ಮಂಡ್ಯ: ಮೈಷುಗರ್ ಕಾರ್ಖಾನೆಯ 2014- 15ನೇ ಸಾಲಿನ 81ನೇ ವಾರ್ಷಿಕ ಷೇರುದಾರರ ಆನ್‌ಲೈನ್ ಸಭೆಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಕರೆದಿರುವುದನ್ನು ರದ್ದುಪಡಿಸಿ ಮೌಖೀಕ, ಭೌತಿಕ ಸಭೆ ನಡೆಸಬೇಕು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಲಾಯಿತು.
ನಿರ್ಣಯ: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕಳೆದ ವರ್ಷ ಕೊರೊನಾ ಸಂದರ್ಭದಲ್ಲೂ ಆನ್‌ಲೈನ್ ಸಭೆ ಕರೆದಾಗಲೇ ನಾವು ವಿರೋಧಿಸಿದ್ದೆವು. ಈ ವರ್ಷ ಯಾವುದೇ ಕೊರೊನಾ ಇಲ್ಲ. ಆದ್ದರಿಂದ ಮೌಖೀಕ, ಭೌತಿಕ ಸಭೆ ಕರೆಯಬೇಕು ಎಂದು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ನ.3ರಂದು ನಿಗದಿಯಾಗಿರುವ ಸಭೆಯ ವಾರ್ಷಿಕ ಮಾಹಿತಿ ಪುಸ್ತಕದ ಆಹ್ವಾನ ಶೇ.95ರಷ್ಟು ಷೇರುದಾರರಿಗೆ ತಲುಪಿಲ್ಲ. ಆಹ್ವಾನ ಪುಸ್ತಕದಲ್ಲಿ ಸಮಗ್ರ ಮಾಹಿತಿ ಮುದ್ರಣವಾಗಿಲ್ಲ. ಆಗಿದ್ದರೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಣ ಮಾಡಲಾಗಿದೆ. ಭೌತಿಕ ಸಭೆಯನ್ನು ಮಂಡ್ಯದ ಮೈಷುಗರ್ ಕಾರ್ಖಾನೆ ಆವರಣದಲ್ಲಿಯೇ ನಡೆಸಬೇಕು. 7 ವರ್ಷದ ಆಡಿಟ್ ವರದಿಯೊಂದಿಗೆ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಎಚ್ಚರಿಕೆ: ಈಗ ನಿಗದಿ ಮಾಡಿರುವ ಆನ್‌ಲೈನ್ ಸಭೆಯನ್ನು ಕೂಡಲೇ ಮುಂದೂಡಬೇಕು. ಈ ಬಗ್ಗೆ ಸಕ್ಕರೆ ಸಚಿವರಿಗೆ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಒಂದು ಪಕ್ಷ ಆನ್‌ಲೈನ್ ಸಭೆ ನಡೆಸಿದರೆ ಕಂಪನಿ ಆವರಣದಲ್ಲಿಯೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪೂರ್ಣ ಪ್ರಮಾಣದಲ್ಲಿ ಸಕ್ಕರೆ ಕಾರ್ಖಾನೆ ಚಾಲನೆಯಾಗಲು ಕೆಲವು ಲೋಪದೋಷಗಳಿವೆ. ಅವುಗಳನ್ನು ನಿವಾರಿಸಬೇಕು. ಈಗಿರುವ ಕಬ್ಬು ನುರಿಸಲು ಕೋ-ಜನ್ ಸಾಮರ್ಥ್ಯವಿಲ್ಲ. ಪರ್ಯಾಯವಾಗಿ 10ರಿಂದ 15 ಮೆಗಾವ್ಯಾಟ್‌ನ ಟರ್ಬೈನ್ ಅಳವಡಿಸುವಂತೆ ಈಗಾಗಲೇ ಸರ್ಕಾರಕ್ಕೆ ಎಂಡಿ ಮನವಿ ಮಾಡಿದ್ದಾರೆ.
ಸರ್ಕಾರ ಅನುಷ್ಠಾನಕ್ಕೆ ತರಬೇಕು. ಕಬ್ಬು ವಿಭಾಗ ಪರಿಣಾಮಕಾರಿ ಕೆಲಸ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ, ಕಾರ್ಖಾನೆ ತಾಂತ್ರಿಕ ದೋಷ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ವಿರೋಧಿಸಿದ್ದೇವೆ: ರೈತ ನಾಯಕಿ ಸುನಂದಜಯರಾಂ ಮಾತನಾಡಿ, ಆನ್‌ಲೈನ್ ಸಭೆ ಮೂರ್ಖತನದ ಪರಮಾವಧಿ. ಈ ಬಗ್ಗೆ ಸಕ್ಕರೆ ಮಂತ್ರಿ, ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದ ಮೂಲಕ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆಂದರು. ಸರ್ಕಾರ ಘೋಷಣೆ ಮಾಡಿರುವಂತೆ 50 ಕೋಟಿ ರೂ. ಅನುದಾನ ಕಾರ್ಖಾನೆಗೆ ಇನ್ನೂ ಬಿಡುಗಡೆಯಾಗಿಲ್ಲ. ಜತೆಗೆ ಹೆಚ್ಚುವರಿ ಖರ್ಚು ವೆಚ್ಚ ಭರಿಸಲು ಹಣ ಬಿಡುಗಡೆ ಮಾಡಬೇಕು. ಆಗ ಮಾತ್ರ ಕಾರ್ಖಾನೆ ಲಾಭದಾಯಕವಾಗಿ ನಡೆಯಲು ಸಾಧ್ಯ. ಅಲ್ಲದೆ, ರೈತರ ಕಬ್ಬನ್ನು ಸಂಪೂರ್ಣವಾಗಿ ಅರೆಯಲು ಸಾಧ್ಯ. ನಮ್ಮ ಹೋರಾಟಕ್ಕೆ ಎಲ್ಲ ಸಂಘಟನೆಗಳು ಹಾಗೂ ರೈತ ಬಾಂಧವರು ಕೈಜೋಡಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ತಿಳಿಸಿದರು.
ರೈತಸಂಘ (ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಕೆ.ಬೋರಯ್ಯ, ಕೆ.ಎಸ್.ಸುಧಿಧೀರ್‌ಕುಮಾರ್, ಕೃಷ್ಣಪ್ರಕಾಶ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಸಿಐಟಿಯು ಸಿ.ಕುಮಾರಿ ಮತ್ತಿತರರಿದ್ದರು.