ಮೈಸೂರು: ದಸರಾ ವೈಭವದ ವಿಜಯ ದಶಮಿಯ ದಿನವಾದ ಮಂಗಳವಾರ ಜಂಬೂ ಸವಾರಿ ಮೆರವಣಿಗೆ ಕೋಟ್ಯಂತರ ಜನರ ಕಣ್ಮನ ಸೆಳೆಯಿತು. ಕನ್ನಡ ನಾಡಿನ ಶ್ರೀಮಂತ ವೈಭವಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಿದ. ಅಭಿಮನ್ಯುವಿನ ಎಡ ಬಲದಲ್ಲಿ ಕುಮ್ಕಿ ಆನೆಗಳಾದ ಲಕ್ಷ್ಮೀ ಮತ್ತು ವಿಜಯಾ ಸಾಥ್ ನೀಡಿದವು. ಅರಮನೆಯಿಂದ ಬನ್ನಿಮಂಟಪದವರೆಗೆ ಈ ಜಂಬೂಸವಾರಿ ಸಾಗಿತು. ಲಕ್ಷಾಂತರ ಜನರು ವೈಭವದ ಮೆರವಣಿಗೆಗೆ ಸಾಕ್ಷಿಯಾದರು. ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗುವ ಮೂಲಕ ಕಳೆ ಹೆಚ್ಚಿಸಿದವು.
ನಿಗದಿಯಾಗಿದ್ದ ಶುಭ ಮುಹೂರ್ತಕ್ಕಿಂತ ತಡವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಲಾಯಿತು. 4.40 ರಿಂದ 5 ಗಂಟೆಯ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ 9 ನಿಮಿಷ ತಡವಾಗಿ 5.9 ನಿಮಿಷಕ್ಕೆ ಸಿಎಂ, ಡಿಸಿಎಂ ಡಿ.ಕೆ.ಶಿವಕುಮಾರ್, ಯದುವೀರ್ ಒಡೆಯರ್ ಸೇರಿ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.
ಮಧ್ಯಾಹ್ನ ಬಲರಾಮ ಗೇಟ್ ಬಳಿ ಸಿಎಂ ಸಿದ್ದರಾಮಯ್ಯ ನಂದಿಧ್ವಜ ಪೂಜೆ ನೆರವೇರಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ಹೆಎಚ್.ಮುನಿಯಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ, ಕೆ.ಎನ್.ರಾಜಣ್ಣ, ಭೈರತಿ ಸುರೇಶ್, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು. ಇದೆ ಮೊದಲ ಬಾರಿ ತುಮಕೂರಿನ ಕಲಾವಿದರ ತಂಡದಿಂದ 108 ನಂದಿಧ್ವಜ ಕುಣಿತ ನಡೆಸಲಾಯಿತು.
ಭುವನೇಶ್ವರಿ ದೇಗುಲದ ಬನ್ನಿಮಂಟಪದಲ್ಲಿ ರಾಜ ಪರಂಪರೆಯ ಯದುವೀರ್ ಒಡೆಯರ್ ಆರು ಶಮಿ ಪೂಜೆ ನಡೆಸಿದರು.
ಪ್ರತಿಭಟನೆ
ದಸರಾ ಆಚರೆಣೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದರು. ರೈತ ಮುಖಂಡ ಭಾಗ್ಯರಾಜ್ ಸೇರಿದಂತೆ ಜಂಬೂ ಸವಾರಿ ವೀಕ್ಷಣೆಗಾಗಿ ಇರುವ ಗ್ಯಾಲರಿಯಲ್ಲಿ ಕುಳಿತಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ಜೀಪ್ನಲ್ಲಿ ಕರೆದೊಯ್ದರು.