ಮೂಲ್ಕಿ: ಜನರ ಭಾವನೆಗಳನ್ನು ಮನಸ್ಸಿಲ್ಲವಾದರೂ ಬದಲಾಯಿಸುವ ಮೂಲಕ ಮತವನ್ನು ಪಡೆಯಲಾಗಿದೆ ಎಂಬುವುದು ಮೂಲ್ಕಿ ನಗರ ಪಂಚಾಯತ್ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಹೇಳಿದರು.
ಅವರು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಶನಿವಾರ ನಡೆದ ನಗರ ಪಂಚಾಯತ್ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಅಭಿನಂದನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಜನರು ನಮಗೆ ನಗರ ಪಂಚಾಯತ್ ಅಧಿಕಾರ ಪಡೆಯಲು ಜನಾದೇಶ ಕೊಟ್ಟಿದ್ದಾರೆ. ಆದರೆ ಸಮಬಲ ಬಂದಲ್ಲಿ ಶಾಸನ ಬದ್ಧವಾದ ನಿಯಮ ಮತ್ತು ಕೆಲವು ಕ್ರಮಗಳ ಮೂಲಕ ಅಧಿಕಾರ ಪಡೆಯುವ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮತ್ತು ಮೂಲ್ಕಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್‌ಮಾತನಾಡಿದರು.
ಚುನಾವಣೆಯಲ್ಲಿ ವಿಜೇತರಾದ ಎಲ್ಲ ಸದಸ್ಯರನ್ನು ಹಾಗೂ ಪರಾಜಿತರಾದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂಗೀತ ಆರ್. ಸನಿಲ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ| ರಾಜಶೇಖರ್ ಕೋಟ್ಯಾನ್, ಸದಸ್ಯ ಎಚ್. ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ವೇದಿಕೆಯಲ್ಲಿದ್ದರು. ಪ್ರ. ಕಾ. ಬಿ.ಎಂ. ಆಸೀಫ್ ನಿರೂಪಿಸಿದರು.