Advertisement

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ತೊಂದರೆ: ಆರೋಪ

08:00 PM Oct 30, 2019 | Team Udayavani |

ಎನ್‌.ಆರ್‌.ಪುರ: ತಾಲೂಕು ಕೇಂದ್ರದಿಂದ ಶಿವಮೊಗ್ಗಕ್ಕೆ ಹೋಗುವ ಮುಖ್ಯರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಪ್ರಸ್ತುತ ಧರೆ ಕುಸಿದು ಬೃಹತ್‌ ಗಾತ್ರದ ಮರಗಳು ಧರೆಗುರುಳುವ ಸ್ಥಿತಿಗೆ ತಲುಪಿವೆ ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಕಳೆದ ಎರಡು ವರ್ಷಗಳ ಹಿಂದೆ ಶಿವಮೊಗ್ಗದ ಮುಖ್ಯರಸ್ತೆ ಮಡಬೂರು ಗ್ರಾಮದ ಸಮೀಪ ಉಬ್ಬುತಗ್ಗಿನಿಂದ ಕೂಡಿದೆ ಎಂಬ ಕಾರಣಕ್ಕೆ ಉಬ್ಬುಗಳಿದ್ದ ರಸ್ತೆಯನ್ನು ಸಮತಟ್ಟಾಗಿ ನಿರ್ಮಿಸಲಾಯಿತು. ಹೀಗೆ ರಸ್ತೆಗಳನ್ನು ಸಮತಟ್ಟಾಗಿ ನಿರ್ಮಿಸುವಾಗ ಅ ಧಿಕ ಉಬ್ಬುಗಳಿದ್ದ ಸ್ಥಳದಲ್ಲಿ ರಸ್ತೆಯ ಎರಡೂ ಕಡೆ ರಸ್ತೆಯನ್ನು ವಿಸ್ತರಿಸುವಾಗ ಭಾರೀ ಪ್ರಮಾಣದಲ್ಲಿ ಮಣ್ಣನ್ನು ಅಗೆದಿದ್ದರಿಂದ ಎರಡೂ ಭಾಗದಲ್ಲೂ ಎತ್ತರದ ದಿಣ್ಣೆ ನಿರ್ಮಾಣವಾಗಿತ್ತು.

ಹೀಗೆ ದಿಣ್ಣೆಯ ಮಣ್ಣನ್ನು ಅಗೆಯುವಾಗ ಭಾರೀ ಮರಗಳು ಇರುವ ಜಾಗದಲ್ಲಿ ಮರದ ಬುಡದವರೆಗೂ ಸುಮಾರು ಅರ್ಧ ಕಿ.ಮೀ. ನಷ್ಟು ದೂರ ಮಣ್ಣನ್ನು ಅಗೆಯಲಾಗಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಸುರಿದ ಭಾರೀ ಮಳೆಗೆ ಮಣ್ಣು ಕುಸಿಯುತ್ತ ಸಾಗಿದೆ. ಪ್ರಸ್ತುತ ವರ್ಷ ಭಾರೀ ಮಳೆ ಸುರಿಯುತ್ತಿರುವುದರಿಂದ ಧರೆ ಕುಸಿದು ಮರದ ಬುಡದಲ್ಲಿದ್ದ ಮಣ್ಣು ಕುಸಿಯಲು ಪ್ರಾರಂಭಿಸಿದೆ ಎಂದು ದೂರಿದ್ದಾರೆ.

ಮಳೆ ಮುಂದುವರೆದರೆ ಭಾರೀ ಗಾತ್ರದ ಮರಗಳು ರಸ್ತೆ ಮೇಲೆ ಯಾವುದೇ ಸಂದರ್ಭದಲ್ಲಿ ಬಿಳುವ ಸಾಧ್ಯತೆಯಿದೆ. ರಸ್ತೆ ನಿರ್ಮಾಣ ಮಾಡುವಾಗ ಇಲಾಖೆ ಮಾಡಿರುವ ಮತ್ತೂಂದು ಪ್ರಮಾದವೆಂದರೆ ಇನ್ನೊಂದು ಭಾಗದಲ್ಲಿ 33/11 ಕೆ.ವಿ. ವಿದ್ಯುತ್‌ ಮಾರ್ಗ ಹಾದು ಹೋಗಿದೆ. ಇದಕ್ಕಾಗಿ ದೊಡ್ಡ ವಿದ್ಯುತ್‌ ತಂತಿಯ ಟವರ್‌ ಅಳವಡಿಸಲಾಗಿದ್ದು, ಇದರ ಬುಡದ ಮಣ್ಣು ಸಹ ಅಗೆದಿರುವುದರಿಂದ ಈ ಭಾಗದಲ್ಲೂ ಮಣ್ಣು ಕುಸಿಯಲು ಪ್ರಾರಂಭವಾಗಿದೆ.

ಇವು ಸಹ ಯಾವುದೇ ಸಂದರ್ಭದಲ್ಲಿ ಧರೆಗುರುಳುವ ಸಾಧ್ಯತೆಯಿದೆ. ಅಲ್ಲದೇ, ಬಸ್‌ ತಂಗುದಾಣದ ಬುಡದವರೆಗೂ ಮಣ್ಣು ಅಗೆದಿರುವುದರಿಂದ ಇದು ಸಹ ಧರೆಗುರುಳುವ ಸಾಧ್ಯತೆಯಿದೆ ಎಂದಿದ್ದಾರೆ.

Advertisement

ಪ್ರಮುಖ ರಸ್ತೆಯಾಗಿರುವುದರಿಂದ ವಾಹನ ಸಂಚಾರ ನಿರಂತರವಾಗಿರುತ್ತದೆ. ವಾಹನ ಸಂಚರಿಸುವ ಸಂದರ್ಭದಲ್ಲಿ ಭಾರಿ ಗಾತ್ರದ ಮರಗಳು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶೆಟ್ಟಿಕೊಪ್ಪ ಮುಖ್ಯರಸ್ತೆಯ ಬದಿಯಲ್ಲಿರುವ ಒಣಗಿದ ಮರ ತೆರವುಗೊಳಿಸುವ ಬಗ್ಗೆ ಪತ್ರ ಬಂದಿದೆ. ಮಡಬೂರು ಗ್ರಾಮದ ರಸ್ತೆ ಬದಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಯ ಪತ್ರ ಬಂದ ನಂತರ ಪರಿಶೀಲಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮಣ್ಣು ಕುಸಿತದಿಂದ ಮರ ಅಥವಾ ವಿದ್ಯುತ್‌ ಮಾರ್ಗ ರಸ್ತೆಗೆ ಬಿದ್ದು ಅನಾಹುತ ಸಂಭವಿಸುವ ಮೊದಲೇ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next