ಮಂಜೇಶ್ವರ: ಗಾಂಜಾ ಸೇದಿ ಬೊಬ್ಬಿಟ್ಟ ಎಂಬ ಆರೋಪದಂತೆ ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡು ಸಂಬಂಧಿಕನೊಂದಿಗೆ ತೆರಳಿದ ಆರೋಪಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮೀಯಪದವು ಮನಕ್ಕಳದ ಅಬ್ದುಲ್ಲ ಅವರ ಪುತ್ರ ಮೊದೀನ್ ಆರಿಫ್(22) ಸಾವಿಗೆ ಸಂಬಂಧಿಸಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಂಭೀರವಾದ ಹಲ್ಲೆಯೇ ಮೊದೀನ್ ಆರಿಫ್ ಅವರ ಸಾವಿಗೆ ಕಾರಣವೆಂದು ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಪೂರ್ಣ ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಸೇವಿಸಿ ಬೊಬ್ಬಿಡುತ್ತಿದ್ದಾನೆಂಬ ಬಗ್ಗೆ ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿತ್ಯವಾರ ರಾತ್ರಿ ಮೊದೀನ್ ಆರಿಫ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಆತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಸಂಬಂಧಿಕನೊಬ್ಬನ ಜೊತೆ ಮನೆಗೆ ತೆರಳಿದ್ದರು. ಆದರೆ ಸೋಮವಾರ ಬೆಳಗ್ಗೆ ರಕ್ತ ವಾಂತಿ ಮಾಡಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮೊದೀನ್ ಆರಿಫ್‌ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿತ್ತು. ಮನೆಗೆ ತಲುಪಿಸಿದ ಮೃತದೇಹದಲ್ಲಿ ಹಲ್ಲೆಯ ಗಾಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಾವಿಗೆ ಕಾರಣ ಹಲ್ಲೆಯಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ ಬಳಿಕ ಸಮಗ್ರ ಮರಣೋತ್ತರ ಪರೀಕ್ಷೆಗೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಇದೇ ವೇಳೆ ಪೊಲೀಸರು ಹಲ್ಲೆ ಮಾಡಿದ್ದರಿಂದ ಮೊದೀನ್ ಸಾವಿಗೀಡಾಗಿರುವುದಾಗಿ ನಾಗರಿಕರು ಆರೋಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ ಪೊಲೀಸರು ಜಾಮೀನಿನಲ್ಲಿ ಯುವಕನನ್ನು ಕರೆದೊಯ್ದವರು ಹಲ್ಲೆ ಮಾಡಿದ್ದರಿಂದ ಯುವಕ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಹಿನ್ನೆಲೆಯಲ್ಲಿ ಜಾಮೀನಿನಲ್ಲಿ ಕೊಂಡೊಯ್ದ ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗಿದೆ. ಸಾಕಷ್ಟು ಮಾಹಿತಿ ಲಭಿಸಿದೆ. ಸಮಗ್ರ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.