Advertisement

ಅತಿವೃಷ್ಟಿ ಹಾನಿ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

04:27 PM Aug 14, 2019 | Team Udayavani |

ಎನ್‌.ಆರ್‌.ಪುರ: ಕೇಂದ್ರ ಸರ್ಕಾರ ಪ್ರಸ್ತುತ ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದರು.

Advertisement

ತಾಲೂಕಿನ ಮುತ್ತಿನಕೊಪ್ಪ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಕಳೆದ 80ವರ್ಷಗಳ ಅವಧಿಯಲ್ಲಿ 10 ದಿನಕ್ಕೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಅತಿವೃಷ್ಟಿ ಸಂಭವಿಸಿದೆ. ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನ, ಶೃಂಗೇರಿ ಶಾರದಾ ಪೀಠ, ಹರಿಹರಪುರ ಮಠದ ಬಹುತೇಕ ಭಾಗಗಳು ಜಲಾವೃತವಾಗಿವೆ. ಅನೇಕ ತಗ್ಗು ಪ್ರದೇಶದ ಗ್ರಾಮಗಳು ಮುಳುಗಡೆಯಾಗಿವೆ ಎಂದರು.

ಖಾಂಡ್ಯದ ಹರಿಜನ ಕಾಲೋನಿ ಸಂಪೂರ್ಣ ಜಲಾವೃತವಾಗಿದೆ. ಮಸಿಗದ್ದೆಯಲ್ಲಿ 7ರಿಂದ 8 ಮನೆಗಳು ಸಂಪೂರ್ಣ ನೆಲಕ್ಕುರಳಿವೆ. ಮಾಗುಂಡಿ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳು ಭದ್ರಾ ನೀರಿನಿಂದ ಜಲಾವೃತವಾಗಿವೆ. ಬಹುತೇಕ ಗ್ರಾಮಿಣ ರಸ್ತೆಗಳು ಶಿಥಿಲಗೊಂಡಿವೆ. ಭೂ ಕುಸಿತವುಂಟಾಗಿದೆ. ರಸ್ತೆ ಸೇತುವೆ ಕೊಚ್ಚಿಹೋಗಿದೆ ಎಂದು ತಿಳಿಸಿದರು.

ಕಂಟಕ-ದೋಣಿಸರ ಕಾಲು ಸೇತುವೆ, ಮಣ್ಣಿನಕೂಡಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆ ಕೊಚ್ಚಿಹೋಗಿದೆ. ಒಂದು ಸಾವಿರ ಎಕರೆಗೂ ಹೆಚ್ಚು ನಾಟಿ ಮಾಡಿದ ಜಮೀನು ಮುಳುಗಡೆಯಾಗಿದೆ. ಎನ್‌.ಆರ್‌.ಪುರ-ಬಾಳೆಹೊನ್ನೂರು, ಬಾಳೆಹೊನ್ನೂರು- ಮಾಗುಂಡಿ, ಕೊಪ್ಪ-ಜಯಪುರ ಸಂಪರ್ಕ ಸ್ಥಗಿತಗೊಂಡಿತ್ತು ಎಂದರು.

Advertisement

ಇಡೀ ರಾಜ್ಯದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಗಾಲಕ್ಕೂ ಮುನ್ನಾ ಮುಂಜಾಗೃತಾ ಕ್ರಮ ಕೈಗೊಂಡು ಎಲ್ಲಾ ಇಲಾಖೆ ಅಧಿಕಾರಗಳ ತಂಡ ರಚನೆ ಮಾಡಿ, ಅತಿವೃಷ್ಟಿ ವುಂಟಾದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿಗಳು ಸಭೆ ಮಾಡಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇದೆಲ್ಲದರ ಪರಿಣಾಮವಾಗಿ ಜನರ ಪ್ರಾಣ ಹಾನಿ ತಪ್ಪಿಸಲು ಸಾಧ್ಯವಾಗಿದೆ. ಅಧಿಕಾರಿಗಳು ಶ್ರಮ ವಹಿಸಿ ಕಾರ್ಯನಿರ್ವಹಿಸಿದ್ದಾರೆ ಎಂದರು.

