Advertisement
ಈ ಬಾರಿಯೂ ದಸರಾ ಉತ್ಸವಕ್ಕೆ 14 ಆನೆಗಳನ್ನು ಕರೆತರಲಾಗುತ್ತಿದ್ದು, ಮೊದಲ ತಂಡ ದಲ್ಲಿ 8(ಅರ್ಜುನ ಗೈರು) ಆನೆಗಳನ್ನು ಬರಮಾಡಿಕೊಳ್ಳಲಾಗಿದೆ. ಆನೆಗಳಿಗೆ ಯಾವುದೇ ಕೊರತೆಯಾಗದಂತೆ ಅರಣ್ಯ ಇಲಾಖೆ ನಿತ್ಯ ಪುಷ್ಕಳ ಆಹಾರ ನೀಡಲು ಸಿದ್ಧತೆ ಮಾಡಿದೆ. ಸೆ.7 ಅಥವಾ 08ರಿಂದ ಎಲ್ಲಾ ಆನೆಗಳಿಗೂ ವಿವಿಧ ಹಂತದ ತಾಲೀಮು ಆರಂಭವಾಗಲಿದೆ. ಈ ಎಲ್ಲಾ ಆನೆಗಳಿಗೂ ಹೆಚ್ಚಿನ ದೈಹಿಕ ಸಾಮರ್ಥ್ಯ ಅವಶ್ಯಕತೆ ಇರುವು ದ ರಿಂದ ಸೆ.7ರಿಂದಲೇ ಗಜಪಡೆಗೆ ವಿಶೇಷ ಪೌಷ್ಟಿಕ ಆಹಾರ ನೀಡುವುದು ಆರಂಭವಾಗಲಿದೆ.
Related Articles
Advertisement
ಸೆ.7-8 ರಿಂದ ದಸರಾ ಆನೆಗಳಿಗೆ ತಾಲೀಮು ಆರಂಭ: ಸೆ. 7 ಅಥವಾ 8 ರಿಂದ ತಾಲೀಮು ಆರಂಭವಾಗಲಿದ್ದು, ಆರಂಭದಲ್ಲಿ ಯಾವುದೇ ಭಾರ ಹಾಕದೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಿವೆ. 5 ದಿನ ಕಳೆದ ನಂತರ ಭಾರ ಹೊರುವ ತಾಲೀಮು ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ ಆನೆಗಳಿಗೆ ಭಾರ ಹೊರಿಸಲಾಗುತ್ತದೆ. ಹೊಸ ಆನೆ ಕಂಜನ್ ಕೂಡ ತಾಲೀಮಿನಲ್ಲಿ ಭಾಗಿಯಾಗಲಿದೆ. ಅಭಿಮನ್ಯು ಜತೆಗೆ ಇತರೆ ಆನೆ ಸಿದ್ಧಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ 7ಆನೆಗಳಿಗೆ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದೊರೆಯಲಿದೆ. ಗಂಡಾನೆಗಳೊಂದಿಗೆ ಹೆಣ್ಣಾನೆಗಳಾದ ವರಲಕ್ಷ್ಮೀ, ವಿಜಯ ಕೂಡ ತಾಲೀಮು ನಡೆಸಲಿವೆ.
ಆನೆಗಳ ಆಹಾರ ಕ್ರಮ ಹೇಗಿದೆ?
ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುವುದು.
ಬೆಳಗ್ಗೆ 6.30 ಮತ್ತು ರಾತ್ರಿ 7ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ
ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.
ಆನೆಗಳು ತಾಲೀಮು ಮುಗಿಸಿ ಬಂದ ನಂತರ ಸ್ನಾನ ಮಾಡಿಸಿ ಶುಚಿಗೊಳಿಸುವ ಕಾರ್ಯ ನಿತ್ಯ ನಡೆಯುತ್ತದೆ.
ಒಂದೂವರೆ ತಿಂಗಳ ಅವಧಿಯಲ್ಲಿ ಆನೆಗಳ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ.
-ಸತೀಶ್ ದೇಪುರ