■ ಉದಯವಾಣಿ ಸಮಾಚಾರ
ಮೈಸೂರು: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿಯಾಗಿರುವ ಭಾರತದ ಸಿಯಾಚಿನ್ ಪ್ರದೇಶ ನೋಡಲು ರೌದ್ರರಮಣೀಯವಾಗಿದ್ದರೂ ಶೀತಲ ವಾತಾವರಣವೂ ಮೈಯನ್ನು ಮರಗಟ್ಟಿಸಿಬಿಡುತ್ತದೆ. ಇಂತಹ ಪರಿಸರವಿರುವ ಪ್ರದೇಶಕ್ಕೆ ನಗರದ ಸರ್ದಾರ್ ವಲ್ಲಭ ಬಾಯಿ ಪಟೇಲ್ ನಗರದ ನಿವಾಸಿ, ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಸಿ.ಟಿ.ಸುಪ್ರಿತಾ ಅವರು ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಅಲ್ಲಿಗೆ ಆಯ್ಕೆಯಾದ ದೇಶದ ಮೊದಲ ಮಹಿಳಾಯೋಧೆ ಎಂಬುದು ವಿಶೇಷವಾಗಿದೆ.
ತಲಕಾಡು ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್ ಹಾಗೂ ನಿರ್ಮಲಾ ದಂಪತಿ ಪುತ್ರಿಯಾದ ಸುಪ್ರಿತಾ ಅವರು ಮೈಸೂರಿನ
ಸರಸ್ವತಿಪುರಂನಲ್ಲಿ ಇರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ 2019ರಲ್ಲಿ ಬಿಎ ಎಲ್ ಎಲ್‌ಬಿ ಪದವಿಯನ್ನು ಪಡೆದುಕೊಂಡಿದ್ದಾರೆ ಹಾಗೂ 2014-17 ರ ಅವಧಿಯಲ್ಲಿ ಎನ್‌ಸಿಸಿ “ಸಿ’ ಸರ್ಟಿಫಿಕೇಟ್ ಗಳಿಸಿದ್ದಾರೆ.
ಎನ್‌ಸಿಸಿ ಮೂಲಕ ಸೇನೆ ಪ್ರವೇಶ ಪಡೆಯಲು 2020ರ ಆಗಸ್ಟ್‌ನ 25ರಿಂದ 29ರ ತನಕ ಬೆಂಗಳೂರಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿಯಲ್ಲಿ ಎರಡನೇ ರ್‍ಯಾಂಕ್ ಗಳಿಸಿದ್ದಾರೆ. 4ಕೆಎಆರ್, ಏರ್ ಎಸ್‌ಕ್ಯೂಎನ್ ಎನ್‌ಸಿಸಿ ಮೈಸೂರು ಗ್ರೂಪ್‌ನಲ್ಲಿ ಕೆಡೆಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಪ್ರಿತಾ 2016ರಲ್ಲಿ ಗಣರಾಜ್ಯೋತ್ಸವದಲ್ಲಿ ದೆಹಲಿಯ ರಾಜಪಥದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿ ಬೆಸ್ಟ್ ಕೆಡೆಟ್ ಎಂದು ಪ್ರಶಂಸಾ ಪತ್ರವನ್ನು ಗಳಿಸಿಕೊಂಡಿದ್ದಾರೆ.
ವಾಯುಪಡೆಗೆ ನಿಯೋಜನೆ: 2016ರ ಡಿಸೆಂಬರ್ ನಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆದ “ಯೂತ್ ಎಕ್ಸ್‌ಚೆಂಚ್ ಪ್ರೋಗ್ರಾಂ'(ವೈಇಪಿ) ಶಿಬಿರದಲ್ಲಿ ಭಾರತವನ್ನು ಪ್ರತಿನಿಧಿಸಿದರು. 2021ರಲ್ಲಿ ಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿ ತರಬೇತಿಯ ನಂತರ ವಾಯುಪಡೆಗೆ ನಿಯೋಜನೆಯಾಗಿದ್ದರು. 2024ರಲ್ಲಿ ಪತಿ ಮೇಜರ್ ಜೆರ್ರಿಬ್ಲೇಜ್ ಅವರೊಂದಿಗೆ ರಾಜಪಥ್ ಪೆರೇಡ್‌ಲ್ಲಿ ಭಾಗವಹಿಸಿದ್ದರು. ಅನಂತನಾಗ್, ಜಬ್ಟಾಲ್‌ಪುರ್ ಹಾಗೂ ಲೇಹ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಅವರು ಸಿಯಾಚಿನ್‌ಗೆ ಆಯ್ಕೆಯಾಗಿದ್ದಾರೆ.
