Advertisement

ಜಲ್ಲಿ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

01:08 PM Mar 04, 2020 | Naveen |

ಎನ್‌.ಆರ್‌.ಪುರ: ಡಾಂಬರ್‌ ರಸ್ತೆ ಅಗೆದು ಜಲ್ಲಿ ರಸ್ತೆ ಮಾಡಲು ಮುಂದಾದ ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ರಸ್ತೆ ಕಾಮಗಾರಿಯನ್ನು ತಡೆಹಿಡಿದ ಘಟನೆ ನಡೆದಿದೆ.

Advertisement

ಬಾಳೆ ಗ್ರಾಮ ಪಂಚಾಯಿತಿ ಅಳೇಹಳ್ಳಿ ಗ್ರಾಮದ ಹೊಸೂರಿನ ನಲ್ಲಿಮಕ್ಕಿ ರಸ್ತೆಯ ಕಾಮಗಾರಿಯನ್ನು ತಡೆಹಿಡಿದ ನಲ್ಲಿಮಕ್ಕಿ ಗ್ರಾಮದ ಮುಖಂಡ ಧರ್ಮರಾಜ್‌, ವೇಣು ಹಾಗೂ ಇತರ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ಈ ಹಿಂದೆ ಡಾಂಬರೀಕರಣ ರಸ್ತೆಯ ಮಧ್ಯದಲ್ಲಿ ಸಣ್ಣಪುಟ್ಟ ಗುಂಡಿಗಳು ಬಿದ್ದಿದ್ದವು.

ಆದರೂ ನಾವು ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಪ್ರಯಾಣ ಮಾಡುತ್ತಿದ್ದೆವು. ಆದರೆ, ಈಗ ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್‌ ವಿಭಾಗದವರು ಡಾಂಬರೀಕರಣ ರಸ್ತೆಯನ್ನು ಅಗೆದು ಜಲ್ಲಿ ರಸ್ತೆಯನ್ನು ಮಾಡಲು ಹೊರಟಿದ್ದಾರೆ ಎಂದು ದೂರಿದರು.

ರಸ್ತೆ ಕಾಮಗಾರಿಯ ವಿಚಾರ ಗ್ರಾಮಸ್ಥರ ಗಮನಕ್ಕೆ ತರದೇ ಭಾನುವಾರ ಸಂಜೆ ವೇಳೆ ಡಾಂಬರ್‌ ರಸ್ತೆಯನ್ನು ಅಗೆದು ರಸ್ತೆಯಲ್ಲಿದ್ದ ಜಲ್ಲಿಯನ್ನು ತೆಗೆದು ಅದೇ ಜಲ್ಲಿಯನ್ನು ರಸ್ತೆಯಲ್ಲಿ ಸಮತಟ್ಟು ಮಾಡಿದ್ದಾರೆ. ಜಲ್ಲಿ ಮೇಲೆ ಗ್ರಾವೆಲ್‌ ಮಣ್ಣು ಹಾಕಲು ಸಿದ್ಧತೆ ನಡೆಸಿದ್ದರು. ರಸ್ತೆಗೆ ಗ್ರಾವೆಲ್‌ ಮಣ್ಣು ಹಾಕಿದರೆ ಮಳೆಗಾಲದಲ್ಲಿ ರಸ್ತೆಯಲ್ಲಾ ಕೆಸರುಮಯವಾಗಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಡಾಂಬರೀಕರಣ ಮಾಡಿ ಎಂದರೆ ಜಿಲ್ಲಾ ಪಂಚಾಯಿತಿಯಿಂದ
2 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಎಷ್ಟು ಕೆಲಸವಾಗುತ್ತದೇಯೋ ಅಷ್ಟನ್ನು ಮಾಡುತ್ತೇವೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಆದ್ದರಿಂದ ನಾವು ರಸ್ತೆಗೆ ಗ್ರಾವೆಲ್‌ ಮಣ್ಣು ಹಾಕುವುದನ್ನು ತಡೆಹಿಡಿದ್ದೇವೆ. ಈ ರಸ್ತೆಗೆ ಮೊದಲಿನಂತೆ ಡಾಂಬರೀಕರಣ ಮಾಡಬೇಕು ಎಂಬುದೇ ನಮ್ಮ ಆಗ್ರಹವಾಗಿದೆ ಎಂದರು.

Advertisement

ಗ್ರಾಮಸ್ಥರ ಅನುಮತಿ ಪಡೆದೇ ಕಾಮಗಾರಿ
ಜಿಲ್ಲಾ ಪಂಚಾಯ್ತಿ ಇಂಜಿನಿಯರ್‌ ಮಮತಾ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮಸ್ಥರ ಅನುಮತಿ ಪಡೆದು ನಾವು ಈ ರಸ್ತೆ ಕಾಮಗಾರಿಗೆ ಮುಂದಾಗಿದ್ದೇವೆ. ಸಂಪೂರ್ಣ ಹಾಳಾಗಿದ್ದ ಡಾಂಬರ್‌ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾವು ಕಾಮಗಾರಿ ಕೈಗೊಂಡಿದ್ದೇವೆ. ಈಗ ಅವರು ನಮಗೆ ಡಾಂಬರ್‌ ರಸ್ತೆಯೇ ಬೇಕು ಎನ್ನುತ್ತಿದ್ದಾರೆ. ಈಗಾಗಲೇ 200 ಮೀಟರ್‌ ರಸ್ತೆ ಅಗೆಯಲಾಗಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಡಾಂಬರ್‌ ರಸ್ತೆಯೇ ಬೇಕು ಎಂದರೆ 2 ಲಕ್ಷ ರೂ.ನಲ್ಲಿ 130 ಮೀಟರ್‌ ಡಾಂಬರ್‌ ರಸ್ತೆ ಮಾತ್ರ ಮಾಡಬಹುದು. ಇನ್ನುಳಿದ 70 ಮೀಟರ್‌ ರಸ್ತೆ ಹಾಗೆಯೇ ಬಿಡಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next