Advertisement
ಸಾಂಪ್ರದಾಯಿಕ ಪೂಜೆ: ಗಜಪಡೆಗೆ ಭಾರ ಹೊರಿಸುವ ಮುನ್ನ ಸಂಪ್ರದಾಯದಂತೆ ಬೆಳಗ್ಗೆ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದ ಹಾಗೂ ಆನೆಗಳಿಗೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಲಾಯಿತು. ಈ ವೇಳೆ ಎಪಿಸಿಸಿಎಫ್ ಜಗತ್‌ರಾಮ್ ಆನೆಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ದರು. ಬಳಿಕ ಹಣ್ಣು ಮತ್ತು ಕಬ್ಬನ್ನು ನೀಡಿದರು.
Related Articles
Advertisement
ಎಲ್ಲಾ ಆನೆಗಳಿಗೂ ತಾಲೀಮು: ಆರಂಭದಲ್ಲಿ ಅಭಿಮನ್ಯು, ಗೋಪಾಲಸ್ವಾಮಿ, ವಿಕ್ರಮ ಆನೆಗಳಿಗೆ ಭಾರ ಹೊರುವ ತಾಲೀಮು ನಡೆಸಲಿದ್ದು, ನಂತರ ಹಂತ ಹಂತವಾಗಿ ಧನಂಜಯ ಹಾಗೂ ಇದೇ ಮೊದಲ ಬಾರಿಗೆ ಬಂದಿರುವ ಅಶ್ವತ್ಥಾಮನಿಗೂ ಬಾರ ಹೊರಿಸುವ ತಾಲೀಮು ನಡೆಸಲಾಗುತ್ತದೆ. ನಿತ್ಯ ಭಾರ ಹೆಚ್ಚಿಸುವ ನಂತರ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಗುತ್ತದೆ. ಇದಕ್ಕೂ ಮುನ್ನ ಪೂಜಾರಿ ಪ್ರಹ್ಲಾದರಾವ್ ಅವರು ಅಭಿಮನ್ಯು ಆನೆಗೆ ವಿಶೇಷ ಪೂಜೆ ಸಲ್ಲಿಸಿದರು. ಕಬ್ಬು, ಹಣ್ಣು ಹಂಪಲು ನೀಡಲಾಯಿತು. ಭಾರ ಹೊರುವ ತಾಲೀಮಿಗೂ ಮುನ್ನ ಆನೆಗಳಿಗೆ ಗಣಪತಿ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಆಂಜನೇಯ ಹೆಸರಿನಲ್ಲಿ ಪ್ರಾರ್ಥನೆ ಮಾಡಲಾಗಿದೆ. ಆಂಜನೇಯ ಶಕ್ತಿ ಆನೆಗಳಿಗೂ ಬರಲೆಂದು ಬೇಡಲಾಗಿದೆ ಎಂದು ಪ್ರಹ್ಲಾದರಾವ್ ಸುದ್ದಿಗಾರರಿಗೆ ವಿವರಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಎಪಿಸಿಸಿಎಫ್ ಜಗತ್‌ರಾಮ್ ಸಿಸಿಎಫ್ ಟಿ. ಹೀರಾಲಾಲ್, ಡಿಸಿಎಫ್ ಕರಿಕಾಳನ್, ವೈದ್ಯ ಡಾ. ರಮೇಶ್, ಅರಮನೆ ಎಸಿಪಿ ಚಂದ್ರಶೇಖರ್ ಸೇರಿದಂತೆ ಅಧಿಕಾರಿಗಳು ಇದ್ದರು.