ಸೇವೆ ಮಾಡುವ ತುಡಿತ: ಜೆಎಸ್‌ಎಸ್ ಕಾನೂನು ಕಾಲೇಜಿಗೆ ಸೇರಿದ ಸಂದರ್ಭದಲ್ಲೇ ಸೇವೆ ಮಾಡುವ ತುಡಿತ ಸುಪ್ರಿತಾ ಅವರಲ್ಲಿ ಇತ್ತು. ಇನ್ನೂ ಎನ್‌ಸಿಸಿಗೆ ಸೇರಿದ ಮೇಲಂತೂ ಅದು ಹೆಚ್ಚಾಯಿತು. ಓದುವಾಗಲೇ ಸೇನೆಗೆ ಸೇರಬೇಕು, ಉನ್ನತ ಗುರಿಯನ್ನು ಮುಟ್ಟಬೇಕು ಎಂದು ಹಗಲು-ಇರುಳು ಎನ್ನದೇ ಕೆಲಸದಲ್ಲಿ ಪರಿಶ್ರಮ ಹಾಕುತ್ತಿದ್ದರು.
ನಗರದ ಹೊರವಲಯದಲ್ಲಿ ಇರುವ ಅಲೋಕ ವಿಹಾರದಲ್ಲಿ ಕ್ಯಾಂಪ್ ಮಾಡಲಾಗುತ್ತಿತ್ತು. ಅಲ್ಲಿ ರಾತ್ರಿ ವೇಳೆ ಉಳಿದ ಕೆಡೆಟ್‌ಗಳು ವಿಶ್ರಾಂತಿಗೆ ಜಾರಿದರೇ ಸುಪ್ರಿತಾ ಏಕಾಗ್ರತೆಯಿಂದ ಸೇನೆಗೆ ಸಂಬಂಧಿಸಿದ ಪುಸಕ್ತಗಳನ್ನು ಓದುತ್ತಿದ್ದರು. ಪರೀಕ್ಷೆ ಹೇಗೆ ಬರೆಯಬೇಕು, ಆಯ್ಕೆಯಾಗಲು ಪೂರ್ವ ತಯಾರಿ ಹೇಗಿರಬೇಕು ಎನ್ನುವುದನ್ನು ತದೆಕಚಿತ್ತದಿಂದ ಗಮನಿಸುತ್ತಿದ್ದರು ಎಂದು ಜೆಎಸ್ ಎಸ್ ಕಾನೂನು ಕಾಲೇಜಿನ ಎನ್‌ಸಿಸಿ ಅಧಿಕಾರಿ, ಹಾಲಿ ಪ್ರಾಂಶುಪಾಲೆ ವಾಣಿಶ್ರೀ ಅವರು ಸುಪ್ರಿತಾ ಕುರಿತು “ಉದಯವಾಣಿ’ ಜತೆ ಮಾಹಿತಿ ಹಂಚಿಕೊಂಡರು.
ಸೇನಾ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆ
ಸೇನಾ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ವೆಯಿಟಿಂಗ್ ಲಿಸ್ಟ್‌ನಲ್ಲಿ ಇದ್ದರು. ಆ ಸಮಯದಲ್ಲಿ ಕಾಲೇಜಿಗೆ ಬಂದು ತಮ್ಮ ಕಿರಿಯ ಸಹಪಾಠಿಗಳ ಜತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ನೀವು ಸೇನೆಗೆ ಸೇರಲು ಮುಂದಾಗಬೇಕು ಎಂದು ಸ್ಪೂರ್ತಿ ತುಂಬಿದರು. ರಕ್ತದಲ್ಲಿ ಎಚ್‌ಬಿ ಪ್ರಮಾಣ ಕಡಿಮೆ ಇದೆ. ಒಂದು ತಿಂಗಳ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಆಗ ನಾವೆಲ್ಲರೂ ಸಪೋಟ ಹಣ್ಣನ್ನು ಸೇವಿಸಬೇಕು, ಇನ್ನಿತರೆ ಹಣ್ಣು-ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು ಎಂದು ಸಲಹೆ ಕೊಟ್ಟಿದ್ದೇವು. ಅದಾದ ಬಳಿಕ ಆಯ್ಕೆಯಾದ ತಕ್ಷಣ ಕಾಲೇಜಿಗೆ ಫೋನ್ ಮಾಡಿ ಖುಷಿಯನ್ನು ಹಂಚಿಕೊಂಡರು. ಈಗ ದೇಶ ಸೇವೆಯನ್ನು ಮಾಡುತ್ತಿದ್ದಾರೆ. ಇದು ನಮಗೆ ಹೆಮ್ಮೆ ತರುವ ವಿಚಾರ ಎಂದು ವಾಣಿಶ್ರೀ ಅವರು ಖುಷಿಯನ್ನು ವ್ಯಕ್ತಪಡಿಸಿದರು.