ಬೆಂಗಳೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ಗುರುವಾರ ಪಕ್ಷದ ಕಚೇರಿ ಹಾಗೂ ಪ್ರಮುಖ ನಾಯಕರ ಭೇಟಿ ಮಾಡಿ ಕ್ಷೇತ್ರಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು.
ಗುರುವಾರ ಬೆಳಗ್ಗೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ಯದುವೀರ್‌ಗೆ ಮಹಿಳೆಯರು ಆರತಿ ಎತ್ತಿ, ತಿಲಕವಿಟ್ಟು ಸ್ವಾಗತಿಸಿದರು. ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ, ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯ ದೃಷ್ಟಿಕೋನ ಇಟ್ಟುಕೊಂಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಿರ್ಧರಿಸಿದ್ದೇನೆ. ಪ್ರತಾಪಸಿಂಹ ಅವರು ಮೈಸೂರಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ತಮಗೆ ಸಹಕಾರ ನೀಡಲಿದ್ದಾರೆ ಎಂದು ನುಡಿದರು.
ಪ್ರತಾಪ್ ಸಿಂಹ ಟೀಕೆಗೆ ಉತ್ತರಿಸಿ, ಜೀವನದಲ್ಲಿ ಎಲ್ಲವನ್ನೂ ಸ್ವೀಕರಿಸಬೇಕು. ಎಲ್ಲವನ್ನೂ ನುಂಗಬೇಕು. ಅರಮನೆಯಲ್ಲಿ ಇದ್ದರೆ ಇಂತಹ ಪ್ರಶ್ನೆ ಬರುವುದಿಲ್ಲ ಎಂದೇನಿಲ್ಲ. 9 ವರ್ಷದಿಂದಲೂ ಕೇಳಿಬಂದ ಪ್ರಶ್ನೆಗಳೇ ಇವೆ. ಇವೆಲ್ಲಾ ಸಹಜ. ರಾಜಕೀಯದಲ್ಲಿ ಬಹುಶಃ ಇಂತಹ ಪ್ರಶ್ನೆಗಳೇ ಹೆಚ್ಚು ಬರಬಹುದು. ಅದನ್ನೆಲ್ಲಾ ನುಂಗಿಕೊಂಡು ಹೋಗಬೇಕಷ್ಟೆ ಎಂದಷ್ಟೇ ಹೇಳಿದರು.
ನಂತರ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ತೆರಳಿ ಬಿಎಸ್‌ವೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬೆಂಗಳೂರಿನಿಂದ ಮೈಸೂರಿನತ್ತ ತೆರಳಿದ ಅವರು, ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೂ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.