4 ಹೊಸ ಮೋಟರ್‌ ಬೋಟ್, ಲೈಫ್‌ ಜಾಕೇಟ್, ಹಗ್ಗ ತರಿಸಿ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಲಾಗಿತ್ತು. ಎನ್‌ಡಿಆರ್‌ಎಫ್‌ ತಂಡಗಳು, ಎಸ್‌ಡಿಆರ್‌ಎಫ್‌ ತಂಡಗಳು, ಸ್ಥಳೀಯ ಈಜು ತಜ್ಞರು, ಯುವಕರು, ಅನಾಹುತವಾಗುವುದನ್ನು ತಪ್ಪಿಸಲು ಶ್ರಮ ವಹಿಸಿದ್ದಾರೆ ಎಂದರು.

ಬಹುತೇಕ ಮನೆ ಕಳೆದುಕೊಂಡವರಿಗೆ ಸಮುದಾಯ ಭವನ, ಚರ್ಚ್‌, ಮಸೀದಿ, ಶಾಲೆ, ವಿದ್ಯಾರ್ಥಿ ನಿಲಯ, ತೋಟಗಳ ವಸತಿ ನಿಲಯಗಳಲ್ಲಿ ಆಶ್ರಯ ನೀಡಲಾಗಿದೆ. ರಂಭಾಪುರಿ ಪೀಠ, ಶೃಂಗೇರಿ ಮಠ, ಹರಿಹರಪುರ ಮಠದವರು ಸಹ ಬಹುತೇಕ ಜನರಿಗೆ ಆಶ್ರಯ ನೀಡಿ, ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಸಮಿಶ್ರ ಸರ್ಕಾರ ಇದ್ದಾಗ ಜಿಲ್ಲೆಯ ಮೂರು ತಾಲೂಕುಗಳಿಗೆ ತುರ್ತು ಕಾಮಗಾರಿಗಾಗಿ ತಲಾ 50 ಲಕ್ಷ ರೂ.ಮಂಜೂರು ಮಾಡಿಸಿ ಮೀಸಲಿಡಲಾಗಿದೆ. ಹಾಗಾಗಿ, ಜನರು ಆತಂಕಪಡುವುದು ಬೇಡ. ಅತಿವೃಷ್ಟಿಯಿಂದ ಆಗಿರುವ ಅನಾಹುತಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದರ ಗಮನ ಸೆಳೆಯಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಗಮನ ಸೆಳೆದು ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ ಎಂದರು.

ಅತಿವೃಷ್ಟಿಯಲ್ಲೂ ಬಿಜೆಪಿ ರಾಜಕೀಯ: ಅತಿವೃಷ್ಟಿ ಸಂದರ್ಭದಲ್ಲೂ ಬಿಜೆಪಿ ಮಾಜಿ ಶಾಸಕರು ಸೇರಿದಂತೆ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಕೆಲವರು ಮಾನಹಾನಿಯಾಗುವ ರೀತಿ ಮಾಧ್ಯಮಗಳ ಮುಂದೆ ಅವಾಚ್ಯ ಶಬ್ದಗಳಿಂದ ತಮ್ಮನ್ನು ನಿಂದಿಸುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಮುಖಂಡರಾದ ಡಾ.ಕೆ.ಪಿ.ಅಂಶುಮಂತ್‌, ಪಿ.ಆರ್‌.ಸದಾಶಿವ, ಸುಂದರೇಶ್‌, ಉಪೇಂದ್ರ, ಪ್ರಶಾಂತ್‌ ಶೆಟ್ಟಿ, ಜುಬೇದ, ಸೈಯದ್‌ ಸಫೀರ್‌ ಅಹಮ್ಮದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next