ಮೈಸೂರು: ಮೈಸೂರು ಅರಸರ ಆಳ್ವಿಕೆಗೆ ಸಾಕ್ಷಿಯಾಗಿರುವ ಮೈಸೂರಿನ ಪರಂಪರೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ನಿಧಿ ಶೋಧ(ಟ್ರಷರ್ ಹಂಟ್) ಆಟಕ್ಕೆ ಬುಧವಾರ ಚಾಲನೆ ದೊರೆಯಿತು.
ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಸಮಿತಿ ಹಾಗೂ ದ್ವಿಜ ಕನ್ಸ್‌ರ್ವೇಷನ್ ಸೊಸೈಟಿ ಆಫ್ ಆರ್ಟ್ಸ್ ಮತ್ತು ಕಲ್ಚರಲ್ ಹೆರಿಟೇಜ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ನಡೆದ ನಿಧಿಶೋಧ ಆಟದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಮೈಸೂರಿನ ಭವ್ಯ ಪರಂಪರೆ ತಿಳಿದುಕೊಂಡರು.
ವಿವಿಧ ರಾಜ್ಯದ ಸ್ಪರ್ಧಿಗಳು: ಮೈಸೂರು-ಬೆಂಗಳೂರು ಮಾತ್ರವಲ್ಲದೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ವೆಸ್ಟ್ ಬೆಂಗಾಲ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿ 15 ತಂಡಗಳಲ್ಲಿ ಆಟವಾಡಿದರು. ಆಟೋಮೊಬೈಲ್ಸ್, ಹೋಟೆಲ್, ವಿದ್ಯಾರ್ಥಿ, ಮುಕ್ತ ವಿಭಾಗದಲ್ಲಿ ನಡೆದ ನಿಧಿಶೋಧ ಆಟ ನಾಲ್ಕು ಕೀಲೋಮೀಟರ್ ವ್ಯಾಪ್ತಿಯಲ್ಲಿ ನಡೆಯಿತು.
ನಿಧಿಶೋಧ ಆಟದಲ್ಲಿ ಪಾಲ್ಗೊಂಡ ಸ್ಪರ್ಧಿಗಳಿಗೆ ಆರಂಭದಲ್ಲಿ ಅರಮನೆಯ ಬಲರಾಮ ದ್ವಾರದಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ನಿಧಿಶೋಧ ನಡೆಯಲಿದೆ ಎಂಬ ಸುಳಿವು ನೀಡಲಾಯಿತು. ಅದರಂತೆ ಸುಳಿವು, ಕಥೆ, ಸಂಗೀತ, ಚಿತ್ರ, ಒಗಟು, ರಹಸ್ಯವಾದ ಸಂಕೇತಗಳನ್ನು ಸ್ಪರ್ಧಿಗಳಿಗೆ ಸುಳಿವಾಗಿ ನೀಡಲಾಯಿತು. ಈ ಸುಳಿವನ್ನು ಅರ್ಥ ಮಾಡಿಕೊಂಡು ಕೋಟೆ ಆಂಜನೇಯಸ್ವಾಮಿ ದ್ವಾರದಿಂದ ನಿಧಿಯ ಪತ್ತೆಕಾರ್ಯ ಆರಂಭಿಸಿ ಸ್ಪರ್ಧಿಗಳು ಹೊರಟರು. ಸುಳಿವಿನ ಜಾಡು ಹಿಡಿದು ಹೊರಟ ಸ್ಪರ್ಧಿಗಳಿಗೆ ಓಪನ್ ಜೀಪ್ ನೀಡಲಾಗಿತ್ತು.
ನಿಧಿಶೋಧ ಆಟಕ್ಕೆ ಚಾಲನೆ: ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್.ಪಿ.ಜನಾರ್ದನ್ ನಿಧಿಶೋಧ ಆಟಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರಿನ ಪಾರಂಪರಿಕ ಕಟ್ಟಡಗಳ ಮಹತ್ವ ಆಟದ ಮೂಲಕ ತಿಳಿಸಿಕೊಡುವ ಉದ್ದೇಶದಿಂದ ಈ ಆಟ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ 200 ಪಾರಂಪರಿಕೆ ಕಟ್ಟಡಗಳಿದ್ದು, 50 ಪಾರಂಪರಿಕ ಕಟ್ಟಡಗಳನ್ನು ಆಟಕ್ಕೆ ಬಳಸಿಕೊಳ್ಳಲಾಗಿದೆ ಎಂದರು. ದ್ವಿಜ ಕನ್ಸ್‌ರ್ವೇಷನ್ ಸೊಸೈಟಿ ಆಫ್ ಆರ್ಟ್ಸ್ ಮತ್ತು ಕಲ್ಚರಲ್ ಹೆರಿಟೇಜ್ ಸಂಸ್ಥೆ ನಿರ್ದೇಶಕ ಗಿರೀಶ್ ಕೋಟಿ ಹಾಜರಿದ್ದರು.
ಎಲ್ಲೆಲ್ಲಿ ಹುಡುಕಾಟ: ನಿಧಿಶೋಧದ ಹುಡುಕಾಟ ನಡೆಸಿದ ಸ್ಪರ್ಧಿಗಳು ಜಗನ್ಮೋಹನ ಅರಮನೆ , ನಂದಿ, ಲಕ್ಷಿದೇವಸ್ಥಾನ, ದೇವರಾಜ ಮಾರುಕಟ್ಟೆ, ನೈಸರ್ಗಿಕ ವಸ್ತು ಸಂಗ್ರಹಾಲಯ, ವಿಶ್ವವಿದ್ಯಾಲಯ ವಸ್ತು ಸಂಗ್ರಹಾಲಯ, ಕುಕ್ಕರಹಳ್ಳಿ ಕೆರೆ, ವಸಂತ ಮಹಲ್, ಗಡಿಯಾರ ಗೋಪುರ, ಸಂಗ್ರಹಾಲಯ, ದೇವಸ್ಥಾನ, ನಾರಾಯಣ್ ಚಾಮುಂಡೇಶ್ವರಿ ದೇವಸ್ಥಾನ, ಜಯಲಕ್ಷಿ ವಿಲಾಸ ಅರಮನೆ,
ಚೆಲುವಾಂಬ ಪ್ಯಾಲೇಸ್, ಜಯಚಾಮರಾಜೇಂದ್ರ ಆರ್ಟ್ ಮೃಗಾಲಯ, ಫಿಲೋಮಿನಾ ಚಾಮುಂಡೇಶ್ವರಿ ಅತಿಥಿಗೃಹ, ಓರಿಯಂಟಲ್ ರಿಸರ್ಚ್ ಸಂಸ್ಥೆ, ಮರಿಮಲ್ಲಪ್ಪ ಹೈಸ್ಕೂಲ್, ಹಾಡ್ವಿìಕ್ ಹೈಸ್ಕೂಲ್, ಮಹಾರಾಜ ಕಾಲೇಜ್ ಮಹಾರಾಣಿ ಕಾಲೇಜ್, ಕಮಿಷನರ್ ಆಫೀಸ್, ಮೈಸೂರು ಮೆಡಿಕಲ್ ಕಾಲೇಜ್, ಕೃಷ್ಣರಾಜೇಂದ್ರ ಆಸ್ಪತ್ರೆ, ಟೌನ್‌ಹಾಲ್, ಡಿ.ಬನುಮಯ್ನಾಸ್ ಕಾಲೇಜು ಇತರೆಡೆಗಳಲ್ಲಿ ನಿಧಿ ಶೋಧನೆ ಮಾಡಿದರು.