Advertisement

ವೀರಮ್ಮ ಗಂಗಸಿರಿ ಮಹಿಳಾ ವಿದ್ಯಾಲಯಕ್ಕೆ NAAC A++ ಗ್ರೇಡ್

04:07 PM Jul 17, 2023 | Team Udayavani |

ಕಲಬುರಗಿ: ಈ ಭಾಗದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್ ಕೆಇ)ಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಾವಿದ್ಯಾಲಯಕ್ಕೆ ನ್ಯಾಕ್ ದಿಂದ ಎ++ ಗ್ರೇಡ್ ದೊರಕಿದ್ದು, ಈ ಶ್ರೇಣಿ ಪಡೆದ ರಾಜ್ಯದ ಏಕೈಕ ಮಹಿಳಾ ಮಹಾವಿದ್ಯಾಲಯವಾಗಿದೆ.

Advertisement

ಮಹಾವಿದ್ಯಾಲಯದ ಸರ್ವಾಂಗೀಣ ಸೌಲಭ್ಯ ಹಾಗೂ ಗುಣಮಟ್ಟತೆ ಆಧಾರದ ಮೇಲೆ ನ್ಯಾಕ್ (ನ್ಯಾಷನಲ್ ಅಸೆಸ್ ಮೆಂಟ್ ಆ್ಯಂಡ್ ಕೌನ್ಸಿಲ್) ಸಂಸ್ಥೆಯು ಎ++ ಗ್ರೇಡ್ ನೀಡಿದ್ದು, ಇದು ಹೆಮ್ಮೆ ತಂದಿದೆ ಎಂದು ಎಚ್ ಕೆಇ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದರು.

ಮಹಾವಿದ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ನ್ಯಾಕ್ ನ ಎ++ ಗ್ರೇಡ ದೊರಕಿರುವುದು ಎಚ್ ಕೆ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಪ್ರಸಕ್ತ ಸಾಲಿನ ಜೂನ್ 15 ಮತ್ತು 16ರಂದು ನ್ಯಾಕ್ ಸಮಿತಿಯು ಕೈಗೊಂಡ ಪರಿಶೀಲನೆ ಬಳಿಕ ನಾಲ್ಕರ ಪೈಕಿ 3.58 ಸಿಜಿಪಿಎ ಅಂಕಗಳನ್ನು ಪಡೆಯುವಲ್ಲಿ ಮಹಾವಿದ್ಯಾಲಯ ಯಶಸ್ವಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎ++ ಗ್ರೇಡ್ ಪಡೆದ ಏಕೈಕ ಮಹಿಳಾ ಕಾಲೇಜು ಎಂಬ ಕೀರ್ತಿ ವಿ.ಜಿ.ಮಹಿಳಾ ವಿದ್ಯಾಲಯಕ್ಕೆ ಲಭಿಸಿದಂತಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಯುಜಿಸಿಯಿಂದ ಹೊಸ ಹಾಗೂ ನಾವೀನ್ಯತೆಯ ಕೋರ್ಸ್ ಗಳು ನಮ್ಮ ಕಾಲೇಜಿಗೆ ಮತ್ತಷ್ಟು ಧಾರಾಳವಾಗಿ ಲಭಿಸಲಿವೆ ಎಂದು ಡಾ.ಬಿಲಗುಂದಿ ವಿವರಣೆ ನೀಡಿದರು.

