Advertisement

ಪುರಾಣ ಕತೆ: ಭೀಮ-ದುರ್ಯೋಧನರ ಗದಾಯುದ್ಧ

10:44 AM Sep 07, 2017 | |

ಕುರುಕ್ಷೇತ್ರ ಯುದ್ಧ ಮುಗಿಯಿತು. ಭೀಷ್ಮ, ದ್ರೋಣ, ಕರ್ಣ, ದುಶ್ಯಾಸನ ಸೇರಿದಂತೆ ಕೌರವ ಪ್ರಮುಖರೆಲ್ಲಾ ಮೃತಪಟ್ಟರು. ಉಳಿದವನು ದರ್ಯೋಧನ ಒಬ್ಬನೇ. ಕಡೆಗೊಂದು ದಿನ ದುರ್ಯೋಧನ ಮತ್ತು ಭೀಮಸೇನನ ನಡುವೆ ಘನಘೋರ ಯುದ್ಧ ನಡೆಯಿತು. ದುರ್ಯೋಧನನು ಭೀಮನ ಮೇಲೆ ಎರಗಿದ. ಬಲಿಷ್ಠ ಗೂಳಿಗಳಂತೆ ಅವರು ಸೆಣಸಿದರು. ಇಬ್ಬರೂ ಬಲಶಾಲಿಗಳು, ಗದಾಯುದ್ಧದಲ್ಲಿ ನಿಪುಣರು. ಮುಂದೆ ಸಾಗಿ ಆಕ್ರಮಣ ಮಾಡುವರು, ಹಿಂದಕ್ಕೆ ಸರಿದು ಶತ್ರುವಿನ ಪೆಟ್ಟಿನಿಂದ ತಪ್ಪಿಸಿಕೊಳ್ಳುವರು. ಗದೆಗಳು ತಾಗಿದಾಗ ಸಾವಿರ ಕಿಡಿಗಳು ಹಾರುವವು. ಇಬ್ಬರ ದೇಹಗಳೂ ರಕ್ತದಲ್ಲಿ ತೊಯ್ದು ಹೋದವು. ಭೀಮನ ಗದೆಯ ಪೆಟ್ಟಿನಿಂದ ಕೆಳಕ್ಕೆ ಬಿದ್ದ ದುರ್ಯೋಧನನು ಚೇತರಿಸಿಕೊಂಡು ಭೀಮನ ಎದೆಗೆ ಹೊಡೆದನು. ಭೀಮನಿಗೆ ಒಂದು ಕ್ಷಣ ಪ್ರಜ್ಞೆ ತಪ್ಪಿದಂತಾಯಿತು. 

Advertisement

ದುರ್ಯೋಧನನ ಒಂದು ಪೆಟ್ಟಿಗೆ ಭೀಮನು ಕೆಳಕ್ಕೆ ಬಿದ್ದ, ಮತ್ತೆ ಸಾವರಿಸಿಕೊಂಡು ಎದ್ದು ನಿಂತ. ಯುದ್ಧವನ್ನು ನೋಡುತ್ತ ನಿಂತಿದ್ದ ಪಾಂಡವರಿಗೆ ಆತಂಕವಾಯಿತು.

ಅರ್ಜುನನು ಕೃಷ್ಣನನ್ನು, “ಇವರಿಬ್ಬರಲ್ಲಿ ಯಾರು ಶ್ರೇಷ್ಠರು?’ ಎಂದು ಕೇಳಿದ. ಕೃಷ್ಣನು, “ಭೀಮನು ಹೆಚ್ಚು ಬಲಶಾಲಿ, ಆದರೆ ದುರ್ಯೋಧನ ಹೆಚ್ಚು ನಿಪುಣ. ದುರ್ಯೋಧನನು ಹಲವು ವರ್ಷಗಳಿಂದ ಸಾಧನೆ ಮಾಡುತ್ತಲೇ ಬಂದಿದ್ದಾನೆ. ಭೀಮನು ಅಂಥ ಸಾಧನೆ ಮಾಡಿಲ್ಲ. ಭೀಮನು ಹೇಗಾದರೂ ಮಾಡಿ ಗೆಲ್ಲದಿದ್ದರೆ ದುರ್ಯೋಧನನೇ ಈಗಲೂ ಗೆದ್ದು ಸಿಂಹಾಸನದ ಮೇಲಿರುತ್ತಾನೆ’ ಎಂದ. ಆಗ ಅರ್ಜುನನು, ಭೀಮನಿಗೆ ಅವನ ಪ್ರತಿಜ್ಞೆಯನ್ನು ನೆನಪು ಮಾಡಿಕೊಡಲು ತನ್ನ ಎಡತೊಡೆಯನ್ನು ತಟ್ಟಿದನು. ಈ ಕಾಳಗವನ್ನು ಮುಗಿಸಬೇಕೆಂದು ಭೀಮ ದುರ್ಯೋಧನರಿಬ್ಬರೂ ಕೆಚ್ಚೆದೆಯಿಂದ ಹೋರಾಡತೊಡಗಿದರು. ಭೀಮನು ಗದೆಯನ್ನು ಕೆಳಕ್ಕೆ ತರುವಾಗ ದುರ್ಯೋಧನನು ಹಾರಿ ತಪ್ಪಿಸಿಕೊಂಡು ಭೀಮನಿಗೆ ಪ್ರತಿ ಪ್ರಹಾರ ಮಾಡಿದನು. ಆ ಹೊಡೆತಕ್ಕೆ ಭೀಮ ತತ್ತರಿಸಿದ, ದೇಹದಿಂದ ರಕ್ತ ಚಿಮ್ಮಿತು. 

