Advertisement
ಎರಡು ಸಾವಿರ ಇಸವಿಯ ನಂತರದ ಭಾರತೀಯ ಚಲನಚಿತ್ರಗಳನ್ನೇನಾದರೂ ಎರಡು ವಿಭಾಗ ಮಾಡುವುದಾದರೆ ಅದನ್ನು ಬಾಹುಬಲಿ ಪೂರ್ವ ಹಾಗೂ ಬಾಹುಬಲಿ ಉತ್ತರ ಎಂದು ಸುಲಭವಾಗಿ ವಿಂಗಡಿಸಬಹುದು. ಇಡೀ ಭಾರತ ಸಿನಿಮಾದ ರೂಪವನ್ನೇ ಬದಲಿಸಿದಂಥ ಸಿನಿಮಾ “ಬಾಹುಬಲಿ’ ಎಂದರೂ ತಪ್ಪಾಗಲಾರದು. ಯಾರೂ ಕಾಣದ ಕನಸೊಂದನ್ನು ಕಂಡಿದ್ದರು ರಾಜಮೌಳಿ. ಆ ಹೊತ್ತಿಗೆ ಇಡೀ ದಕ್ಷಿಣ ಭಾರತದ ಸಿನಿಮಾ ರಂಗವನ್ನು ತೇಲಿಸುತ್ತಿದ್ದ ಅಲೆಯೇ ಬೇರೆ ಇತ್ತು. ಕಾಲೇಜು ಜೀವನ, ಪ್ರೀತಿ, ಎರಡು ಕುಟುಂಬಗಳ ನಡುವಿನ ವೈಷಮ್ಯ, ಭೂಗತ ಲೋಕ ಮುಂತಾದ ವಿಷಯಗಳನ್ನೇ ತೇಯೂª ತೇಯೂª ಸವಕಲಾಗುವಷ್ಟು ಸಿನಿಮಾಗಳನ್ನು ತೆಗೆಯಲಾಗಿತ್ತು. ಚಿತ್ರಮಂದಿರಕ್ಕೆ ಬರುತ್ತಿದ್ದ ಪ್ರೇಕ್ಷಕ ಸೀಟಿನ ತುದಿಗೆ ಬರುವುದನ್ನೇ ಬಿಟ್ಟುಬಿಟ್ಟಿದ್ದ. ಬಾಲಿವುಡ್ ಸೇರಿದಂತೆ ದಕ್ಷಿಣದ ಬಹುತೇಕ ಎಲ್ಲ “ವುಡ್’ ಗಳೂ ತಮಗೆ ಗೊತ್ತಿಲ್ಲದಂತೆ ಒಂದನ್ನೊಂದು ನಕಲಿಸುತ್ತ, ಅನುಸರಿಸುತ್ತ, ಹಿಂಬಾಲಿಸಿಕೊಂಡಿದ್ದವು. ಪರಿಸ್ಥಿತಿ ಹೀಗಿದ್ದಾಗಲೇ ಯಾರೂ ಕಾಣದ ಕನಸೊಂದನ್ನು ಕಂಡವರು ತೆಲುಗಿನ ನಿರ್ದೇಶಕ ರಾಜಮೌಳಿ.
