Advertisement

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ : ಕಾರಣ ಇನ್ನೂ ನಿಗೂಢ

08:10 AM May 05, 2018 | Karthik A |

ಕಾಸರಗೋಡು: ದೇಲಂಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಡಪರಂಬ ಮಾಟೆಕುಂಜದ ಮನೆಯಲ್ಲಿ ಪಿಕುಂಜ ನಿವಾಸಿ ಕಣ್ಣ ಮಣಿಯಾಣಿ – ಯಶೋದಾ ದಂಪತಿಯ ಪುತ್ರ ರಾಧಾಕೃಷ್ಣ (39), ಪತ್ನಿ ಪ್ರಸೀದಾ(33), ಮಕ್ಕಳಾದ ಕಾಶೀನಾಥ್‌(5) ಮತ್ತು ಶಬರೀನಾಥ್‌(3) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಡೀ ಕುಟುಂಬ ಸದಸ್ಯರು ಇಂಥ ಕೃತ್ಯ ನಡೆಸಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗದೆ, ಪ್ರಕರಣ ನಿಗೂಢವಾಗಿಯೇ ಇದೆ. 

Advertisement

ಪಿಕುಂಜದ ತರವಾಡು ಮನೆಯಿಂದ ಕೆಲವೇ ದೂರದಲ್ಲಿ ರಾಧಾಕೃಷ್ಣ ಸಣ್ಣ ಮನೆಯೊಂದನ್ನು ನಿರ್ಮಿಸಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮೇ 3 ರಂದು ರಾತ್ರಿ ಸುಮಾರು 7 ಗಂಟೆಗೆ ಅವರ ಮನೆಯಿಂದ ಬೆಳಕು ಕಂಡು ಬಂದಿರಲಿಲ್ಲ. ಮನೆ ನಿಶ್ಶಬ್ದವಾಗಿತ್ತು. ಇದರಿಂದ ರಾಧಾಕೃಷ್ಣ ಅವರ ಸಹೋದರ ಉದಯ ಅವರು ಹೋಗಿ ನೋಡಿದಾಗ ಮನೆಯವರೆಲ್ಲರೂ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದರು. ಕೂಡಲೇ  ಅವರು ಪರಿಸರದವರಿಗೆ ವಿಷಯ ತಿಳಿಸಿದರು. ಮಾಹಿತಿ ಲಭಿಸಿದ ಆದೂರು ಪೊಲೀಸರು, ವಿದ್ಯಾನಗರ ಸಿ.ಐ. ಬಾಬು ಪೆರಿಂಙೊàತ್‌, ಡಿವೈಎಸ್‌ಪಿ ಸುಕುಮಾರನ್‌ ಮೊದಲಾದವರು ಸ್ಥಳಕ್ಕೆ ಧಾವಿಸಿ  ಮನೆಗೆ ಕಾವಲು ಏರ್ಪಡಿಸಿದರು.


ರಾಧಾಕೃಷ್ಣ ಅವರ ಸಹೋದರ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಾವಿಗೀಡಾದ ರಾಧಾಕೃಷ್ಣ ಅವರು ತಂದೆ, ತಾಯಿ, ಸಹೋದರರಾದ ಉದಯ, ಸಂಜೀವ, ಸಹೋದರಿ ಪ್ರೇಮಾ ಅವರನ್ನು ಅಗಲಿದ್ದಾರೆ. ಬಂದಡ್ಕ ಬಳಿಯ ಪಾಲಾರ್‌ ನಿವಾಸಿಯಾದ ದಿ| ಕೊಟ್ಟನ್‌ ಮಣಿಯಾಣಿ ಅವರ ಪುತ್ರಿಯಾದ ಪ್ರಸೀದಾ ಅವರು ತಾಯಿ ಯಶೋದಾ, ಸಹೋದರ – ಸಹೋದರಿಯರಾದ ಪ್ರದೀಪಾ, ಜಯಶ್ರೀ, ಶಾರದಾ  ಅವರನ್ನು ಅಗಲಿದ್ದಾರೆ.

ಮೊದಲು ತಾಯಿ ಮಕ್ಕಳು ಆತ್ಮಹತ್ಯೆ?
ಇಡೀ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದರ ಹಿಂದಿನ ಕಾರಣ ಇನ್ನೂ  ತಿಳಿದು ಬಂದಿಲ್ಲ. ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ರಾಧಾಕೃಷ್ಣ ಅವರು ಗುರುವಾರ ಸಂಜೆ 4 ಗಂಟೆಗೆ ಪೇಟೆಗೆಂದು ಮನೆಯಿಂದ ಹೋಗಿದ್ದರೆನ್ನಲಾಗಿದೆ. 5.30ರ ವೇಳೆಗೆ ಮಕ್ಕಳು ಮನೆ ಮುಂದೆ  ಆಡುತ್ತಿದ್ದುದನ್ನು ಕಂಡವರಿದ್ದಾರೆ. ಪೇಟೆಗೆ ಹೋಗಿದ್ದ ರಾಧಾಕೃಷ್ಣ 6.30ರ ವೇಳೆ ಮನೆಗೆ ಬಂದಿರುವುದಾಗಿಯೂ ಹೇಳಲಾಗಿದೆ. ರಾತ್ರಿ 7 ಗಂಟೆಗೆ ದಂಪತಿ ಹಾಗೂ ಮಕ್ಕಳು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾಧಾಕೃಷ್ಣ ಮನೆಗೆ ಬಂದಾಗ ಪತ್ನಿ ಪ್ರಸೀದಾ ಮತ್ತು ಮಕ್ಕಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅದನ್ನು ಕಂಡು ರಾಧಾಕೃಷ್ಣ ಕೂಡ ಸಾವಿಗೆ ಶರಣಾದರೇ ಎಂಬ ಶಂಕೆಯೂ ಹುಟ್ಟಿಕೊಂಡಿದೆ.