ಆದರೂ ಚೇತರಿಸಿಕೊಂಡು ದುರ್ಯೋಧನನತ್ತ ನುಗ್ಗಿದ. ದುರ್ಯೋಧನನು ಮೇಲಕ್ಕೆ ಹಾರಿದ. ಆಗ ಭೀಮನು ತನ್ನ ಮಾರಕ ಗದೆಯನ್ನು ಅವನ ಮೇಲೆ ಎಸೆದ. ಅದು ದುರ್ಯೋಧನನ ತೊಡೆಗಳನ್ನು ಮುರಿಯಿತು. ಪರ್ವತವೊಂದು ಬೀಳುವಂತೆ ಅವನು ಕೆಳಕ್ಕೆ ಬಿದ್ದ.

ಭೀಮನು ಅವನನ್ನು ನೋಡಿ, “ದ್ರೌಪದಿಗೆ ಅವಮಾನ ಮಾಡಿದಾಗ, “ಹಸು ಹಸು’ ಅಂದೆಯಲ್ಲ? ಈಗ ಹೇಳು’ ಎನ್ನುತ್ತ ದುರ್ಯೋಧನನ ತಲೆಯನ್ನು ಎಡಗಾಲಿನಿಂದ ಒದ್ದ. ದುರ್ಯೋಧನನ ಅಧರ್ಮ ಕಾರ್ಯಗಳನ್ನು ಒಂದೊಂದಾಗಿ ನೆನಪಿಸುತ್ತ ಮತ್ತೆ ಮತ್ತೆ ಒದ್ದ. ಆಗ ಯುಧಿಷ್ಠಿರನು ಅವನನ್ನು ತಡೆದ. ಈ ದ್ವಂದ್ವ ಯುದ್ಧವನ್ನು ನೋಡುತ್ತಿದ್ದ ಬಲರಾಮನಿಗೆ ತಡೆಯಲಾರದಷ್ಟು ಕೋಪ ಬಂದಿತು. 

Advertisement

“ಗದಾಯುದ್ಧದಲ್ಲಿ ಹೊಕ್ಕಳ ಕೆಳಗೆ ಹೊಡೆಯಬಾರದು. ಭೀಮನು ಮಾಡಿದ್ದು ಅನ್ಯಾಯ’ ಎಂದು ಹಲಾಯುಧವನ್ನು ಎತ್ತಿಕೊಂಡು ಭೀಮನಿಗೆ ಹೊಡೆಯಲು ಮುಂದಾದ. 

ಆಗ ಕೃಷ್ಣ ಅವನನ್ನು ತಡೆದು, “ದುರ್ಯೋಧನನು ಪಾಂಡವರಿಗೆ ಹಲವು ಅನ್ಯಾಯಗಳನ್ನು ಮಾಡಿದ್ದಾನೆ. ಅಲ್ಲದೆ, ಭೀಮನು ಅವನ ತೊಡೆಗಳನ್ನು
ಮುರಿಯುವುದಾಗಿ ಪ್ರತಿಜ್ಞೆ ಮಾಡಿದ್ದ. ಅದನ್ನು ಪೂರೈಸಬೇಕಾಗಿತ್ತು’ ಎಂದು ಸಮಾಧಾನ ಹೇಳಿದ. ತನ್ನ ಕಣ್ಮುಂದೆಯೇ ಅಧರ್ಮದ ಯುದ್ಧ
ನಡೆದಿದ್ದರಿಂದ ಬೇಸರಗೊಂಡ ಬಲರಾಮನು ದ್ವಾರಕೆಗೆ ಹೊರಟು ಹೋದ. ಭೀಮನ ವಿಜಯದಿಂದ ಕೃಷ್ಣನೂ, ಪಾಂಡವರೂ ಬಹಳ ಸಂತೋಷಪಟ್ಟರು. 

ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ

Advertisement

Udayavani is now on Telegram. Click here to join our channel and stay updated with the latest news.

Next