ಹೊಸ ವಾತಾವರಣಕ್ಕೆ ಒಗ್ಗಿದ ಅಶ್ವತ್ಥಾಮ ಆನೆದಸರಾ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳು ತ್ತಿರುವ 34 ವರ್ಷದ ಅಶ್ವತ್ಥಾಮ ಆನೆ ನಗರ ಪರಿಸರಕ್ಕೆ ನಿಧಾನ ವಾಗಿ ಹೊಂದಿಕೊಳ್ಳುತ್ತಿದ್ದು, ಆನೆಗಳ ಜೊತೆಗೆ ಯಾವುದೇ ಭಯ, ಆತಂಕವಿಲ್ಲದೇ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ತಾಲೀಮಿನ ವೇಳೆ ಪಕ್ಕದಲ್ಲಿ ಅಧಿಕಾರಿಗಳ ಕಾರು ಸೇರಿದಂತೆ ಹೊಸ ವಸ್ತುಗಳು ಕಂಡರೆ ಕೊಂಚ ಬೆದರುವ ಅಶ್ವತ್ಥಾಮ ಬಳಿಕ ಸಾವರಿಸಿಕೊಂಡು ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದ್ದಾನೆ. ತಾಲೀಮು ಫೋಟೊ ಕ್ಲಿಕ್ಕಿಸಿ ಸಂತಸಪಟ್ಟ ಪ್ರವಾಸಿಗರು
ಅರಮನೆ ಆವರಣದಲ್ಲಿ ಗಜಪಡೆ ಭಾರ ಹೊರುವ ತಾಲೀಮು ಆರಂಭಿಸುತ್ತಿದ್ದಂತೆ ಅರಮನೆ ವೀಕ್ಷಣೆಗೆ ಆಗಮಿಸಿದ ಪ್ರವಾಸಿ ಗರು ಆನೆಗಳನ್ನು ಕಂಡು ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿ ಸಂತಸಪಟ್ಟರು. ದಾರಿಯುದ್ದಕ್ಕೂ ನೂರಾರು ಮಂದಿ ಆನೆಗಳಿಗೆ ಸ್ವಲ್ಪ ದೂರದಲ್ಲೇ ನಿಂತು ಸೆಲ್ಫಿ ತೆಗೆದುಕೊಂಡರೇ, ಇನ್ನೂ ಕೆಲವರು ವಿಡಿಯೋ ಮಾಡುತ್ತಾ ತಮ್ಮ ಸ್ಟೇಟಸ್‌ಗಳಿಗೆ ಅಪ್ಲೋಡ್ ಮಾಡುವುದರಲ್ಲಿ ತಲ್ಲೀನರಾದರು. ಒಟ್ಟಾರೆ ಅರಮನೆ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಆನೆಗಳು ಸಾಲಾಗಿ ತಾಲೀಮು ನಡೆಸಿದ ದೃಶ್ಯ ಕಂಡು ಹರ್ಷಗೊಂಡರು. ಬನ್ನಿ ಮಂಟಪದವರೆಗೆ
ತಾಲೀಮು ನಡೆಸಲು ಚಿಂತನೆ
ಮೈಸೂರು: ಆನೆಗಳಿಗೆ ಗದ್ದಲ, ವಾಹನ ಹಾಗೂ ಜನಜಂಗುಳಿ ಪರಿಚಯ ಮಾಡಿಕೊಡಲು ಬನ್ನಿಮಂಟಪದವರೆಗೆ ಗಜಪಡೆ ತಾಲೀಮು ನಡೆಸುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ದಸರಾ ಉನ್ನತ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ಡಾ. ಕರಿಕಾಳನ್ ತಿಳಿಸಿದರು. ಅರಮನೆ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಬೂ ಸವಾರಿ ದಿನದಂದು ಅರಮನೆ ಆವರಣದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದರಿಂದ ಆನೆಗಳು ಬೆದರದಂತೆ ರಸ್ತೆಯಲ್ಲಿ ತಾಲೀಮು ಮಾಡಬೇಕಿರುವುದು ಅತ್ಯಗತ್ಯ. ಆನೆಗಳಿಗೆ ನಿತ್ಯ 5ರಿಂದ 6 ಕಿಲೋ ಮೀಟರ್ ವಾಕ್ ಮಾಡಬೇಕು. ವಾಕ್ ಮಾಡಿದಷ್ಟು ಗಾಬರಿಯಾಗುವುದು ಕಡಿಮೆಯಾಗುತ್ತದೆ. ಈ ಬಗ್ಗೆ ಸಭೆಯಲ್ಲಿ ಮನವರಿಕೆ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ:‘ಅಕ್ಷಿ’ ಯಿಂದ ಬಂತು ಹಾಡು: ನೇತ್ರದಾನದ ಮಹತ್ವ ಸಾರುವ ಚಿತ್ರ ಸೆ.17ರಿಂದ ಅರಮನೆ ಆವರಣದಲ್ಲಿ ಆನೆಗಳು ತಾಲೀಮು ಆರಂಭಿಸಿವೆ. ನಿತ್ಯ 6ರಿಂದ 7 ಕಿಲೋ ಮೀಟರ್ ವಾಕ್ ಮಾಡುತ್ತಿದ್ದವು. ಸೋಮವಾರದ ತನಕ ಭಾರ ಹಾಕಿರಲಿಲ್ಲ. ಇದೀಗ ವಿಶೇಷ ಪೂಜೆ ಸಲ್ಲಿಸಿ ಭಾರ ಹೊರುವ ತಾಲೀಮು ಆರಂಭಿಸಿದ್ದೇವೆ ಎಂದರು. ಸುಮಾರು 275 ಕೆ.ಜಿ. ತೂಕದ 6 ಮರಳು ಮೂಟೆ, ನಮ್ದ , ಗಾದಿ ಸೇರಿ ಒಟ್ಟು 500ರಿಂದ 600 ಕೆಜಿ ಭಾರ ತಾಲೀಮು ಮಾಡುತ್ತಿದ್ದೇವೆ. ಮೊದಲ ದಿನ 1ರಿಂದ 1.5 ಕಿಲೋ ಮೀಟರ್ ತಾಲೀಮು ನಡೆಸಲಾಗುವುದು. ಅಭಿಮನ್ಯು ಜತೆಗೆ ಗೋಪಾಲಸ್ವಾಮಿ ಮತ್ತು ಧನಂಜಯಗೂ ಭಾರ ಹಾಕಿ ತಾಲೀಮು ಮಾಡಿಸುತ್ತೇವೆ. ಈ ವರ್ಷ ಅರಮನೆ ಪ್ರವೇಶಿಸಿರುವ ಅಶ್ವತ್ಥಾಮ ಆನೆ ಭಾರ ಹೊರಲಿದೆ. ಸುಮಾರು 100ರಿಂದ 200 ಕೆ.ಜಿ. ತೂಕವನ್ನು ಹಾಕಲಾಗುವುದು. ಆರಂಭದ ದಿನಗಳಿಗೆ ಹೋಲಿಸಿದರೆ ಅಶ್ವತ್ಥಾಮ ಆನೆ ತುಂಬಾ ಸಹಕರಿಸುತ್ತಿದೆ. ಜನರು, ದೀಪದ ಬೆಳಕಿಗೂ ಬೆದರದೇ ತಾಲೀಮಿನಲ್ಲಿ ಪಾಲ್ಗೊಂಡಿದ್ದಾನೆ ಎಂದು ಮಾಹಿತಿ ನೀಡಿದರು. ಅರಮನೆಯಲ್ಲಿರುವ 6 ಆನೆಗಳಲ್ಲಿ ನಾಲ್ಕು ಆನೆಗಳನ್ನು ವರ್ಗಾಯಿಸಲು ಮೌಖಿಕ ಸೂಚನೆ ಬಂದಿದೆ. ಸಿದ್ಧತೆ ಮಾಡಿಕೊಂಡಿದ್ದೇವೆ. ಅಧಿಕೃತ ಸೂಚನೆ ಬಂದ ತಕ್ಷಣ ಆನೆಗಳನ್ನು ಶಿಫ್ಟ್ ಮಾಡುತ್ತೇವೆ ಎಂದು ವಿವರಿಸಿದರು.