ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು,ಪತ್ನಿಯ ಶೀಲ ಶಂಕಿಸಿ 12 ವರ್ಷದಿಂದ ದಿಗ್ಬಂಧನದಲ್ಲಿರಿಸಿ ಭೀತಿ ಹುಟ್ಟಿಸಿದ್ದ ವ್ಯಕ್ತಿಯೊಬ್ಬನ್ನನ್ನು ಬಂಧಿಸಿದ್ದು, ಮಹಿಳೆಯನ್ನು ಬಂಧ ಮುಕ್ತ ಗೊಳಿಸಲಾಗಿದೆ.
ಸಣ್ಣಾಲಯ್ಯ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ. ಹೈರಿಗೆ ಗ್ರಾಮದಲ್ಲಿ ಪತ್ನಿಯನ್ನು 12 ವರ್ಷದಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಅಜ್ಞಾತವಾಸದಲ್ಲಿರಿಸಿದ್ದ. 12 ವರ್ಷದ ಹಿಂದೆ ವಿವಾಹವಾಗಿತ್ತು. ಸಣ್ಣಾಲಯ್ಯನಿಗೆ ಈಕೆ 3ನೇ ಪತ್ನಿಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.ಮೊದಲ ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ದೂರವಾಗಿದ್ದರು.
ಪತ್ನಿಯನ್ನು ಮನೆಯ ಕಿಟಕಿಗಳನ್ನೂ ಭದ್ರಪಡಿಸಿ ಮನೆಯಿಂದ ಹೊರಗಿನ ಯಾರೊಂದಿಗೂ ಮಾತನಾಡದಂತೆ ಎಚ್ಚರವಹಿಸಿದ್ದ.ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರ ಹೊರ ಹಾಕುವ ಕೆಲಸ ಮಾಡಿ ವಿಕೃತಿ ತೋರಿದ್ದ.
ಈ ವಿಚಾರ ತಿಳಿದು ವಕೀಲರಾದ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಶೀಲ, ಎಎಸ್ಐ ಸುಭಾನ್ ಇತರರ ತಂಡ ಮನೆಗೆ ಭೇಟಿ ನೀಡಿದ್ದಾರೆ.ವಿಷಯ ತಿಳಿಯುತ್ತಿದ್ದಂತೆಯೇ ಸುತ್ತ ಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದಾರೆ. ರಾತ್ರೋರಾತ್ರಿ ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ದಿಗ್ಬಂಧನದಲ್ಲಿರಿಸಿರುವುದನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಸಣ್ಣಾಲಯ್ಯ ಹಾಕಿದ್ದ. ಆತನ ವರ್ತನೆಯಿಂದ ಗ್ರಾಮಸ್ಥರಲ್ಲೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ನೀಡಲೂ ಗ್ರಾಮಸ್ಥರು ಹಿಂಜರಿಯುತ್ತಿದ್ದರು. ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯತಿ ನಡೆದಿತ್ತು.ಸಣ್ಣಾಲಯ್ಯ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿ ಮುಂದುವರೆಸಿದ್ದ ಎಂದು ತಿಳಿದು ಬಂದಿದೆ.
ಮಹಿಳೆಯ ಒಪ್ಪಿಗೆಯಂತೆ ಆಕೆಯ ತವರು ಮನೆಯಲ್ಲಿ ಪೊಲೀಸರು. ಆಶ್ರಯ ಕೊಡಿಸಿದ್ದಾರೆ. ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.