Related Articles
Advertisement
ನೋಡುವ ನೋಟವನ್ನು ಸ್ವಲ್ಪ ವಿಸ್ತಾರ ಮಾಡಿಕೊಂಡ ಮರುಕ್ಷಣ ಎಲ್ಲವೂ ಸುಂದರವೂ, ಸೋಜಿಗವೂ ಆಗುತ್ತದೆನ್ನುವುದನ್ನು ಅರ್ಥ ಮಾಡಿಸಿತ್ತು ಬಾಹುಬಲಿ. ಅದೊಂದು ಕಾಲ್ಪನಿಕ ಕಥೆಯಾದರೂ ಅಲ್ಲಿಂದ ಮುಂದಕ್ಕೆ ನಮ್ಮ ಪುರಾಣ ಹಾಗೂ ಇತಿಹಾಸಗಳ ಅಕ್ಷಯ ಪಾತ್ರೆಯಿಂದ ಹಲವಾರು ಚಲನಚಿತ್ರಗಳು ಎದ್ದುಬಂದವು. ಬರುತ್ತಲೇ ಇವೆ. ಬರುತ್ತಲೇ ಇರುತ್ತವೆ. ನಮ್ಮನ್ನು ಆವರಿಸುವ ನಿಟ್ಟಿನಲ್ಲಿ ಪೌರಾಣಿಕ ಕಥೆಗಳು ಹೊಸ ಕಲ್ಕಿ ಅವತಾರವನ್ನೇ ತಾಳಿಬಿಟ್ಟವು. ಏಕೆ ಹೀಗೆಂದು ಪರಾಮರ್ಶಿಸಿದರೆ ಕಾಣುವುದು ನಮ್ಮ ಪುರಾಣ ಹಾಗೂ ಇತಿಹಾಸದ ಶ್ರೀಮಂತಿಕೆ. ಒಂದಿಡೀ ಮಾನವ ಕುಲಕ್ಕೇ ದಾರಿದೀಪವಾಗಬಲ್ಲ ಕಥನಗಳು, ಕೇವಲ ಆದರ್ಶ ಮಾತ್ರವಲ್ಲದೆ ಕುಟಿಲತೆ, ರಾಜಕೀಯ ಮುಂತಾದ ಮನುಷ್ಯ ಗುಣಗಳನ್ನು ವಿಸ್ತಾರವಾಗಿ ಬಿಂಬಿಸುವ ಪಾತ್ರಗಳು, ಆಸೆಗಳನ್ನನುಸರಿಸಿ ಹೋದಾಗ ಕಂಡ ಸತ್ಯಗಳು, ಅರಿಷಡ್ವರ್ಗಗಳನ್ನು ಹಿಂಬಾಲಿಸಿ ನಡೆದ ದುರ್ಘಟನೆಗಳು, ದೇಶ-ಕಾಲಗಳಾಚೆಗೆ ಈಗಿನ ಸಮಾಜಕ್ಕೆ ಅನ್ವಯವಾಗಬಲ್ಲ ಘಟನೆಗಳು… ಇವೆಲ್ಲವನ್ನೂ ಅಡಕವಾಗಿಸಿಕೊಂಡೇ ನಮ್ಮ ಪುರಾಣಗಳು ಸೃಷ್ಟಿಯಾಗಿವೆ.
ಅಕ್ಷಯ ಪಾತ್ರೆಯಂಥ ಪುರಾಣ ಕಥೆಗಳು
ಮಹಾಭಾರತದ ಒಂದೊಂದು ಪಾತ್ರವೂ ಒಂದೊಂದು ಸಿನಿಮಾವಾಗಬಲ್ಲದು. ಒಂದೊಂದು ಪಾತ್ರದ ದಿಕ್ಕಿನಿಂದ ನೋಡಿದಾಗಲೂ ಮಹಾಭಾರತದ ಕಥೆ ಹೊಸದಾಗಿ ಕಾಣುತ್ತದೆ. ಹಾಗೆ ಬದಲಾದ ಎಲ್ಲ ಕಥೆಗಳೂ ಕೊನೆಗೆ ಒಂದೇ ಸತ್ಯವನ್ನು ಹೇಳುತ್ತವೆ. ಪುರಾಣಗಳ ಸೌಂದರ್ಯವೇ ಅದು. ಇಲ್ಲಿನ ಪ್ರತಿ ಪಾತ್ರವೂ ಶಕ್ತಿಶಾಲಿಯಾಗಿದೆ. ಶಕ್ತಿಯೆಂದರೆ ತೋಳ್ಬಲ ಮಾತ್ರವಲ್ಲ. ಬುದ್ಧಿಶಕ್ತಿಯೊಂದೇ ಅಲ್ಲ. ಧರ್ಮರಾಯನಿಗೆ ಧರ್ಮವೇ ಬಲವಾದರೆ ಏಕಾಗ್ರತೆ ಅರ್ಜುನನ ಶಕ್ತಿ. ಕುಟಿಲತೆ ಶಕುನಿಯ ಸಾಮರ್ಥ್ಯವಾದರೆ, ಚಾಣಾಕ್ಷತನ ಶ್ರೀಕೃಷ್ಣನ ಅಸ್ತ್ರ. ಮನುಷ್ಯನ ಒಂದೊಂದು ಗುಣವೂ, ಒಂದೊಂದು ಸ್ವಭಾವವೂ ಒಂದೊಂದು ಕಥೆಯಾಗಬಲ್ಲದು. ಒಂದು ಆಸೆಗೆ, ಒಂದು ಲೋಭಕ್ಕೆ ಸಾಮ್ರಾಜ್ಯಗಳನ್ನೇ ಏಳಿಸಿ, ಇಳಿಸಿ, ಮಣ್ಣುಮುಕ್ಕಿಸುವ ತಾಕತ್ತಿದೆ. ಸಣ್ಣ ತಾಳ್ಮೆಯಲ್ಲಿ, ನಿರಂತರ ಸಹನೆಯಲ್ಲಿ ಎಂಥ ದುರಂತಗಳಾಚೆಗೂ ಉಳಿಯಬಲ್ಲ ಸತ್ವವಿದೆ. ನಾವು ಆಯ್ಕೆ ಮಾಡಿಕೊಳ್ಳುವ ದಾರಿ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುವ ಪಾಠ ಹೇಳುವ ಪೌರಾಣಿಕ ಕಥನಗಳು ಗೊತ್ತೇ ಆಗದಂತೆ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತಿವೆ. ಆಳುವ ದೊರೆ ಅಹಂಕಾರಿಯಾದಾಗ ಹೇಗೆ ಇಡೀ ಸಾಮ್ರಾಜ್ಯವೇ ಅಳಿಯುತ್ತದೆ ಎನ್ನುವುದನ್ನು ದುರ್ಯೋಧನನ ಅವಸಾನ ಹೇಳಿದರೆ, ದುರ್ಜನರ ಸಂಗ ಎಂಥ ಪ್ರತಿಭಾನ್ವಿತನನ್ನೂ ಹೇಗೆ ಸಾವಿಗೆ ನೂಕುತ್ತದೆ ಎನ್ನುವುದಕ್ಕೆ ಕರ್ಣನ ಸೋಲೇ ಸಾಕ್ಷಿಯಾಗುತ್ತದೆ. ಪರಸ್ತ್ರೀ ಮೋಹ ಎಂಥ ಆಚಾರವಂತ ಬಲಶಾಲಿ ದೊರೆಗೂ ಶಿರಚ್ಛೇದನ ಮಾಡುತ್ತದೆನ್ನುವುದಕ್ಕೆ ರಾವಣನೇ ನಿದರ್ಶನವಾದರೆ, ಸತ್ಯದ ದಾರಿಯಲ್ಲಿ ನಡೆಯುವವರ ಬದುಕಿನ ಹೊಯ್ದಾಟಗಳಿಗೆ ಶ್ರೀರಾಮನೇ ಸಾಕ್ಷಿಯಾಗುತ್ತಾನೆ. ಕೆದಕುತ್ತ ಹೋದರೆ ನಮ್ಮ ಪುರಾಣದ ಪುಟಗಳಲ್ಲಿ ಏನಿಲ್ಲ? ಏನೇನಿಲ್ಲ? ಹೇಳಬೇಕಾದ್ದನ್ನು ಒಂದು ನೀತಿಪಾಠವಾಗಿಯಲ್ಲದೇ ಕಥೆಯಾಗಿ, ಪಾತ್ರವಾಗಿ, ಬದುಕಾಗಿ ಚಿತ್ರಿಸಿರುವುದು ಅವು ನಮ್ಮನ್ನಾವರಿಸಿಕೊಳ್ಳಲು ಕಾರಣವಾಗುತ್ತದೆ.
