ಎನ್.ಆರ್.ಪುರ: ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯತ್‌ನ ಸಾರ್ಯ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಗ್ರಾಮದ ಟಿಸಿಯೊಂದಕ್ಕೆ ಬಹಿಷ್ಕಾರದ ಬ್ಯಾನರ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ಯಗ್ರಾಮಸ್ಥರು ಆರೋಪಿಸಿದಂತೆ ಮುಖ್ಯವಾಗಿ ಸ್ವಾತಂತ್ರ್ಯ ಬಂದು 72 ವರ್ಷವಾದರೂ ದೂರ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ಬಿ.ಎಸ್.ಎನ್.ಎಲ್ ಆಗಲೀ ಅಥವಾ ಖಾಸಗಿ ಕಂಪನಿಯ ಟವರ್ ಆಗಿಲೀ ಇಲ್ಲ. ದೂರವಾಣಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಲ್ಲಿನ ಗ್ರಾಮಸ್ಥರು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದೇವೆ. ಆನೆ ಹಾಗೂ ಇತರ ಕಾಡು ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಆನೆ ಬರದಂತೆ ಅರಣ್ಯ ಇಲಾಖೆಯವರು ಟ್ರಂಚ್ ಪ್ರಾರಂಭಿಸಿದ್ದರೂ ಅರ್ಧಕ್ಕೆ ನಿಲ್ಲಿಸಲಾಗಿದೆ.
ಅರಣ್ಯ ಹಕ್ಕು ಸಮಿತಿಗೆ ಭೂಮಿ ಮಂಜೂರು ಮಾಡಲು ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಗಳನ್ನು ವಜಾ ಮಾಡಲಾಯಿತು. ನಂತರ ಎ.ಸಿ.ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆವು. ಆದರೆ ಇದುವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಚುನಾವಣಾ ಬಹಿಷ್ಕಾರದ ವಿಷಯ ಹಬ್ಬುತ್ತಿದ್ದಂತೆ ಹೊನ್ನೇಕೊಡಿಗೆ ಗ್ರಾಮ ಪಂಚಾಯತ್‌ಗೆ ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಸೆಕ್ಟರ್ ಅಧಿಕಾರಿ ಹಾಗೂ ಇ.ಇ.ಒ ಹೊಂಗಯ್ಯ, ಎ.ಎಸ್.ಐ.ವರ್ಗೀಸ್, ನಾಗಲಾಪುರ ಗ್ರಾಮ ವೃತ್ತದ ಗ್ರಾಮ ಲೆಕ್ಕಿಗ ವಿಶ್ವನಾಥ, ಹೊನ್ನೇಕೊಡಿಗೆ ಪಿ.ಡಿ.ಒ.ಜೋಸೆಫ್ ಆಗಮಿಸಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗ್ರಾಮಸ್ಥರ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಮಾತನಾಡಿ, ಮತದಾನ ಎಲ್ಲರ ಹಕ್ಕಾಗಿದೆ. ಗ್ರಾಮದ ಸಮಸ್ಯೆಗಳನ್ನು ಹಂತ, ಹಂತವಾಗಿ ಬಗೆಹರಿಸುತ್ತೇವೆ. ನಿಮ್ಮ ಚುನಾವಣಾ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತ್ ಕಚೇರಿಯಿಂದಲೇ ಬಿ.ಎಸ್.ಎನ್. ಎಲ್.ಅಧಿಕಾರಿಗಳೊಂದಿಗೆ ಮಾತನಾಡಿ ಸಾರ್ಯ ಗ್ರಾಮಕ್ಕೆ ಟವರ್ ನಿರ್ಮಿಸುವಂತೆ ಸೂಚಿಸಿದರು. ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಈ ಸಮಸ್ಯೆಯನ್ನು ಹಂತ,ಹಂತವಾಗಿ ಬಗೆ ಹರಿಸುತ್ತೇವೆ. ಚುನಾವಣೆ ನಿಮ್ಮ ಹಕ್ಕಾಗಿದ್ದು ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು. ತಹಶೀಲ್ದಾರ್ ಮಾತು ಕೇಳಿದ ಗ್ರಾಮಸ್ಥರು ಮಾತನಾಡಿ, ನಿಮ್ಮ ಭರವಸೆಯಂತೆ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ, ಮುಂದೆಯೂ ಸಮಸ್ಯೆ ಉಳಿದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಸಿದರು. ಗ್ರಾಮಸ್ಥರಾದ ಸಾರ್ಯ
ನಾಗರಾಜ್, ಕಕೂìಟದ ಗುರುಮೂರ್ತಿ, ಕೂಸಗಲ್ ಪರಮೇಶ್, ಕರ್ಕೂಟದ ರಘು ಸೇರಿದಂತೆ 48 ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ನಡೆದ ಚರ್ಚೆಯ ನಡಾವಳಿಗಳನ್ನು ಗ್ರಾಮ ಪಂಚಾಯ್ತಿಯಲ್ಲಿ ದಾಖಲಿಸಲಾಯಿತು.