Advertisement
ಸತೀದೇವಿಗೆ ಯಾಗಕ್ಕೆ ಹೋಗಬೇಕೆಂದು ಆಸೆಯಾಯಿತು. ಗಂಡ ರುದ್ರನಿಗೆ ತಾವಿಬ್ಬರೂ ಹೋಗಬೇಕೆಂದು ಕೇಳಿದಳು. ಅವಳಿಗೆ ತವರುಮನೆಗೆ ಪತಿಯೊಡನೆ ಹೋಗಬೇಕೆಂಬ ಬಯಕೆ. ರುದ್ರನು ಅವಳ ತಂದೆಯ ಕೆಟ್ಟ ಮಾತುಗಳನ್ನು ನೆನಪಿಸಿದ. ಆತನು ಆಹ್ವನಿಸದಿದ್ದಾಗ ತಾವು ಹೋದರೆ ಅವನು ತಿರಸ್ಕಾರದಿಂದ ಕಾಣಬಹುದೆಂದು ಎಚ್ಚರಿಸಿದ. ತನ್ನ ಗಂಡನು ತನ್ನ ಪ್ರಾರ್ಥನೆಯನ್ನು ನಡೆಸಿಕೊಡಲಿಲ್ಲವೆಂದು ಸತೀದೇವಿಗೆ ಕೋಪ ಬಂದಿತು. ಕೋಪದಿಂದಲೇ ತನ್ನ ತಂದೆಯ ಮನೆಗೆ ಹೊರಟಳು. ರುದ್ರನ ಪರಿವಾರದವರು ಅವಳ ರಕ್ಷಣೆಗೆ ಜತೆಗೆ ಹೊರಟರು. ಅವಳು ಯಾಗಮಂಟಪವನ್ನು ಪ್ರವೇಶಿಸಿದಾಗ ಅವಳ ತಾಯಿ ಮತ್ತು ಅಕ್ಕಂದಿರು ಪ್ರೀತಿಯಿಂದ ಕಂಡರು.ಆದರೆ ಬೇರೆ ಯಾರೂ ಅವಳನ್ನು ಆದರಿಸಲಿಲ್ಲ. ತಂದೆಯು ಅವಳ ಕಡೆಗೆ ತಿರುಗಿಯೂ ನೋಡಲಿಲ್ಲ. ಸತೀದೇವಿಗೆ ಅಪಮಾನವಾಯಿತು. ತಡೆಯಲಾರದ ದುಃಖವಾಯಿತು. ಅವಳು ಉತ್ತರಾಭಿಮುಖವಾಗಿ ಕುಳಿತು ಪ್ರಾಣಾಯಾಮ ಕೈಗೊಂಡಳು. ಅಗ್ನಿಯೊಂದು ಅವಳ ಶರೀರವನ್ನು ಆವರಿಸಿ ಸುಟ್ಟುಬಿಟ್ಟಿತು. ಎಲ್ಲರೂ ಹಾಹಾಕಾರ ಮಾಡಿದರು, ದುಃಖೀಸಿದರು.
ಈ ಸಂಗತಿಯನ್ನೆಲ್ಲ ಕೇಳಿ ರುದ್ರನು ಅಗ್ನಿಪರ್ವತದಂತಾದನು. ಅವನು ತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿದನು. ಕೂಡಲೇ ಪರ್ವತಾಕಾರದ ವೀರಭದ್ರನು ಎದ್ದು ಬಂದ. ಅವನದು ಕಪ್ಪು ದೇಹ, ಆಯುಧಗಳನ್ನು ಹಿಡಿದ ಸಾವಿರ ತೋಳುಗಳು, ಕೆಂಡದಂತೆ ಬೆಳಗುವ ಮೂರು ಕಣ್ಣುಗಳು, ತಲೆಬುರುಡೆಗಳ ಹಾರ. ಶಿವನು ಅವನಿಗೆ ದಕ್ಷನನ್ನೂ, ಯಾಗವನ್ನೂ ಧ್ವಂಸ ಮಾಡುವಂತೆ ಆಜ್ಞಾಪಿಸಿದನು. ವೀರಭದ್ರನೂ ಅವನ ಸೈನ್ಯದವರೂ ಹೋಮಶಾಲೆಯನ್ನು ಪ್ರವೇಶಿಸಿ ಎಲ್ಲರನ್ನು ಚೆಲ್ಲಾಪಿಲ್ಲಿ ಮಾಡಿದರು. ಭೃಗು ಮಹರ್ಷಿಯನ್ನು ಕೊಂದರು. ತಪ್ಪಿಸಿಕೊಂಡ ದೇವತೆಗಳೂ ಋಷಿಗಳೂ ಓಡಿ ಹೋಗಿ ಬ್ರಹ್ಮನ ಮೊರೆ ಹೊಕ್ಕರು. ಬ್ರಹ್ಮನು ಅವರಿಗೆ ಸತೀದೇವಿಗೆ ಅಪಮಾನ ಮಾಡಿದ್ದು ತಪ್ಪು ಎಂದು ಹೇಳಿ ಅವರನ್ನು ಕರೆದುಕೊಂಡು ಕೈಲಾಸಕ್ಕೆ ಬಂದನು. ರುದ್ರನು ಶಾಂತನಾಗಿ ಕುಳಿತಿದ್ದ. ಸುತ್ತಲೂ ನಾರದರು ಮತ್ತು ಇತರ ಋಷಿಗಳು, ಬ್ರಹ್ಮನು, “ಅರ್ಧಕ್ಕೆ ನಿಂತ ಯಾಗವನ್ನು ಪೂರ್ಣಗೊಳಿಸುವ ಕಾರ್ಯ ರುದ್ರನದು, ಸತ್ತವರೆಲ್ಲ ಮತ್ತೆ ಬದುಕುವಂತಾಗಬೇಕು’ ಎಂದು ವಿನಂತಿ ಮಾಡಿದ. ರುದ್ರನು ಒಪ್ಪಿದ. ದಕ್ಷನ ತಲೆಯು ಸುಟ್ಟು ಹೋಗಿದ್ದುದರಿಂದ ಅವನಿಗೆ ಕುರಿಯ ತಲೆಯಾಯಿತು. ಸತ್ತವರು ಬದುಕಿದರು. ಗಾಯಗೊಂಡವರು ಮೊದಲಿಂತಾದರು. ಯಜ್ಞಕಾರ್ಯವು ಸಂಪೂರ್ಣವಾಯಿತು. ಬ್ರಹ್ಮನು ದಕ್ಷನಿಗೆ, “ಬ್ರಹ್ಮ ವಿಷ್ಣು ರುದ್ರರು ಬೇರೆ ಬೇರೆಯಲ್ಲ. ಮೂವರನ್ನೂ ಒಬ್ಬರೇ ಎಂದು ಕಾಣಬೇಕು’ ಎಂದು ತಿಳಿಸಿಕೊಟ್ಟ.
Related Articles
Advertisement
ಎಲ್. ಎಸ್. ಶೇಷಗಿರಿ ರಾವ್(“ಕಿರಿಯರ ಭಾಗವತ’ ಪುಸ್ತಕದಿಂದ)