Advertisement

ಯೋಗ: ಲಕ್ಷಕ್ಕೂ ಹೆಚ್ಚು ಜನ ಸೇರಿಸಲು ತೀರ್ಮಾನ

04:23 PM Jun 05, 2019 | Team Udayavani |

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಂದು ಸಾಮೂಹಿಕ ಯೋಗ ಪ್ರದರ್ಶನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಯೋಗ ಪಟುಗಳನ್ನು ಸೇರಿಸಲು ನಿರ್ಧರಿಸಿರುವ ಜಿಲ್ಲಾಡಳಿತ, ಸಿದ್ಧತೆಗೆ ಕಾಲಾವಕಾಶ ಕಡಿಮೆ ಇರುವುದರಿಂದ ಈ ಬಾರಿ ಯೋಗ ದಿನದ ಗಿನ್ನಿಸ್‌ ದಾಖಲೆಗೆ ಪ್ರಯತ್ನ ಮಾಡದಿರಲು ತೀರ್ಮಾನಿಸಿದೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆಯ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕೇಂದ್ರದ ಸಚಿವರೊಬ್ಬರಿಗೆ ಆಹ್ವಾನ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರುಗಳ ಜೊತೆಗೆ ಪ್ರತ್ಯೇಕ ಸಭೆ ಮಾಡಿ, ಈ ಬಾರಿ ಒಂದು ಲಕ್ಷಕ್ಕಿಂತ ಹೆಚ್ಚು ಯೋಗಪಟುಗಳನ್ನು ಸೇರಿಸಬೇಕು. ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರೊಬ್ಬರನ್ನು ಆಹ್ವಾನಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ವಿವರ ನೀಡಿದ ಜಿಲ್ಲಾಧಿಕಾರಿ: ಯೋಗ ದಿನಾ ಚರಣೆಯ ಬಗ್ಗೆ ಸಭೆಗೆ ವಿವರ ನೀಡಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, 2015ರಲ್ಲಿ ಮೊದಲ ಬಾರಿಗೆ ಮೈಸೂರು ಅರಮನೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಿ ದಾಗ 5 ಸಾವಿರ ಜನರು ಭಾಗವಹಿಸಿದ್ದು, ಆಯುಷ್‌ ಇಲಾಖೆ 1 ಲಕ್ಷ ರೂ. ಅನುದಾನ ಒದಗಿಸಿತ್ತು.

ಗಿನ್ನಿಸ್‌ ದಾಖಲೆ: 2016ರಲ್ಲಿ 2ನೇ ಬಾರಿಗೆ ಅರಮನೆ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ 10 ಸಾವಿರ ಮಂದಿ ಭಾಗವಹಿಸಿದ್ದು, ಆಯುಷ್‌ ಇಲಾಖೆ 1 ಲಕ್ಷ ರೂ. ಅನುದಾನ ಒದಗಿಸಿತ್ತು. 2017ರಲ್ಲಿ 3ನೇ ಬಾರಿಗೆ ರೇಸ್‌ಕೋರ್ಸ್‌ ಆವರಣದಲ್ಲಿ ಯೋಗ ದಿನಾಚರಣೆ ಆಯೋಜಿಸಿದಾಗ 55,506 ಮಂದಿ ಭಾಗವಹಿಸಿದ್ದರು. ಆಯುಷ್‌ ಇಲಾಖೆ 1 ಲಕ್ಷ ರೂ., ಪ್ರವಾಸೋದ್ಯಮ ಇಲಾಖೆ 40 ಲಕ್ಷ ರೂ. ಒದಗಿಸಿತ್ತು. ಈ ವರ್ಷ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿತ್ತು ಎಂದರು.

Advertisement

60 ಸಾವಿರ ಜನ ಭಾಗಿ: 2018ರಲ್ಲಿ ರೇಸ್‌ಕೋರ್ಸ್‌ ಆವರಣದಲ್ಲೇ ನಾಲ್ಕನೇ ಬಾರಿಗೆ ಯೋಗ ದಿನಾಚರಣೆ ಆಯೋಜಿಸಿದಾಗ 60 ಸಾವಿರ ಜನರು ಭಾಗವಹಿ ಸಿದ್ದರು. ಆಯುಷ್‌ ಇಲಾಖೆ 1 ಲಕ್ಷ ರೂ., ಪ್ರವಾ ಸೋದ್ಯಮ ಇಲಾಖೆ 40 ಲಕ್ಷ ರೂ. ಒದಗಿಸಿತ್ತು. ಈ ವರ್ಷ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿತ್ತು. ಆ ಸಂದರ್ಭ ದಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಗಿನ್ನಿಸ್‌ ದಾಖಲೆಗೆ ಪ್ರಯತ್ನ ಮಾಡಿರಲಿಲ್ಲ ಎಂದು ವಿವರಿಸಿದರು.

