ಆತ ಹಳ್ಳಿಯಲ್ಲಿರುವ ಅವಿದ್ಯಾವಂತ ಹುಡುಗ ರಂಗ. ಯಾವುದೇ ಕೆಲಸವಿಲ್ಲದೆ ಊರಿನಲ್ಲಿ ತನ್ನ ವಯಸ್ಸಿನ ಹುಡುಗರ ಜೊತೆ ಅಡ್ಡಾಡಿಕೊಂಡಿರುವ ರಂಗನಿಗೆ ತನ್ನ ತಾಯಿ ಮತ್ತು ಕೋಳಿ ಎರಡೇ ಪ್ರಪಂಚ. ಇಂಥ ರಂಗನ ಜೀವನದಲ್ಲಿ ಬರುವ ಅನಿರೀಕ್ಷಿತ ಸನ್ನಿವೇಶವೊಂದು, ತಾಯಿ ಅಥವಾ ಕೋಳಿ ಇವೆರಡಲ್ಲಿ ಯಾವುದು
ಮುಖ್ಯ ಎಂಬ ಪರೀಕ್ಷೆಗೆ ರಂಗನನ್ನು ಸಿಲುಕಿಸುತ್ತದೆ. ಇಂಥ ಸನ್ನಿವೇಶವನ್ನು ಹಳ್ಳಿಯ ಹುಡುಗ ರಂಗ ಹೇಗೆ ಎದುರಿಸುತ್ತಾನೆ? ತಾಯಿ ಮತ್ತು ಕೋಳಿ ಎರಡರಲ್ಲಿ ರಂಗನಿಗೆ ಯಾವುದು ಮುಖ್ಯವಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ನಾ ಕೋಳಿಕ್ಕೆ ರಂಗ’ ಸಿನಿಮಾದ ಕಥಾಹಂದರ.
ಸಿನಿಮಾದ ಹೆಸರೇ ಹೇಳುವಂತೆ, “ನಾ ಕೋಳಿಕ್ಕೆ ರಂಗ’ ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಹಳ್ಳಿಯ ಜನ-ಜೀವನ, ಪ್ರೀತಿ, ಸ್ನೇಹ, ಆಚರಣೆ ಎಲ್ಲದರ ಜೊತೆಗೆ ಸಿನಿಮಾದ ಕಥಾಹಂದರ ಸಾಗುತ್ತದೆ. ಕಾಮಿಡಿ, ಲವ್, ಸೆಂಟಿಮೆಂಟ್, ಹಾಡು, ಡ್ಯಾನ್ಸ್ ಹೀಗೆ ಎಲ್ಲ ಥರದ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕೆಲ ಅನಗತ್ಯ ಸನ್ನಿವೇಶಗಳಿಗೆ ಕತ್ತರಿ ಹಾಕಿ, ಚಿತ್ರಕಥೆಗೆ ಇನ್ನಷ್ಟು ವೇಗ ನೀಡಿದ್ದರೆ, ರಂಗನ ಓಟ ಇನ್ನಷ್ಟು ರಂಗಾಗಿರುವ ಸಾಧ್ಯತೆಗಳಿದ್ದವು.
ಇನ್ನು ಇಡೀ ಸಿನಿಮಾದಲ್ಲಿ ಹೈಲೈಟ್ಸ್ ನಾಯಕ ಮಾಸ್ಟರ್ ಆನಂದ್ ಮತ್ತು ಕೋಳಿ ನಡುವಿನ ಭಾವನಾತ್ಮಕ ಸನ್ನಿವೇಶಗಳು. ಆನಂದ್, ಭವ್ಯಾ ಮತ್ತು ನವ ನಾಯಕಿ ರಾಜೇಶ್ವರಿ ಅಭಿನಯ ನೋಡುಗರ ಗಮನ ಸೆಳೆಯುತ್ತದೆ. ಉಳಿದಂತೆ ಚಿರಪರಿಚಿತ ಕಲಾವಿದರ ದೊಡ್ಡ ದಂಡೇ ಸಿನಿಮಾದಲ್ಲಿದೆ. ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಹಳ್ಳಿ ಸೊಬಗನ್ನು ರಂಗುರಂಗಾಗಿ ಕಾಣುವಂತೆ ಮಾಡಿದೆ.
ಕೈಲಾಶ್ ಖೇರ್ ಗಾಯನದ “ಮರೆಯೋದುಂಟೆ ಮೈಸೂರು ದೊರೆಯ…’ ಸೇರಿದಂತೆ “ನಾ ಕೋಳಿಕ್ಕೆ ರಂಗ’ ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದೆ. ಒಟ್ಟಾರೆ ಮಾಸ್ ಆಡಿಯನ್ಸ್ ಬಯಸುವ ಎಲ್ಲ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳೂ “ರಂಗ’ನಲ್ಲಿದ್ದು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಜಿ.ಎಸ್.ಕೆ.ಸುಧನ್