ವಿಜಿ ಮಹಿಳಾ ಮಹಾವಿದ್ಯಾಲಯಕ್ಕೆ ಈ ಹಿಂದೆ 2004ರಲ್ಲಿ ಬಿ+ ಮತ್ತು 2011ರಲ್ಲಿ ಎ ಗ್ರೇಡ್ ಲಭಿಸಿತ್ತು. ಈ ಬಾರಿ ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಸೌಕರ್ಯದ ಗುಣಮಟ್ಟವನ್ನು ಪರಿಗಣಿಸಿ ಎ++ ಗ್ರೇಡ್ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

1965ರಲ್ಲಿ 15 ವಿದ್ಯಾರ್ಥಿನಿಯರಿಂದ ಆರಂಭಗೊಂಡ ಮಹಾವಿದ್ಯಾಲಯದಲ್ಲಿ ಪ್ರಸ್ತುತ 1500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಸಂಸ್ಥೆಯ ಅಡಿಯಲ್ಲಿ 55 ಅಂಗ ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಐಟಿಐ, ಪದವಿ ಕಾಲೇಜು, ಕಾನೂನು ವಿದ್ಯಾಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳು ಸಂಸ್ಥೆ ಅಡಿ ಕಾರ್ಯನಿರ್ವಹಿಸುತ್ತಿವೆ.‌ ಜಗತ್ತು ಯಾವ ಕಡೆ ನಡೆದಿದೆ. ಆ ಕಡೆ ಸಂಸ್ಥೆಯನ್ನು ಮುನ್ನೆಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭ: ಎಚ್ ಕೆ ಇ ಸಂಸ್ಥೆಯಲ್ಲಿ ಕೌಶಲ್ಯ ಅಭಿವೃದ್ಧಿ ಗೆ ಹೆಚ್ಚಿನ ಒತ್ತುನೀಡಲಾಗುತ್ತಿದೆ.‌ ಅದರಲ್ಲೂ ವಿ.ಜಿ.ಮಹಿಳಾ ವಿದ್ಯಾಲಯದಲ್ಲಿ ಪ್ರಸ್ತುತ ಕಲಾ ವಿಭಾಗ, ವಿಜ್ಞಾನ, ವಾಣಿಜ್ಯ ಪದವಿ ಕೋರ್ಸ್ ಜೊತೆಗೆ ಸಿ.ಎನ್.ಡಿ, ಮೈಕ್ರೊಬಯಾಲಜಿ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಬೋಧಿಸಲಾಗುತ್ತಿದೆ.  ಇದರ ಜೊತೆಗೆ ಎಂ.ಎಸ್ಸಿ ಭೌತಶಾಸ್ತ್ರ ಹಾಗೂ ಸಂಶೋಧನಾ ಕೇಂದ್ರ ಸಹ ಕಾರ್ಯನಿರ್ವಹಿಸುತ್ತಿದೆ. ಇದರೊಟ್ಟಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಫ್ಯಾಷನ್ ಡಿಸೈನಿಂಗ್, ಡೇಟಾ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೋರ್ಸ್ ಆರಂಭಿಸಲಾಗಿದೆ ಎಂದು ಡಾ.ಬಿಲಗುಂದಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಎಚ್.ಕೆ.ಇ ಸಂಸ್ಥೆ ಉಪಾಧ್ಯಕ್ಷ  ಡಾ. ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ.‌ಜಗನ್ನಾಥ ಬಿಜಾಪುರ, ಜಂಟಿ ಕಾರ್ಯದರ್ಶಿ ಮಹಾದೇವಪ್ಪ ರಾಂಪೂರೆ, ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಖಂಡೇರಾವ್, ಡಾ. ಅನೀಲ ಪಟ್ಟಣ, ಸಾಯಿನಾಥ ಪಾಟೀಲ್, ಕಾಲೇಜ್ ನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ, ಉಪ ಪ್ರಾಚಾರ್ಯ ಡಾ. ವೀಣಾ ಹೊನಗುಂಟಿಕರ್, ನ್ಯಾಕ್ ಸಮಿತಿ ಬಂದಾಗ ಸಂಯೋಕರಾಗಿ ವಿವರಣೆ ನೀಡಿದ್ದ ಡಾ.ಶಿವರಾಜ ಗವನಳ್ಳಿ, ಡಾ. ಮೋಹನರಾಜ್ ಪತ್ತಾರ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next