ಮಣಿಪಾಲ: ನಬಾರ್ಡ್ ನಿಂದ ಉಡುಪಿ ಜಿಲ್ಲೆಗೆ 2023-24ನೇ ಸಾಲಿಗೆ 10,689.27 ಕೋ.ರೂ. ಸಾಲವನ್ನು ವಿವಿಧ ವಲಯಗಳಿಗೆ ಮೀಸಲಿಡಲಾಗಿದೆ. 2022-23ನೇ ಸಾಲಿನಲ್ಲಿ 12,659.26 ಕೋ.ರೂ. ಮೀಸಲಿಡಲಾಗಿತ್ತು.
ಜಿ.ಪಂ. ಸಭಾಂಗಣದಲ್ಲಿ ಮಂಗಳ ವಾರ ಜಿಲ್ಲೆಯ ಬ್ಯಾಂಕ್‌ಗಳ ತ್ತೈಮಾಸಿಕ ಪ್ರಗತಿಪರಿಶೀಲನೆ ಸಭೆಯಲ್ಲಿ 2023- 24ನೇ ಸಾಲಿನ ಸಾಲ ಯೋಜನೆಯನ್ನು ಜಿ.ಪಂ. ಸಿಇಒ ಪ್ರಸನ್ನ ಎಚ್. ಬಿಡುಗಡೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ನಬಾರ್ಡ್ ಡಿಡಿಎಂ ಸಂಗೀತಾ ಕರ್ತಾ ಅವರು, ಬೆಳೆ ಉತ್ಪತ್ತಿ, ನಿರ್ವಹಣೆ ಮತ್ತು ಮಾರುಕಟ್ಟೆ, ಕೃಷಿ ಸಾಲ ಮತ್ತು ಸಂಬಂಧಿತ ಚಟುವಟಿಕೆ, ಕೃಷಿ ಮೂಲಸೌಕರ್ಯ, ಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಲಕ್ಕಾಗಿ 5,759 ಕೋಟಿ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 1,355 ಕೋ.ರೂ. ಬೆಳೆ ಉತ್ಪಾದನೆ, ನಿರ್ವಹಣೆ ಮತ್ತು ಮಾರುಕಟ್ಟೆ ಮೀಸಲಿಟ್ಟರೆ, 1,635 ಕೋ.ರೂ.ಗಳನ್ನು ಕೃಷಿ ಸಾಲ ಮತ್ತು ಇತರ ಚಟುವರಿಕೆಗೆ, 465 ಕೋ.ರೂ.ಗಳನ್ನು ಕೃಷಿ ಮೂಲಸೌಕರ್ಯಕ್ಕೆ ಹಾಗೂ ಕೃಷಿ ಪೂರಕ ಚಟುವಟಿಕೆ ಪ್ರೋತ್ಸಾಹಿಸಲು 2,302 ಕೋ.ರೂ. ಮೀಸಲಿಡಲಾಗಿದೆ. ಕಿರು ಸಣ್ಣ ಮತ್ತು ಮಧ್ಯಮ ಉದ್ಯಮಕ್ಕಾಗಿ 3,559 ಕೋಟಿ ರೂ., ರಫ್ತು ವಿಭಾಗಕ್ಕೆ ಸಂಬಂಧಿಸಿದ ಕೈಗಾರಿಕೆ, ಸ್ಥಾವರ ಇತ್ಯಾದಿ ನಿರ್ಮಾಣದ ಸಾಲಸೌಲಭ್ಯಕ್ಕೆ 304 ಕೋಟಿ ರೂ., ಶೈಕ್ಷಣಿಕ ಸಾಲಕ್ಕಾಗಿ 126 ಕೋಟಿ ರೂ., ಗೃಹ ನಿರ್ಮಾಣ ಸಾಲಕ್ಕಾಗಿ 832 ಕೋಟಿ ರೂ., ನವೀಕೃತ ಇಂಧನಕ್ಕೆ ಸಂಬಂಧಿಸಿದಂತೆ (ಸೋಲಾರ್ ಪ್ಲಾಂಟ್ ಇತ್ಯಾದಿ) ಸಾಲಕ್ಕಾಗಿ 39 ಕೋಟಿ ರೂ. ಸಾಮಾಜಿಕ ಮೂಲಸೌಲಭ್ಯಕ್ಕೆ 68 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಮುಂದಿನ ಸಾಲಿನಲ್ಲಿ ಪಶು ಸಂಗೋಪನೆ, ಮೀನುಗಾರಿಕ ಚಟು ವಟಿಕೆ, ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ ಮತ್ತು ಎಂಎಸ್‌ಎಂಇ ಘಟಕಗಳಿಗೆ ಸಾಲ ನೀಡುವ ವ್ಯವಸ್ಥೆಯನ್ನು ಶೇ. 23ರಷ್ಟು ಹೆಚ್ಚಿಸಲಾಗಿದೆ ಎಂದರು.
ಆರ್‌ಬಿಐ ಕಾರ್ಯನಿರ್ವಾಹಕ ಮುರಲಿ ಮೋಹನ್ ಪಾಠಕ್, ಯುಬಿಐ ಆರ್‌ಎಂ ಡಾ| ವಾಸಪ್ಪ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1ರ ಎಜಿಎಂ ಸಂಜೀವ್ ಕುಮಾರ್, ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಪಿ.ಎಂ. ಪಿಂಜಾರ, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.