ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಶುಕ್ರವಾರದಿಂದ ಭಾರ ಹೊರುವ ತಾಲೀಮು ಆರಂಭಿಸಲಾಯಿತು.
12.30ರ ಬಳಿಕ ಶುಭ ಮುಹೂರ್ಥದಲ್ಲಿ ವಿಶೇಷ ಪೂಜೆ ನೆರವೇರಿಸಿ 1 ರಿಂದ 1.45 ರವರೆಗೆ ಗಾದಿ ನಮ್ದಾ ಕಟ್ಟಿ ಮರಳು ಮೂಟೆ ಹೊರಿಸುವ ಕಾರ್ಯ ಆರಂಭಿಸಲಾಯಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು ರಾಜ ಮಾರ್ಗದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದತ್ತ ಅಭಿಮನ್ಯು ಮತ್ತು ತಂಡ ಸಾಗಿತು.
ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಬನ್ನಿಮಂಟಪಕ್ಕೆ ಸಾಗಿದ ಮಾರ್ಗದಲ್ಲೇ ವಾಪಸ್ ಹೊರಟು ಸಂಜೆ 5 ಗಂಟೆ ಸುಮಾರಿಗೆ ಅರಮನೆ ಆವರಣ ತಲುಪಲಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಮಾಲತಿಪ್ರಿಯಾ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಭಿಮನ್ಯುವಿನ ಎಡಬಲದಲ್ಲಿ ಕುಮ್ಕಿ ಆನೆಗಳಾಗಿ ವರಲಕ್ಷ್ಮೀ ಹಾಗು ವಿಜಯ ಇದ್ದವು.
ಆನೆಗಳಿಗೆ ಫಲತಾಂಬೂಲ ಕಬ್ಬು ಬೆಲ್ಲ ಸಮರ್ಪಣೆ ಮಾಡಿ, ಅಭಿಮನ್ಯುವಿಗೆ ಗಾದಿ, ನಮ್ದಾ, ಚಾಪು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅಭಿಮನ್ಯುವಿಗೆ ಇಂದು 600 ಭಾರ ಹೊರಿಸಿ ತಾಲೀಮು ಆರಂಭಿಸಲಾಗಿದೆ.