ಪಂಜ: ಕಮಿಲ- ಮೊಗ್ರ ಸೇತುವೆ ರಚನೆಗೆ ಒತ್ತಾಯಿಸಿ, ನಾಗರಿಕರು ಹಂತ ಹಂತದ ಹೋರಾಟ ಆರಂಭಿಸಿದ್ದಾರೆ. ಈ ನಡುವೆ ದೀಪಾವಳಿ ಸಂದರ್ಭ ಮೊಗ್ರ ಹೊಳೆಯಲ್ಲಿ ನಾಗರಿಕರು ಹಣತೆ ಬೆಳಗುವ ಮೂಲಕ ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಾಡಿದರು.
ಮೊಗ್ರ-ಏರಣಗುಡ್ಡೆ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಂಪೂರ್ಣ ಡಾಮರೀಕರಣಕ್ಕೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಹಕ್ಕೊತ್ತಾಯ ಆರಂಭವಾಗಿದೆ. ಈಗಾಗಲೇ ಹಂತ ಹಂತವಾಗಿ ನಾಗರಿಕರು ಹಕ್ಕೊತ್ತಾಯ ನಡೆಸಿದ್ದು, ಇದೀಗ ದೀಪಾವಳಿ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಮೊಗ್ರ ಹೊಳೆಯ ಬಳಿ ಹಾಗೂ ಕಾಲು ಸಂಕದ ಬಳಿ ಹಣತೆಯನ್ನು ಹಚ್ಚುವ ಮೂಲಕ ನಾಗರಿಕರು ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ: ಡಿಪ್ಲೊಮಾ ಕಲಿತವರಿಗೆ ಉದ್ಯೋಗ ಮಾಹಿತಿ
ಕಮಿಲ ಹಾಗೂ ಮೊಗ್ರದ ನಾಗರಿಕರು ಸೇತುವೆ ಬಳಿ ಬಂದು ಕ್ಯಾಂಡಲ್ ಹಾಗೂ ಹಣತೆಯನ್ನು ಬೆಳಗಿದರು. ಮುಂದಿನ ವರ್ಷ ನೂತನ ಸೇತುವೆಯ ಮೇಲೆಯೇ ದೀಪಾವಳಿಯ ಸಂದರ್ಭ ಹಣತೆ ಹಚ್ಚುವಂತಾಗಲಿ, ಕಮಿಲ-ಮೊಗ್ರ ಪ್ರದೇಶದ ಜನರಿಗೂ ಸೇತುವೆಯ ಬೆಳಕು ಹರಿಯಲು, ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಣು ತೆರೆಯಲಿ ಎಂದು ಆಶಿಸಿದರು.
ದೀಪಾವಳಿಯ ಸಂದರ್ಭದಲ್ಲಿ ಸೇತುವೆಯ ಬಳಿ 50 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಸಂದರ್ಭ ನಾಗರಿಕ ಹೋರಾಟ ಕ್ರಿಯಾ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.