Advertisement

ನ.ಪಂ. ಚುನಾವಣೆ: ಐದು ಪಕ್ಷ ಕಣಕ್ಕೆ!

01:25 AM May 10, 2019 | mahesh |

ಸುಳ್ಯ: ನ.ಪಂ. ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, 20 ವಾರ್ಡ್‌ ಗಳಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ರಾಜಕೀಯ ಪಕ್ಷಗಳ ತೆರೆಮರೆಯ ಪೂರ್ವ ತಯಾರಿ ಸಭೆ ಬಿರುಸು ಪಡೆದುಕೊಂಡಿದೆ.

Advertisement

ಆಕಾಂಕ್ಷಿತರ ದಂಡೇ ಇದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೂಡ ಪಕ್ಷಗಳಿಗೆ ಸಲೀಸಲ್ಲ. ಹಾಗಾಗಿ ಅಳೆದು ತೂಗಿ, ಭಿನ್ನಮತ ಸೃಷ್ಟಿಯಾಗದಂತೆ ಗುಪ್ತವಾಗಿಯೇ ಪಟ್ಟಿ ಅಂತಿಮಗೊಳಿಸುವ . ಪ್ರಯತ್ನ ನಡೆದಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಜತೆಗೆ ಜೆಡಿಎಸ್‌, ಎಸ್‌ಡಿಪಿಐ, ಆಮ್‌ ಆದ್ಮಿ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿವೆ. ಯಾವ ಪಕ್ಷ ಎಲ್ಲೆಲ್ಲಿ, ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ ನಡೆಸಲಿದೆ ಎನ್ನುವ ಮಾಹಿತಿ ಸದ್ಯದಲ್ಲೇ ಬಹಿರಂಗಗೊಳ್ಳಲಿದೆ.

ಯುವ ಅಭ್ಯರ್ಥಿಗಳಿಗೆ ಟಿಕೆಟ್!

ಹನ್ನೆರಡು ವರ್ಷಗಳಿಂದ ನಗರ ಪಂಚಾಯತ್‌ ಅಧಿಕಾರ ಹೊಂದಿರುವ ಬಿಜೆಪಿ ಬಹುತೇಕ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಚಿಸಿದೆ. ಮಂಡಲ ಸಮಿತಿ ಮೂಲಕ ಅದು ಅಂತಿಮಗೊಳ್ಳಬೇಕಿದೆ. ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಈ ಬಾರಿ ಶೇ. 90ರಷ್ಟು ಹೊಸ ಮುಖ ಹಾಗೂ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಈ ಹಿಂದೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಮೀಸಲಾತಿಯೂ ತೊಡ ಕಾಗಿದೆ. ಹಾಗಾಗಿ ನ.ಪಂ. ಹಾಲಿ ಸದಸ್ಯರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮಾಹಿತಿ ಲಭಿಸಿದೆ.

ಪಕ್ಷವು ನ.ಪಂ. ಚುನಾ ವಣೆ ಸಿದ್ಧತೆ ನಡೆಸಿದ್ದು, ಆಯಾ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದೆ. ಸ್ಪರ್ಧಿಸಬಹು ದಾದ ಅಭ್ಯರ್ಥಿಗಳನ್ನು ಗುರುತಿಸಿದ್ದು, ಮಂಡಲ ಸಮಿತಿ ಅಂತಿಮ ಪಟ್ಟಿ ಪ್ರಕಟಿಸಲಿದೆ ಎನ್ನುತ್ತಾರೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ ಮತ್ತು ಕಾರ್ಯದರ್ಶಿ ಸುಬೋಧ್‌ ಶೆಟ್ಟಿ ಮೇನಾಲ.

Advertisement

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿತರ ದಂಡು!
ಕಳೆದ 12 ವರ್ಷಗಳಿಂದ ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್‌ ಈ ಬಾರಿ ಹಲವು ತಿಂಗಳ ಮೊದಲೇ ಚುನಾವಣೆ ತಯಾರಿ ಆರಂಭಿಸಿದೆ. ಆಯಾ ವಾರ್ಡ್‌ಗಳಲ್ಲಿ ಸಭೆ ನಡೆಸಿ ಸ್ಪರ್ಧಿಸಬಹುದಾದ ಅಭ್ಯರ್ಥಿಗಳ ಹೆಸರು ಸಂಗ್ರಹಿಸಿದೆ. ಅವುಗಳಲ್ಲಿ ಅಂತಿಮ ಸ್ಪರ್ಧಿಗಳ ಆಯ್ಕೆಯೂ ಬಹುತೇಕ ಪೂರ್ಣಗೊಂಡಿದೆ. ಘೋಷಣೆಗೆ ಮಾತ್ರ ಬಾಕಿ ಇದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಒಂದಕ್ಕಿಂತ ಅಧಿಕ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿರುವುದು ಕೂಡ ಅಭ್ಯರ್ಥಿ ಆಯ್ಕೆ ಅನಂತರ ಭಿನ್ನಮತ, ಬಂಡಾಯ ಸ್ಪರ್ಧೆಗೆ ದಾರಿ ಉಂಟು ಮಾಡುವ ಆತಂಕವೂ ಪಕ್ಷದೊಳಗಿರುವುದು ಸುಳ್ಳಲ್ಲ.

ಎಲ್ಲ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಅಭ್ಯರ್ಥಿ ಪಟ್ಟಿ ನಿಗದಿಪಡಿಸಲಾಗಿದೆ. ಶೇ. 40ರಿಂದ 50 ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು. ಕೆಲವೇ ದಿನದಲ್ಲಿ ಬ್ಲಾಕ್‌ ಸಮಿತಿ ಪಟ್ಟಿ ಪ್ರಕಟಿಸಲಿದೆ ಎನ್ನುತ್ತಾರೆ ನಗರ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಅಂಬೆಕಲ್ಲು.

ಎಸ್‌ಡಿಪಿಐ 8ರಿಂದ 9 ಕಡೆ ಸ್ಪರ್ಧೆ
ಕಳೆದ ಬಾರಿ ಮೊದಲ ಚುನಾವಣೆ ಎದುರಿಸಿ ಒಂದು ಸ್ಥಾನದಲ್ಲಿ ಗೆಲುವು ಪಡೆದಿದ್ದ ಎಸ್‌ಡಿಪಿಐ ಈ ಬಾರಿ 8ರಿಂದ 9 ಸ್ಥಾನಗಳಲ್ಲಿ ಸ್ಪರ್ಧಿಸುವ ಉತ್ಸುಕತೆ ಹೊಂದಿದೆ. ಕಳೆದ ಬಾರಿ ಗೆದ್ದಿದ್ದ ಪಕ್ಷದ ಅಭ್ಯರ್ಥಿ ಉಮ್ಮರ್‌ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಎಸ್‌ಡಿಪಿಐ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವ ಕುತೂಹಲವಿದೆ.

ಪಕ್ಷವು ಈ ಬಾರಿ ಸ್ಪರ್ಧಿಸುವುದು ನಿಶ್ಚಿತ. ಈ ಬಗ್ಗೆ ಸಭೆ ನಡೆಯಲಿದೆ. ನ.ಪಂ. ಸದಸ್ಯರಾಗಿದ್ದ ಉಮ್ಮರ್‌ ಅವರು ರಾಜ್ಯ ಸಮಿತಿ ಮೂಲಕ ಪಕ್ಷದಿಂದ ಕೆಲವು ತಿಂಗಳ ಕಾಲ ರಜೆ ಪಡೆದಿದ್ದಾರೆ. ಹಾಗಾಗಿ ಅವರ ಸ್ಪರ್ಧೆ ಬಗ್ಗೆ ರಾಜ್ಯ ಸಮಿತಿ ಮೂಲಕವೇ ತೀರ್ಮಾನವಾಗಬೇಕಿದೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎ. ರಫೀಕ್‌.

ಮೈತ್ರಿಯೋ ಸ್ವತಂತ್ರವೋ?
ರಾಜ್ಯ ಸರಕಾರದಲ್ಲಿ ಕಾಂಗ್ರೆಸ್‌ ಜತೆ ಪಾಲುದಾರ ಪಕ್ಷವಾಗಿರುವ ಜೆಡಿಎಸ್‌ ಮೈತ್ರಿ ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿದಿತ್ತು.

ನಗರ ಪಂಚಾಯತ್‌ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿ ಕೊಳ್ಳಲಿದೆಯೋ ಅಥವಾ ಸ್ವತಂತ್ರವಾಗಿ ಕಣಕ್ಕಿಳಿಯಲಿದೆಯೋ ಎನ್ನುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು. ಮೈತ್ರಿ ಬಗ್ಗೆಯೂ ಮಿತ್ರ ಪಕ್ಷ ಕಾಂಗ್ರೆಸ್‌ ಜತೆ ಚರ್ಚಿಸಲಾಗುವುದು. ಮೈತ್ರಿ ಅಥವಾ ಸ್ವತಂತ್ರ ಸ್ಪರ್ಧೆ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎನ್ನುತ್ತಾರೆ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮತ್ತು ಸುಳ್ಯ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ.

ಎಲ್ಲ ಪಕ್ಷಗಳಿಗಿಂತಲೂ ಮೊದಲಾಗಿ ಆಮ್‌ ಆದ್ಮಿ ಪಕ್ಷ ತಾನು ಸ್ಪರ್ಧಿಸುವ ಐದು ಕ್ಷೇತ್ರಗಳ ಉಮೇದುವಾರರ ಪಟ್ಟಿ ಪ್ರಕಟಿಸಿದೆ. ಬೋರುಗುಡ್ಡೆ, ಭಸ್ಮಡ್ಕ, ಬೀರಮಂಗಲ, ಕುದ್ಪಾಜೆ ಹಾಗೂ ನಾವೂರು ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತದ ಪೂರ್ವಭಾವಿ ಸಭೆ ನಡೆದಿದೆ ಎಂದು ಪಕ್ಷದ ಮುಖಂಡ ಶಾರಿಕ್‌ ಪ್ರತಿಕ್ರಿಯಿಸಿದ್ದಾರೆ.

ಆಮ್‌ ಆದ್ಮಿ ಪಟ್ಟಿ ಪ್ರಕಟ!
ಎಲ್ಲ ಪಕ್ಷಗಳಿಗಿಂತಲೂ ಮೊದಲಾಗಿ ಆಮ್‌ ಆದ್ಮಿ ಪಕ್ಷ ತಾನು ಸ್ಪರ್ಧಿಸುವ ಐದು ಕ್ಷೇತ್ರಗಳ ಉಮೇದುವಾರರ ಪಟ್ಟಿ ಪ್ರಕಟಿಸಿದೆ. ಬೋರುಗುಡ್ಡೆ, ಭಸ್ಮಡ್ಕ, ಬೀರಮಂಗಲ, ಕುದ್ಪಾಜೆ ಹಾಗೂ ನಾವೂರು ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತದ ಪೂರ್ವಭಾವಿ ಸಭೆ ನಡೆದಿದೆ ಎಂದು ಪಕ್ಷದ ಮುಖಂಡ ಶಾರಿಕ್‌ ಪ್ರತಿಕ್ರಿಯಿಸಿದ್ದಾರೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next