Advertisement


ಶೋಕಸಾಗರ

ಮಾಟೆ ಪಿಕುಂಜದಲ್ಲಿ ದಂಪತಿ ಹಾಗೂ ಇಬ್ಬರು ಪುಟ್ಟ ಮಕ್ಕಳ ಸಾವಿನಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಕುಟುಂಬ ಸಾವಿನ ಕುರಿತು ತಿಳಿದು ನೂರಾರು ಮಂದಿ ಮನೆಯತ್ತ ತಲುಪಿದ್ದಾರೆ.

ಆರ್ಥಿಕ ಅಡಚಣೆ ಕಾರಣ?
2012 ಜನವರಿ 6ರಂದು ರಾಧಾಕೃಷ್ಣ ಹಾಗೂ ಪ್ರಸೀದಾ ಅವರ ವಿವಾಹ ನಡೆದಿತ್ತು. ಆ ಸಂದರ್ಭದಲ್ಲಿ ರಾಧಾಕೃಷ್ಣ ಆರ್ಥಿಕವಾಗಿ ಸಂದಿಗ್ಧತೆಯಲ್ಲಿದ್ದು, ಭಾರೀ ಸಾಲ ಮಾಡಿದ್ದರೆನ್ನಲಾಗಿದೆ. ಯಂತ್ರದ ಮೂಲಕ ಕಾಡು ಕತ್ತರಿಸುವ ಕೆಲಸವನ್ನು ಇವರು ನಿರ್ವಹಿಸುತ್ತಿದ್ದರು. ರಾಧಾಕೃಷ್ಣ ಅವರಿಗೆ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ಕುಟುಂಬದವರು ಸೇರಿ ಸಾಲ ತೀರಿಸಿದ್ದರು ಎನ್ನಲಾಗುತ್ತಿದೆ. 

ತಜ್ಞರ ತಂಡ ಆಗಮನ
ಶುಕ್ರವಾರ ಬೆಳಗ್ಗೆ ಆದೂರು ಸಿ.ಐ. ಎಂ.ಎ.ಮ್ಯಾಥ್ಯೂ, ಹೊಸದುರ್ಗ ತಹಶೀಲ್ದಾರ್‌ ನೇತೃತ್ವದಲ್ಲಿ ಮೃತ ದೇಹಗಳ ಮಹಜರು ನಡೆಸಿದ ಬಳಿಕ ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಕಣ್ಣೂರಿನಿಂದ ಫಾರೆನ್ಸಿಕ್‌ ತಜ್ಞರು ತಲುಪಿದ್ದು, ಸಮಗ್ರ ತನಿಖೆ ಆರಂಭಿಸಿದ್ದಾರೆ. 

ಪತ್ನಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದರು!
ರಾಧಾಕೃಷ್ಣರಿಗೆ ಸ್ಪಲ್ಪ ಮದ್ಯಪಾನದ ಹವ್ಯಾಸವೂ ಇತ್ತು. ನಿತ್ಯ ಮದ್ಯ ಸೇವಿಸುತ್ತಿದ್ದ ಇವರು ವಿಷು ಬಳಿಕ ಕೆಲಸಕ್ಕೆ ಹೋಗಿಲ್ಲ ಎನ್ನಲಾಗಿದೆ. ಅವರನ್ನು ಮದ್ಯಪಾನದಿಂದ ದೂರವಿರಿಸಲು ಪತ್ನಿ ಪ್ರಯತ್ನಿಸಿದ್ದರು. ಆದರೆ  ಫ‌ಲ ಸಿಕ್ಕಿರಲಿಲ್ಲ. ನೀವು ಇದೇ ರೀತಿ ಮದ್ಯಪಾನ ಮುಂದುವರಿಸಿದರೆ ತಾನು ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಸೀದಾ ಬೆದರಿಕೆಯೊಡ್ಡಿರುವುದಾಗಿಯೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅದು  ರಾಧಾಕೃಷ್ಣನ ಸಾವಿಗೂ ಕಾರಣವಾಯಿತೇ ಎಂಬ ಶಂಕೆ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next