ನ್ಯೂಯಾರ್ಕ್: ಎರಡು ದಿನಗಳ ಹಿಂದೆ ಅಮೆರಿಕದ ಉಟಾಹ್ ಮರುಭೂಮಿಯಲ್ಲಿ ನಿಗೂಢವಾಗಿ ಪ್ರತ್ಯಕ್ಷವಾದ ಅಖಂಡ ಏಕ ಲೋಹ ಸ್ಮಾರಕ ಈಗ ದಿಢೀರನೆ ಕಣ್ಮರೆಯಾಗಿದ್ದು, ಹಲವು ಸಂಶಯಗಳಿಗೆ ಪುಷ್ಟಿ ನೀಡಿದೆ.
12 ಅಡಿ ಉದ್ದದ ಈ ಅಖಂಡ ಲೋಹಾಕೃತಿಯನ್ನು ಏಲಿಯನ್ಸ್ (ಅನ್ಯಗ್ರಹ ಜೀವಿ)ಗಳೇ ಇಲ್ಲಿ ರಹಸ್ಯವಾಗಿ ಸ್ಥಾಪಿಸಿವೆ ಎಂದು ಕೆಲವರು ವಾದಿಸಿದ್ದರು. ಈಗ ಇದು ದಿಢೀರನೆ ಕಣ್ಮರೆಯಾಗಿರುವುದನ್ನು ನೋಡಿ, ಮತ್ತೆ ಅನ್ಯಗ್ರಹದ ಜೀವಿಗಳು ಧರೆಗೆ ಮರಳಿ, ಅಖಂಡ ಲೋಹವನ್ನು ಹೊತ್ತೂಯ್ದಿವೆ ಎಂದು ತರ್ಕಿಸುತ್ತಿದ್ದಾರೆ.
“ಸರ್ಕಾರಿ ನಿರ್ವಹಣೆಯ ಸಾರ್ವಜನಿಕ ಭೂಮಿಯಲ್ಲಿ ಯಾವುದೇ ವಸ್ತು ಸ್ಥಾಪಿಸುವುದು ಕಾನೂನುಬಾಹಿರ. ನೀವು ಯಾವುದೇ ಗ್ರಹವಾಗಿರಲಿ, ಅದು ತಪ್ಪು ತಪ್ಪೇ’ ಎಂದು ಉಟಾಹ್ ದ ಸಾರ್ವಜನಿಕ ಸುರಕ್ಷಾ ವಿಭಾಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಈ ಕೃತ್ಯ ಏಲಿಯನ್ಸ್‌ಗಳದ್ದೇ ಇರಬೇಕು’ ಎಂಬ ಊಹೆಗೆ ಬಲ ತುಂಬಿತ್ತು.
ಮೃತಶಿಲ್ಪಿಯ ಕೈವಾಡ?: ಮತ್ತೆ ಕೆಲವರು ಮೃತಶಿಲ್ಪಿ, ಸೈ-ಫೈ ಕಲಾವಿದ ಜಾನ್ ಮ್ಯಾಕ್‌ಕ್ರ್ಯಾಕನ್ ಇದನ್ನು ಸೃಷ್ಟಿಸಿರಬಹುದು ಎಂದೂ ಕಲ್ಪಿಸಿದ್ದಾರೆ. ಮ್ಯಾಕ್‌ಕ್ರ್ಯಾಕನ್ ಕಲಾಕೃತಿಗಳು ಕೂಡ ಇದೇ ಮಾದರಿ ಯಲ್ಲಿಯೇ ರಚನೆಗೊಳ್ಳುತ್ತಿದ್ದವು.
ದಿಢೀರ್ ಕಣ್ಮರೆ: ಅಟಾಹ್ ಆಡಳಿತ ನೇಮಿಸಿದ್ದ ತನಿಖಾ ತಂಡ ಈ ಬಗ್ಗೆ ವಿಚಾರಣೆ ಕೈಗೆತ್ತಿ ಕೊಳ್ಳುತ್ತಿದ್ದಂತೆಯೇ ಮರು ಭೂಮಿಯಿಂದ ಅಖಂಡ ಲೋಹ ಕಣ್ಮರೆಯಾಗಿದೆ. “ಅಪರಿಚಿತರ ಗುಂಪು ರಾತ್ರೋರಾತ್ರಿ ಈ ಲೋಹವನ್ನು ತೆಗೆದುಹಾಕಿರುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಏಲಿಯನ್ಸ್‌ಗಳು ಮರಳಿ ಬಂದು, ಭೂಮಿಯ ಮತ್ತೂಂದೆಡೆ ಇದನ್ನು ಸ್ಥಾಪಿಸಿರಬಹುದು’ ಎಂದು ಕೆಲವರು ವಾದ ಆರಂಭಿಸಿದ್ದಾರೆ.