Advertisement

ಥಿಯೇಟರ್‌ಗೆ ಬರಲು ತಯಾರಾದ ‘ನಾನು ಕುಸುಮ’

04:48 PM Jun 19, 2023 | Team Udayavani |

ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ತಯಾರಾಗಿರುವ, ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ‘ನಾನು ಕುಸುಮ’ ಸಿನಿಮಾ, ಇದೇ ಜೂನ್‌ 30ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ, ಪ್ರೇಕ್ಷಕರ ಮುಂದೆ ಬರುತ್ತಿದೆ.

Advertisement

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುವ ಹುಡುಗಿಯೊಬ್ಬಳು ಅಲ್ಲಿ ಏನೇನು ಶೋಷಣೆಗಳನ್ನು ಅನುಭವಿಸುತ್ತಾಳೆ ಎನ್ನುವುದರ ಸುತ್ತ “ನಾನು ಕುಸುಮ’ ಸಿನಿಮಾದ ಕಥಾಹಂದರ ಸಾಗುತ್ತದೆ. ಗ್ರೀಷ್ಮಾ ಶ್ರೀಧರ್‌, ಸನಾತನಿ ಜೋಶಿ, ಕಾವ್ಯಾ ಶ್ರೀಧರ್‌, ಕೃಷ್ಣೇಗೌಡ, ಸೌಮ್ಯ ಭಾಗವತ್‌, ಪ್ರತಿಭಾ ಸಂಶಿಮಠ್, ವಿಜಯ್‌ ಮೊದಲಾದವರು “ನಾನು ಕುಸುಮ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ “14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡು “ಪ್ರಥಮ ಅತ್ಯುತ್ತಮ ಕನ್ನಡ ಚಿತ್ರ’ ಪ್ರಶಸ್ತಿ ಪಡೆದುಕೊಂಡಿರುವ “ನಾನು ಕುಸುಮ’ ಈಗಾಗಲೇ “ಇಂಡಿಯನ್‌ ಪನೋರಮಾ’, “ರಾಜಸ್ಥಾನ್‌ ಫಿಲಂ ಫೆಸ್ಟಿವಲ್’, “ತ್ರಿಶೂರ್‌ ಫಿಲಂ ಫೆಸ್ಟಿವಲ್’ ಹೀಗೆ ಹಲವು ಪ್ರತಿಷ್ಠಿತ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿ, ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿದೆ.

“ನಾನು ಕುಸುಮ’ ಸಿನಿಮಾಕ್ಕೆ ಅರ್ಜುನ್‌ ರಾಜಾ ಛಾಯಾಗ್ರಹಣವಿದೆ. ಬೆಂಗಳೂರು ಸುತ್ತಮುತ್ತ ನಾನು ಕುಸುಮ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಸ್ಪತ್ರೆ, ವಾರ್ಡ್‌, ಗಲ್ಲಿ, ಮನೆ… ಹೀಗೆ ಸಿನಿಮಾದಲ್ಲಿ ಬರುವ ಎಲ್ಲ ಸ್ಥಳಗಳನ್ನು ನೈಜ ಲೊಕೇಶನ್‌ಗಳಲ್ಲೇ ಚಿತ್ರೀಕರಿಸಲಾಗಿದ್ದು, ಸಿಂಕ್‌ಸೌಂಡ್‌ನ‌ಲ್ಲಿ ಹಿನ್ನೆಲೆ ಧ್ವನಿಗ್ರಹಣ ಮಾಡಿರುವುದು ಸಿನಿಮಾದ ಮತ್ತೂಂದು ವಿಶೇಷತೆ.

ಸದ್ಯ ಈಗಾಗಲೇ ಚಿತ್ರೋತ್ಸವಗಳ ಮೂಲಕ ಚಿತ್ರರಂಗದಲ್ಲಿ ಅನೇಕ ಖ್ಯಾತನಾಮರ ಗಮನ ಸೆಳೆದಿರುವ “ನಾನು ಕುಸುಮ’ ಜೂನ್‌ 30 ರಂದು ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳ ಗಮನ ಸೆಳೆಯಲಿದೆ ಎಂಬುದು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next