ಮೈಸೂರು: ಇದು ಆಧುನಿಕ ಶ್ರವಣಕುಮಾರನ ಕಥೆ…ಹೌದು ಮೈಸೂರಿನ ಈ ವ್ಯಕ್ತಿ ತನ್ನ 70 ವರ್ಷದ ತಾಯಿಯನ್ನು ಸ್ಕೂಟರಿನಲ್ಲಿಯೇ ತೀರ್ಥಯಾತ್ರೆ ದರ್ಶನ ಮಾಡಿಸಿದ್ದಾರೆ. ಬರೋಬ್ಬರಿ 48,100 ಕಿಲೋ ಮೀಟರ್ ನಷ್ಟು ದೂರ ಕ್ರಮಿಸಿರುವ ಇವರ ಕಾರ್ಯ ಇದೀಗ ಅಂತರ್ಜಾಲದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದರಲ್ಲಿಯೂ ವಿಶೇಷ ಏನು ಅಂದರೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಮೆಚ್ಚಿಕೊಂಡು ಉಡುಗೊರೆಯೊಂದನ್ನು ಘೋಷಿಸಿರುವುದು!
ಮೈಸೂರಿನ ಡಿ.ಕೃಷ್ಣಕುಮಾರ್ ಎಂಬವರು ತನ್ನ ಕೆಲಸವನ್ನು ಬಿಟ್ಟು 20 ವರ್ಷಗಳಷ್ಟು ಹಳೆಯದಾದ ಬಜಾಜ್ ಚೇತಕ್ ಸ್ಕೂಟರ್ ನಲ್ಲಿಯೇ ತಾಯಿಯನ್ನು ತೀರ್ಥ ಯಾತ್ರೆ ಮೂಲಕ ದರ್ಶನ ಮಾಡಿಸುತ್ತಿರುವ ಕುರಿತು ನಾಂದಿ ಪೌಂಡೇಶನ್ ಸಿಇಒ ಮನೋಜ್ ಕುಮಾರ್ ಅವರು ಇಂದು ವಿಡಿಯೋ ತುಣಕನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.
ಕೃಷ್ಣಕುಮಾರ್ ಅವರ ತಾಯಿ ಚೂಡಾರತ್ನ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮಗನ ಬಳಿ ತನಗೆ ಹಂಪಿಯನ್ನು ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ನಮ್ಮದು ಅವಿಭಕ್ತ ಕುಟುಂಬವಾಗಿತ್ತು, ನನ್ನ ತಂದೆ ತೀರಿಹೋಗುವವರೆಗೂ ತಾಯಿ ಅಡುಗೆ ಮನೆ ಕೆಲಸ ಮಾಡಿಕೊಂಡೇ ಇದ್ದಿದ್ದರು. ಹೀಗಾಗಿ ನಾನು ಅವರ ಮಗನಾಗಿ ತೀರ್ಥಯಾತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದರು.
ಒರಿಸ್ಸಾ ಪೋಸ್ಟ್ ವರದಿ ಪ್ರಕಾರ, ಕೃಷ್ಣಕುಮಾರ್ ಕಳೆದ 7 ತಿಂಗಳ ಕಾಲ ತಮ್ಮ ತಾಯಿಯನ್ನು ಸ್ಕೂಟರ್ ನಲ್ಲಿಯೇ ತೀರ್ಥಯಾತ್ರೆ ಮಾಡಿಸುತ್ತಿದ್ದಾರೆ. ಮಠಗಳಲ್ಲಿ ರಾತ್ರಿ ತಂಗುವ ಕೃಷ್ಣಕುಮಾರ್ ಅವರು ತಮ್ಮ ಪ್ರಯಾಣಕ್ಕೆ ಸ್ಕೂಟರ್ ಆಧಾರವಾಗಿದ್ದರಿಂದ ಹೋಟೆಲ್ ರೂಂ ಆಶ್ರಯಿಸುತ್ತಿಲ್ಲ ಎಂದು ಹೇಳಿದೆ.
ಈ ಹೃದಯಸ್ಪರ್ಶಿ ಕಥೆ ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನಸೆಳೆದಿತ್ತು. ತಾಯಿ, ಮಗನ ಸ್ಕೂಟರ್ ತೀರ್ಥಯಾತ್ರೆ ಕುರಿತು ಓದಿದ ಮಹೀಂದ್ರಾ ಅವರು, ಇಬ್ಬರಿಗೂ ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಇದೊಂದು ಸುಂದರ ಕಥನ..ತಾಯಿಯ ಬಗ್ಗೆ ಇರುವ ಪ್ರೀತಿ ಇದಾಗಿದೆ. ಅಲ್ಲದೇ ದೇಶದ ಬಗ್ಗೆ ಇರುವ ಪ್ರೀತಿಯೂ ಹೌದು ಎಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಒಂದು ವೇಳೆ ಅವರನ್ನು ನನ್ನ ಸಂಪರ್ಕಿಸುವಂತೆ ಮಾಡಿ. ನಾನು ವೈಯಕ್ತಿಕವಾಗಿ ಅವರಿಗೆ ಮಹೀಂದ್ರಾ ಕೆಯುವಿ 100 NXT ಉಡುಗೊರೆಯಾಗಿ ನೀಡಲು ಬಯಸಿದ್ದೇನೆ. ಅವರು ತಮ್ಮ ಮುಂದಿನ ಪ್ರಯಾಣವನ್ನು ತಾಯಿ ಜತೆ ಕಾರಿನಲ್ಲೇ ಮುಂದುವರಿಸಲಿಎ ಎಂದು ಟ್ವೀಟ್ ಮಾಡಿದ್ದಾರೆ.