ಹೈದರಾಬಾದ್: ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಒಂಬತ್ತು ಜನ ವಲಸಿಗರು ಮೃತಪಟ್ಟಿರುವ ಘಟನೆ ವಾರಂಗಲ್ ಜಿಲ್ಲೆಯ ಗೊರೆಕುಂಟಾ ಗ್ರಾಮದಲ್ಲಿ ನಡೆದಿದೆ.
ಕೊರೆಕುಂಟಾ ಗ್ರಾಮದ ಕೋಲ್ಡ್ ಸ್ಟೋರೇಜ್ ಘಟಕದ ಪಕ್ಕದಲ್ಲಿರುವ ತೆರೆದ ಬಾವಿಯಲ್ಲಿ ಕುಟುಂಬದ ಆರು ಮಂದಿ ಸೇರಿ ಒಂಬತ್ತು ಜನರು ಸಾವನ್ನಪ್ಪಿದ್ದು, ಗುರುವಾರ ಸಂಜೆ ನಾಲ್ಕು ಶವಗಳು ಪತ್ತೆಯಾಗಿದ್ದರೆ, ಶುಕ್ರವಾರ ಬೆಳಗ್ಗೆ ಐದು ಶವಗಳು ಪತ್ತೆಯಾಗಿವೆ. ಮೃತಪಟ್ಟವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಪಶ್ಚಿಮ ಬಂಗಾಳ ಮೂಲದ ಮಕ್ಸೂದ್ ಆಲಂ ಮತ್ತು ಅವರ ಪತ್ನಿ ನಿಶಾ ಅವರು ಕಳೆದ 20 ವರ್ಷಗಳ ಹಿಂದೆ ಕಾರ್ಮಿಕರಾಗಿ ಕೆಲಸ ಮಾಡಲು ವಾರಂಗಲ್‌ಗೆ ಬಂದಿದ್ದರು. ತಮ್ಮ ಬದುಕಿಗಾಗಿ ಅವರು ಸೆಣಬಿನ ಚೀಲಗಳನ್ನು ಹೊಲಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತೆರೆದ ಬಾವಿಯಲ್ಲಿ ಆಲಂ ಅವರ ಪತ್ನಿ, ಮಗಳು, ಮೂರು ವರ್ಷದ ಮೊಮ್ಮಗ, ಪುತ್ರರಾದ ಸೊಹೈಲ್, ಶಬಾದ್, ಮತ್ತು ತ್ರಿಪುರದ ಶಕೀಲ್ ಅಹ್ಮದ್ ಹಾಗೂ ಬಿಹಾರ ಮೂಲದ ಶ್ರೀರಾಮ್, ಶ್ಯಾಮ್ ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಇವರೆಲ್ಲರೂ ಆತ್ಮಹತ್ಯೆಗೆ ಶರಣಾಗಿರಬಹುದೇ ಎಂಬುದನ್ನು ತಳ್ಳಿಹಾಕಿರುವ ಎಸಿಪಿ ಶ್ಯಾಮ್ ಸುಂದರ್, ಇದು ಆತ್ಮಹತ್ಯೆ ಆಗಿದ್ದರೆ, ಆರು ಜನ ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಬಹುದಿತ್ತು. ಆದರೆ, ಅವರೊಂದಿಗೆ ಇತರರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಹಲವು ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಆರು ಸದಸ್ಯರ ಕುಟುಂಬವು ಕರಿಮಾಬಾದ್‌ನ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿತ್ತು. ಲಾಕ್‌ಡೌನ್ ಬಳಿಕ ಅವರು ಸೆಣಬಿನ ಗಿರಣಿ ಮಾಲೀಕರಿಗೆ ಗೋದಾಮಿನಲ್ಲಿರುವ ಕೋಣೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ವಿನಂತಿಸಿದ್ದರು. ನೆಲಮಹಡಿಯಲ್ಲಿನ ಕೋಣೆಯಲ್ಲಿ ಆ ಕುಟುಂಬ ಇದ್ದರೆ, ಬಿಹಾರದ ಇಬ್ಬರು ಯುವಕರು ಮೊದಲ ಮಹಡಿಯಲ್ಲಿದ್ದರು. ಗಿರಣಿ ಮಾಲೀಕ ಎಸ್.ಭಾಸ್ಕರ್ ಅವರು ಗುರುವಾರ ಮಧ್ಯಾಹ್ನ ಆವರಣಕ್ಕೆ ಭೇಟಿ ನೀಡಿದಾಗ ಕುಟುಂಬದ ಸದಸ್ಯರು ಮತ್ತು ಇತರೆ ಮೂವರು ನಾಪತ್ತೆಯಾಗಿರುವುದು ಕಂಡುಬಂದಿದೆ. ಆ ಬಳಿಕ ಈ ಸಾವುಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.