಾಗಿ ಹೇಗೆ ಕೈ ಜೋಡಿಸಿದೆ ಎಂದು ಬಲ್ಲೆ. ಅಂದು ತಾಂತ್ರಿಕ ಪ್ರದರ್ಶನ ಆದಾಗ ನನ್ನ ಕಣ್ಣುಗಳಲ್ಲಿ ನೀರಿದ್ದವು, ನಿಮಗೆ ಏನೂ ಹೇಳಲಾಗಿರಲಿಲ್ಲ, ‘ಥ್ಯಾಂಕ್ಯೂ’ ಎಂದು ಮಾತ್ರ ಹೇಳಿ ಹೊರಟುಬಿಟ್ಟೆ. ಥ್ಯಾಂಕ್ಯೂ ಮತ್ತೊಮ್ಮೆ… ಅಂದಹಾಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನನ್ನ ಕನಸಿನ ಕಥೆಯನ್ನು ಜನ ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ. Advertisement
ನಾತಿಚರಾಮಿ ಸಿನಿಮಾದಕಥೆಗಾರ್ತಿ ಸಂಧ್ಯಾರಾಣಿ ನಿರ್ದೇಶಕರಿಗೆ ಬರೆದ ಪತ್ರ
11:32 AM Dec 26, 2018 | |
Advertisement
Udayavani is now on Telegram. Click here to join our channel and stay updated with the latest news.