ಅನುದಾನಕ್ಕೆ ಪ್ರಸ್ತಾವನೆ: ಜೆಎಸ್‌ಎಸ್‌, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳೂ ಸೇರಿದಂತೆ ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿ ಈಗಾಗಲೇ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಉಪಾಹಾರ ವ್ಯವಸ್ಥೆ: ಯೋಗ ಪ್ರದರ್ಶನದಲ್ಲಿ ಭಾಗವಹಿಸುವವರಿಗೆ ಉಪಾಹಾರ ಒದಗಿಸಲು ಆಹಾರ ಸಮಿತಿ ಈಗಾಗಲೇ ಸಿದ್ಧತೆ ನಡೆಸಿದ್ದು, ಜೆಎಸ್‌ಎಸ್‌, ಗಣಪತಿ ಆಶ್ರಮ ಹಾಗೂ ಇಸ್ಕಾನ್‌ ನವರು ಉಪಾಹಾರ ಒದಗಿಸಲು ಮುಂದೆ ಬಂದಿದ್ದು, ಈ ಮೂರು ಸಂಸ್ಥೆಯವರು ಎಷ್ಟು ಜನರಿಗೆ ಉಪಾಹಾರ ವ್ಯವಸ್ಥೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡು ಆಹಾರ ಉಪ ಸಮಿತಿ ಉಳಿದ ವ್ಯವಸ್ಥೆ ಮಾಡಿ ಕೊಳ್ಳಬೇಕಿದೆ ಎಂದರು.

190 ಕಿರು ವೇದಿಕೆ: ಈ ಹಿಂದಿನ ವರ್ಷಗಳಲ್ಲಿ ಸಿಎಫ್ಟಿಆರ್‌ಐ, ಬೆಮೆಲ್ ಸೇರಿದಂತೆ ಕೇಂದ್ರ ಸರ್ಕಾರಿ ಕಚೇರಿಗಳವರು ಪ್ರತ್ಯೇಕವಾಗಿಯೇ ಯೋಗ ದಿನ ಆಚರಿಸುತ್ತಿದ್ದರು. ಈ ವರ್ಷ ಅವರೂ ಸಹ ನಮ್ಮೊಂ ದಿಗೆ ಬರಲಿದ್ದಾರೆ. ರೇಸ್‌ಕೋರ್ಸ್‌ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ 194 ಬ್ಲಾಕ್‌ಗಳನ್ನು ರಚಿಸಲಾಗುತ್ತೆ. ಇದಕ್ಕಾಗಿ 190 ಕಿರು ವೇದಿಕೆಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚು ಬಸ್‌ ವ್ಯವಸ್ಥೆ: ಮೈಸೂರಿನ ವಿವಿಧ ಭಾಗ ಗಳಿಂದ ರೇಸ್‌ಕೋರ್ಸ್‌ ಆವರಣಕ್ಕೆ ಬೆಳಗ್ಗೆ 6 ಗಂಟೆ ಯೊಳಗೆ ಯೋಗಪಟುಗಳು ಸೇರಬೇಕಿರುವುದರಿಂದ ಕೆಎಸ್ಸಾರ್ಟಿಸಿಯಿಂದ ನಗರದ ವಿವಿಧ ಭಾಗಗಳಿಂದ ಮುಂಜಾನೆ 4 ಗಂಟೆಯಿಂದ ಬಸ್‌ ವ್ಯವಸ್ಥೆ ಮಾಡ ಲಾಗಿದೆ. ಕಳೆದ ಬಾರಿ 130 ಬಸ್‌ ಒದಗಿಸಲಾಗಿತ್ತು. ಈ ವರ್ಷ ಹೆಚ್ಚಿನ ಬಸ್‌ಗಳನ್ನು ಕೇಳಲಾಗಿದೆ.

ಹಾವುಗಳಿದ್ದರೆ ಹಿಡಿಯಲು ಸೂಚನೆ: ಪೊಲೀಸರಿಂದ ಭದ್ರತಾ ವ್ಯವಸ್ಥೆ, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳದ ನಿಯೋಜನೆ, ನಗರಪಾಲಿಕೆ ಯಿಂದ ಸ್ವಚ್ಛತೆಗೆ ಕ್ರಮ ಹಾಗೂ ರೇಸ್‌ಕೋರ್ಸ್‌ ಮೈದಾನದಲ್ಲಿ ಹಾವುಗಳಿದ್ದರೆ ಹಿಡಿಯಲು ಕ್ರಮ ಕೈಗೊಳ್ಳಬೇಕಾಗುತ್ತದೆ, ಸ್ವಯಂಸೇವಕರ ನೇಮಕಕ್ಕೂ ಕ್ರಮಕೈಗೊಳ್ಳಲಾಗಿದೆ ಎಂದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ಸಿನ ದೃಷ್ಟಿಯಿಂದ ಜೂ.9ರಂದು ಅರಮನೆ ಆವರಣದಲ್ಲಿ, 16ರಂದು ರೇಸ್‌ಕೋರ್ಸ್‌ ಆವರಣ ದಲ್ಲಿ ಯೋಗ ತಾಲೀಮು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್. ನಾಗೇಂದ್ರ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪ ಮೇಯರ್‌ ಶಫಿ ಮಹಮ್ಮದ್‌, ನಗರ ಪಾಲಿಕೆ ಆಯುಕ್ತ ರಾದ ಶಿಲ್ಪ ನಾಗ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಮೈಸೂರು ಯೋಗ ಒಕ್ಕೂಟದ ಶ್ರೀ ಹರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಚಾಲನೆ: ಯೋಗ ದಿನಾಚರಣೆ ಸಂಬಂಧ ಜಿಲ್ಲಾಡಳಿತ ರೂಪಿಸಿರುವ ವೆಬ್‌ಸೈಟ್: www.yogadaymysuruಗೆ ಇದೇ ಸಂದರ್ಭ ದಲ್ಲಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next