ಪುರಾಣಗಳು ಹುಟ್ಟಿದ್ದೇ ಮನುಷ್ಯನ ಗುಣ, ಆದರ್ಶ, ನಂಬಿಕೆ ಹಾಗೂ ಬದುಕುಗಳ ನೆಲಗಟ್ಟಿನ ಮೇಲೆ. ಹಾಗಾಗಿಯೇ ಸಹಸ್ರಾರು ವರ್ಷಗಳ ಬಳಿಕವೂ ಅವು ಪ್ರಸ್ತುತವಾಗುತ್ತಲೇ ಇವೆ. ಕಥೆಯಾಗಿ, ಕಾದಂಬರಿಯಾಗಿ, ಸಿನಿಮಾವಾಗಿ, ಧಾರಾವಾಹಿಯಾಗಿ ಅವು ನಮ್ಮನ್ನು ಮತ್ತೆ ಮತ್ತೆ ತಾಕುತ್ತಲೇ ಇವೆ. ಅವೇ ಜೀವನ ಸತ್ಯಗಳನ್ನು ನಾವು ಹೊಸ ಹೊಸ ರೂಪದಲ್ಲಿ ಸ್ವೀಕರಿಸುತ್ತಿದ್ದೇವೆ.
ಒಂದು ಕಾಲಕ್ಕೆ ಔಟ್‌ಡೇಟ್ ಆಯಿತು ಎಂಬಂತಾದ ಈ ಕಥಾವಸ್ತುಗಳನ್ನು ಹೊಸ ನಿರೂಪಣೆ ಹಾಗೂ ದೃಶ್ಯ ಸೃಷ್ಟಿಯ ಮೂಲಕ ಹೊಸ ತಲೆಮಾರಿನ ನಿರ್ದೇಶಕರು ಮತ್ತೆ ನಮ್ಮಂತರಂಗಕ್ಕೆ ಒಡ್ಡಿದ್ದಾರೆ. ನಾವು ಮರೆಯಲಾಗದ, ಮರೆಯಬಾರದ ಯುಗದ-ಜಗದ ನೀತಿಗಳಿಗೆ ಮನೋರಂಜನೆಯ ಫ್ಲೇವರ್ ಬೆರೆಸಿ ನಮ್ಮರಿವಿನ ಬಾಯಾರಿಕೆಗೆ ಕುಡಿಸುವ ಇಂಥ ಸಿನಿಮಾ ಗಳು ಎಷ್ಟು ಬಂದರೂ ಸ್ವಾಗತವೇ.
ಎಂದಿಗೂ ಮುಗಿಯದ ಕಥೆಗಳು!
ಪುರಾಣದಿಂದ ಕಥೆ ಸೃಷ್ಟಿಸುವ ಈ ಟ್ರೆಂಡಿನಿಂದ ಧಾರಾವಾಹಿಗಳೂ ಹಿಂದೆ ಬಿದ್ದಿಲ್ಲ. ಈ ಕಿರುತೆರೆ ದೈನಿಕಗಳ ವಿಷಯಕ್ಕೆ ಬಂದಾಗ ಕ್ಯಾನ್ವಾಸು ಮತ್ತಷ್ಟು ದೊಡ್ಡದಾಗುತ್ತದೆ. ಕೇವಲ ಮಹಾಭಾರತ ಹಾಗೂ ರಾಮಾಯಣ ಮಾತ್ರವಲ್ಲದೇ ಹಲವಾರು ದೇವತೆಗಳ ಪುರಾಣಕ್ಕೂ ಕಥೆಗಳು ವಿಸ್ತರಿಸುತ್ತವೆ. ಶನಿದೇವ, ಶ್ರೀಕೃಷ್ಣ, ಪರಶಿವ, ಮಲೆಮಾದಪ್ಪ, ಸಾಯಿಬಾಬಾ.. ತ್ರೇತಾಯುಗದ ಆದಿಯಿಂದ ಕಲಿಯುಗದ ಮಧ್ಯದ ತನಕದ ಪುರಾಣದ ಪುಟಗಳಲ್ಲಿ ಬದುಕಿ ಹೋಗಿರುವ, ತಮ್ಮದೇ ಆದ ಸಂಘರ್ಷಗಳನ್ನು ಹೋರಾಡಿಕೊಂಡು, ತಮ್ಮದೇ ಆದ ಆದರ್ಶಗಳನ್ನು ಪಾಲಿಸಿಕೊಂಡು, ಇಡೀ ಬದುಕನ್ನೇ ಸಂದೇಶವಾಗಿಸಿ ಹೋಗಿರುವ ಅನೇಕ ಪಾತ್ರಗಳನ್ನು ಕಿರುತೆರೆಯ ಮೇಲೆ ಮರುಸೃಷ್ಟಿಸಲಾಗಿದೆ. ಕೊನೆಯ ಬಿಂದುವಿನಲ್ಲೂ ಸಮಾಪ್ತಿಯಾಗದ ಕಥೆಗಳವು. ಕೊನೆಯ ಸಂಚಿಕೆಯಾಚೆಗೂ ಉಳಿದುಹೋಗುವ ಭಾವಗಳು. ಪುರಾಣದ ಮಹಾ ಗ್ರಂಥವೊಂದನ್ನು ಅದರೊಳಗಿನ ಕಥೆ, ತಿರುವು, ಕ್ರೌರ್ಯ, ಪ್ರೀತಿ, ನೀತಿ, ಮೋಸ, ಗೆಲುವು, ಸೋಲುಗಳ ಸಮೇತ ತಲಾ ಮೂವತ್ತು ನಿಮಿಷದ ನೂರಾರು ತುಣುಕುಗಳಾಗಿ ಕತ್ತರಿಸಿ, ದಿನಕ್ಕೊಂದು ತಿನ್ನುವ ಸಿಹಿ ಗುಳಿಗೆಯಂತೆ ಕಂತು ಕಂತುಗಳಾಗಿ ನಮ್ಮ ದೈನಿಕದೊಳಕ್ಕೆ ತೂರಿಸುವ ಕಲಾತ್ಮಕ ಕೆಲಸವೇ ಪೌರಾಣಿಕ ಧಾರಾವಾಹಿಗಳು. ಬಿಡಿಬಿಡಿ ಯಾಗಿ ನೋಡಿದಾಗಲೂ ಸ್ವತಂತ್ರವಾಗಿ ಕಾಣುವಂತೆ, ಅದೇ ಸಮಯಕ್ಕೆ ತನ್ನ ಪೂರ್ವಾಪರಗಳನ್ನೂ ತಿಳಿಯಲು ಪ್ರೇರೇಪಿಸುವಂತೆ ಈ ಸಂಚಿಕೆಗಳನ್ನು ಹೆಣೆಯಲಾಗುತ್ತದೆ. ಮೂವತ್ತನೇ ನಿಮಿಷದ ಕೊನೆಯ ಸೆಕೆಂಡಿನಲ್ಲಿ ಸಶೇಷ ಎಂದು ಮುಗಿದುಹೋಗುವ ಕಂತೊಂದು ಎಷ್ಟೋ ಬಾರಿ ನೋಡುಗನ ಮನದಲ್ಲಿ ತನ್ನದೇ ಆದ ಚಿತ್ರಕಥೆಯಾಗಿ ಮುಂದುವರೆಯುತ್ತದೆ. ಮರುದಿನದ ಕಂತು ಪ್ರಸಾರವಾಗುವ ತನಕ ಎಷ್ಟೋ ಮಂದಿ ತಮ್ಮದೇ ಆದ ಸಂಚಿಕೆಯೊಂದನ್ನು ನಿರ್ದೇಶಿಸಿಕೊಂಡು ನೋಡುತ್ತಾರೆ. ನೋಡುಗನ ಸೃಜನಶೀಲತೆಯನ್ನೂ ಉತ್ತೇಜಿಸುವ ಶಕ್ತಿ ಈ ಕಥೆಗಳಿಗಿದೆ.
-ವಿನಾಯಕ ಅರಳಸುರಳಿ