ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಹೆಸರಲ್ಲಿ ರಾಜ್ಯಸರ್ಕಾರ, ತಮಿಳುನಾಡಿಗೆ ನೀರು ಬಿಟ್ಟರೆ ಸಮಗ್ರ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆದೇಶಿಸಿರುವುದು ಹಾಗೂ ರಾಜ್ಯಸರ್ಕಾರ ಜಿಂದಾಲ್ ಸಂಸ್ಥೆಗೆ ಭೂಮಿ ನೀಡುತ್ತಿರುವುದನ್ನು ವಿರೋಧಿಸಿ ಮೈಸೂರು ರೈಲು ನಿಲ್ದಾಣದ ಬಳಿ ರಸ್ತೆಯಲ್ಲಿ ಮಲಗಿ ವಿನೂತನ ಪ್ರತಿಭಟನೆ ನಡೆಸಿದರು.
ಮೊದಲನೆಯದಾಗಿ ನಾನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪುತ್ತಿಲ್ಲ. ತಮಿಳು ನಾಡು ಪ್ರಾಧಿಕಾರ ರಚನೆ ಆಗಬೇಕು ಅಂತ ಹೇಳಿತ್ತು. ಆದರೆ, ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರದ ವಿರೋಧ ಕೂಡ ಇತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಪ್ರಾಧಿಕಾರದ ಸಭೆ ಯಲ್ಲಿ ಭಾಗವಹಿಸಿ ಪ್ರಾಧಿಕಾರದ ಆದೇಶವನ್ನು ಒಪ್ಪಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಒಪ್ಪಬಾರದು. ಪ್ರಾಧಿಕಾರಕ್ಕೆ ನಮ್ಮ ವಿರೋಧವಿದೆ ಎಂದರು.
ಜೂ.3ಕ್ಕೆ ಕೆಆರ್‌ಎಸ್‌ನಲ್ಲಿ ಸತ್ಯಾಗ್ರಹ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಒಂದು ಹನಿ ನೀರು ಕೊಡಲೂ ನಮ್ಮ ವಿರೋಧವಿದೆ. ತಮಿಳು ನಾಡಿಗೆ ನೀರು ಕೊಟ್ಟರೆ ಬೆಂಗಳೂರಿಗೆ ಕುಡಿ ಯುವ ನೀರು ಕೊಡಲು ಹೇಗೆ ಸಾಧ್ಯ? ರೈತರ ಬೆಳೆಗಳಿಗೂ ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತೆ. ಒಂದು ವೇಳೆ ನೀರು ಬಿಟ್ಟರೆ ಸಮಗ್ರ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್ ಮಾಡು ತ್ತೇವೆ. ಪ್ರಾಧಿಕಾರದ ಆದೇಶ ವಿರೋಧಿಸಿ ಜೂ. 3ರಂದು ಕೆಆರ್‌ಎಸ್‌ನಲ್ಲಿ ಸತ್ಯಾಗ್ರಹ ಮಾಡು ವುದಾಗಿ ತಿಳಿಸಿದರು.
ಜಿಂದಾಲ್ ಭೂಮಿ ಮಾರಾಟ: ರಾಜ್ಯ ಸಚಿವ ಸಂಪುಟ ಸಭೆ ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆಗೆ ಸಾವಿರಾರು ಎಕರೆ ಭೂಮಿ ಮಾರಾಟ ಮಾಡಲು ಒಪ್ಪಿಗೆ ನೀಡಿರುವುದು ಸರಿಯಲ್ಲ. ರೈತರ ಕೃಷಿ ಭೂಮಿ ಕಸಿದು ರಿಯಲ್ ಎಸ್ಟೇಟ್ ಸಂಸ್ಥೆಗೆ ನೀಡುವ ಮೂಲಕ ಜಿಂದಾಲ್ ಸಂಸ್ಥೆಯೊಂದಿಗೆ ರಾಜ್ಯಸರ್ಕಾರ ಅವ್ಯವಹಾರ ನಡೆಸುತ್ತಿದೆ. 3666 ಎಕರೆಗೂ ಹೆಚ್ಚು ಭೂಮಿಯನ್ನು ಕೇವಲ 1.45ಲಕ್ಷ ರೂ.ಗಳಿಗೆ ನೀಡುವ ಮೂಲಕ ರಾಜ್ಯಕ್ಕೆ ಲಕ್ಷ ಕೋಟಿ ಹಣ ನಷ್ಟ ವಾಗಲಿದೆ. ಈ ಮೂಲಕ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಈ ಕೂಡಲೇ ರಾಜ್ಯಸರ್ಕಾರ ತನ್ನ ಆದೇಶವನ್ನು ಹಿಂಪಡೆದು, ರೈತರ ಹಿತವನ್ನು ಕಾಯಬೇಕು ಎಂದು ಆಗ್ರಹಿಸಿದರು.
ಬಸವಣ್ಣನ ಪ್ರತಿಮೆ: ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚ ಬಾರದು, ಮತ ಯಂತ್ರದ ಬಗ್ಗೆ ದೇಶ- ವಿದೇಶ ಗಳಲ್ಲಿ ಅನುಮಾನ ವ್ಯಕ್ತವಾಗಿರುವುದ ರಿಂದ ಚುನಾವಣಾ ಆಯೋಗ ಅದರ ಸಾಚಾತನವನ್ನು ತಿಳಿಸಬೇಕು. ಕ್ರಾಂತಿ ಯೋಗಿ ಬಸವಣ್ಣನವರ 500 ಅಡಿ ಎತ್ತರದ ಪ್ರತಿಮೆ ಯನ್ನು ಕರ್ನಾಟಕದ ಯಾವುದಾದರೊಂದು ಸ್ಥಳದಲ್ಲಿ ಸ್ಥಾಪಿಸಬೇಕು. ಪಕ್ಷಾಂತರ ಕಾಯ್ದೆ ತಿದ್ದುಪಡಿಯಾಗಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.